
ಕೆ.ಆರ್.ಪೇಟೆ: ವಿದ್ಯಾರ್ಥಿಗಳು ಶ್ರದ್ಧಾಯಿಂದ ವ್ಯಾಸಂಗ ಮಾಡಿ ಸಾಧನೆ ಮಾಡಬೇಕು. ಶಿಸ್ತು, ಸಂಯಮ, ವಿನಯವಂತಿಕೆ ಹಾಗೂ ಸೇವಾ ಮನೋಭಾವನೆಯು ಜೀವನದ ಉಸಿರಾಗಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.
ಕೆ.ಆರ್.ಪೇಟೆಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ, ಸಾಂಸ್ಕೃತಿಕ, ಕ್ರೀಡಾ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಎಸ್.ಎಸ್ ಹಾಗೂ ರೆಡ್ ಕ್ರಾಸ್ ಸಮಿತಿಗಳ ವಾರ್ಷಿಕ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ವರದಾನವಾಗಿವೆ. ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವವು ಸಮಗ್ರವಾಗಿ ವಿಕಾಸವಾಗುವುದರಿಂದ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಕೆ.ಪಿ.ಪ್ರತಿಮಾ ಮಾತನಾಡಿ, ಕಾಲೇಜಿನ ಶೈಕ್ಷಣಿಕ ಮತ್ತು ಸಹಪಾಠಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ನಿರಂತರ ಭಾಗವಹಿಸುವಿಕೆಯನ್ನು ಪ್ರಶಂಸಿಸಿದರು. ಮುಂದಿನ ದಿನಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಮಿಡಿ ಕಿಲಾಡಿಯ ಕೋಳಿಕಳ್ಳ ಖ್ಯಾತಿಯ ಹಾಸ್ಯನಟ ಮನೋಹರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮನೋರಂಜನೆಯ ಜತೆಗೆ ಸೊಗಸಾದ ಸಂದೇಶ ನೀಡಿ ತಮ್ಮ ವಿಶೇಷ ಭಾಷಣದಿಂದ ಕಾರ್ಯಕ್ರಮವನ್ನು ಹರ್ಷಭರಿತವಾಗಿಸಿದರು.
ಕಾರ್ಯಕ್ರಮದ ಆರಂಭದಲ್ಲಿ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಪ್ರೊ.ವಿನಯ್ ಕುಮಾರ್ ಅವರು ಪ್ರಾಸ್ತಾವಿಕ ನುಡಿಯಿಂದ ಕಾರ್ಯಕ್ರಮದ ಗಂಭೀರತೆಗೆ ಬೆಳಕು ಚೆಲ್ಲಿದರು. ಪ್ರೊ.ಮಧು ಜಿ.(IQAC ಸಂಚಾಲಕರು) ಸ್ವಾಗತಿಸಿದರೆ, ವಿದ್ಯಾರ್ಥಿನಿಯರಾದ ನಿತ್ಯ ಹಾಗೂ ಪ್ರೀತಿ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್ ಸಂಚಾಲಕರಾದ ಚೂಡಲಿಂಗಯ್ಯ ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳ ಕಲಾ ಕೌಶಲ್ಯಗಳನ್ನು ತೋರಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನೆರವೇರಿತು. ಪ್ರಾಧ್ಯಾಪಕರಾದ ಕೃಷ್ಣಮೂರ್ತಿ ಎನ್.ಟಿ.ದಿನೇಶ್, ಎಂ.ವಿ. ಮಹದೇವ, ಆದರ್ಶ.ಕೆ.ಎನ್, ಚೇತನ್ ಕುಮಾರ್, ಕಿರಣ್ ಎಸ್, ನಪೀಸ ನಾಯಕವಾಡಿ, ವಿನೋದ್, ಪುಟ್ಟಮಾದಪ್ಪ, ಶ್ಯಾಮ್, ಚಂದ್ರು, ನಾಗೇಶ್ ಉಪಸ್ಥಿತರಿದ್ದರು.
Related









