ಸಿವಿಲ್ ನ್ಯಾಯಾಧೀಶರಾಗಲು ಕನಿಷ್ಠ ಮೂರು ವರ್ಷ ವಕೀಲ ವೃತ್ತಿ ಅನುಭವ ಕಡ್ಡಾಯ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು


ನ್ಯೂಡೆಲ್ಲಿ: ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಪರೀಕ್ಷೆ ಬರೆಯಲು ಅಭ್ಯರ್ಥಿಯಾಗುವುದಕ್ಕೆ ಮೂರು ವರ್ಷ ವಕೀಲರಾಗಿ ಸೇವೆ ಸಲ್ಲಿಸುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯ ಮೂರ್ತಿಗಳಾದ ಬಿ.ಆರ್.ಗವಾಯಿ, ನ್ಯಾಯಮೂರ್ತಿ ಎ.ಜಿ.ಮಸಿಹ್ ಹಾಗೂ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ಮಂಗಳವಾರ (ಮೇ 20ರಂದು) ಈ ಆದೇಶ ಹೊರಡಿಸಿದೆ.
ಪ್ರಸ್ತುತ ಕಾನೂನು ಪದವಿಧರರನ್ನು ನೇರವಾಗಿ ನ್ಯಾಯಧೀಶರಾಗಿ ನೇಮಿಸುವುದುಕ್ಕೆ ಅವಕಾಶವಿದೆ. ಹೀಗೆ ಕಾನೂನು ಪದವಿ ಪಡೆದ ಕೂಡಲೆ ಸಿವಿನ್ ನ್ಯಾಯಾಧೀಶರ ಹುದ್ದೆಗೆ ಪರೀಕ್ಷೆ ಮೂಲಕ ನೇಮಕಗೊಳ್ಳುತ್ತಿರುವುದರಿಂದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಕನಿಷ್ಠ ಮೂರು ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವುದು ಮುಖ್ಯವಾಗಿದೆ ಎಂದು ನ್ಯಾಯಪೀಠವು ತಿಳಿಸಿದೆ.
ಇನ್ನು ಸಿವಿಲ್ ನ್ಯಾಯಾಧೀಶರ (ಜೂನಿಯರ್ ವಿಭಾಗ) ಪರೀಕ್ಷೆಗೆ ಹಾಜರಾಗಲು ಕನಿಷ್ಠ ಮೂರು ವರ್ಷಗಳ ಕಾಲ ವಕೀಲರಾಗಿ ಅನುಭವ ಹೊಂದಿರಬೇಕು ಎಂಬ ನಿಯಮವನ್ನು ಮತ್ತೆ ಆರಂಭಿಸಬೇಕು ಎಂದು ನ್ಯಾಯಪೀಠ ಆದೇಶಿಸಿದ್ದು, ಜತೆಗೆ ಇದು ಪ್ರಸ್ತುತ ನಡೆಯುತ್ತಿರುವ ನ್ಯಾಯಾಂಗ ನೇಮಕಾತಿಗೆ ಅನ್ವಯಿಸುವುದಿಲ್ಲ ಎಂದೂ ಕೂಡ ಸ್ಪಷ್ಟಪಡಿಸಿದೆ.
ಅಲ್ಲದೆ ಹೈಕೋರ್ಟ್‌ಗಳು ಪ್ರಸ್ತುತ ನಡೆಸುತ್ತಿರುವ ಸಿವಿಲ್ ನ್ಯಾಯಾಧೀಶರ (ಜೂನಿಯರ್ ವಿಭಾಗ) ನೇಮಕಾತಿ ಪ್ರಕ್ರಿಯೆಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ತಿಳಿಸಿರುವ ನ್ಯಾಯಪೀಠ ಈ ಬಾರಿಯ ನೇಮಕಾತಿ ಪರೀಕ್ಷೆ ಹೊರತುಪಡಿಸಿ ಮುಂದಿನ ನೇಮಕಾತಿ ಪ್ರಕ್ರಿಯೆ ಆರಂಭಿಸಿದಾಗ ಮೂರು ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿರುವವರನ್ನು ಅಭ್ಯರ್ಥಿಗಳಾಗಿಸುವುದು ಕಡ್ಡಾಯ ಎಂದು ಆದೇಶ ನೀಡಿದೆ.
Related








