ಕನಕಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ವಿಭಾಗದ ಕನಕಪುರ ಘಟಕದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಕನಕಪುರದಿಂದ ಚಿಕ್ಕ ಮುದುವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇದಾರ ದೊಡ್ಡಿ ಗ್ರಾಮಕ್ಕೆ ಇಂದಿನಿಂದ ಬಸ್ಸೊಂದನ್ನು ಬಿಡಲಾಗಿದೆ.
ಸೋಮವಾರ ಬೆಳಗ್ಗೆ ಬಸ್ ಗ್ರಾಮಕ್ಕೆ ಬರುತ್ತಿದ್ದಂತೆ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಬಸ್‌ಗೆ ಪೂಜೆ ಸಲ್ಲಿಸಿ ಬಳಿಕ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಗ್ರಾಮಸ್ಥರು, ನಮ್ಮ ಗ್ರಾಮಕ್ಕೆ ಹಲವು ವರ್ಷಗಳಿಂದ ಬಸ್ ಬರುತ್ತಿರಲಿಲ್ಲ, ಇದರಿಂದ ಗ್ರಾಮದಿಂದ ಬೇರೆಡೆಗೆ ಶಾಲೆ, ಕಾಲೇಜುಗಳೀಗೆ ಹೋಗಿ ಬರುವುದಕ್ಕೆ ವಿದ್ಯಾರ್ಥಿಗಳಿಗೆ ತುಂಬ ತೊಂದರೆ ಆಗುತ್ತಿತ್ತು. ಈಗ ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು ನಮ್ಮ ಗ್ರಾಮಕ್ಕೆ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಮೂರು ಟೈಂ ಬಸ್ ಬಂದರೆ ಅನುಕೂಲವಾಗುತ್ತದೆ. ನಮ್ಮ ಗ್ರಾಮದವರು ತಾಲೂಕು ಕೇಂದ್ರಕ್ಕೆ ಕೆಲಸದ ನಿಮಿತ್ತ ಹೋಗಿ ಬರುವುದಕ್ಕೂ ಅನುಕೂಲವಾಗುತ್ತದೆ ಎಂದು ಖುಷಿ ಹಂಚಿಕೊಂಡು ನಿಗಮದ ಅಧಿಕಾರಿಗಳಿಗೆ ಅದರಲ್ಲೂ ಕನಕಪುರ ಘಟಕ ವ್ಯವಸ್ಥಾಪಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅಲ್ಲದೆ ಈವರೆಗೂ ಬಸ್ ಸೌಕರ್ಯ ಇಲ್ಲದ ಕಡೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೆಳಗ್ಗೆ ಮತ್ತು ಸಂಜೆ ಬಸ್ ಸೌಕರ್ಯವನ್ನು ಕಲ್ಪಿಸಿಕೊಟ್ಟಿರುವುದು ಉತ್ತಮ ಬೆಳವಣಿಗೆ ಈ ಬಸ್ ನಿಲ್ಲದಂತೆ ಘಟಕ ವ್ಯವಸ್ಥಾಪಕರು ಕಾಳಜಿ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.