CRIMENEWSಕೃಷಿ

ವರುಣನ ಆರ್ಭಟಕ್ಕೆ ರಾಜ್ಯದಲ್ಲಿ ಐವರು ಬಲಿ: ಮನೆಗೆ ನುಗ್ಗಿದ ನೀರು- ನಿದ್ದೆಗೆಟ್ಟ ನಿವಾಸಿಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 36 ಗಂಟೆಗಳಿಂದ ಸುರಿಯುತ್ತಿರುವ ಭಾರೀ ಮಳೆ ಮಂಗಳವಾರವೂ ಮುಂದುವರಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತಿದ್ದು, ಕೆಲವೆಡೆ ಮನೆಗಳಿಗೆ ನೀರುನುಗ್ಗಿ ಅವಾಂತರ ಸೃಷ್ಟಿಸಿದರೆ ಇನ್ನೂ ಹಲವೆಡೆ ಸಂಚಾರ ದಟ್ಟಣೆ ಉಂಟಾಯಿತು.

ಇನ್ನು ಈ ಮಳೆಯಿಂದ ರಾಜ್ಯದಲ್ಲಿ ಭಾರಿ ಅನಾಹುತಗಳೆ ನಡೆದಿದ್ದು ಐವರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ಸಾಯಿ ಲೇಔಟ್ ದ್ವೀಪದಂತ್ತಾಗಿದೆ. ಇಲ್ಲಿನ ಮನೆಗಳ ನೆಲ ಮಹಡಿ ಅರ್ಧ ಮುಳುಗಿದ್ದು, ಜನರು ಮನೆಗಳಿಂದ ಹೊರಬರಲು ಸಾಧ್ಯವಾಗದಷ್ಟು ಅವಾಂತರ ಸೃಷ್ಟಿಸಿದೆ.

ಸೋಮವಾರ ಅಂದರೆ ನಿನ್ನೆ ಸುಮಾರು 150 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾಯಿ ಲೇಔಟ್‌ನಲ್ಲಿ ಜನರಿಗೆ ಆಹಾರ ಮತ್ತು ನೀರಿನ ವ್ಯವಸ್ಥೆಕೂಡ ಮಾಡಿತ್ತು.

ಇತ್ತ ಸಾಯಿ ಲೇಔಟ್‌ನ ನಿವಾಸಿಗಳ ಸಂಕಷ್ಟಕ್ಕೆ ಪಾಲಿಕೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೂಡ ನಿವಾಸಿಗಳಿಂದ ಕೇಳಿ ಬರುತ್ತಿವೆ. ನಗರದ ಹೆಣ್ಣೂರಿನಲ್ಲಿರುವ ಅನಾಥಾಶ್ರಮವು ಸಹ ಮಳೆಯ ತೀವ್ರತೆಯನ್ನು ಅನುಭವಿಸಿದೆ. ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ, ವಿಪತ್ತು ನಿರ್ವಹಣಾ ಪಡೆ ಅನಾಥಾಶ್ರಮದ ಜನರನ್ನು ರಕ್ಷಿಸಿ ಸುರಕ್ಷಿತವಾಗಿರಿಸಿದೆ.

ಬಹುರಾಷ್ಟ್ರೀಯ ಕಂಪನಿಗಳ ಕಚೇರಿಗಳನ್ನು ಹೊಂದಿರುವ ಮಾನ್ಯತಾ ಟೆಕ್ ಪಾರ್ಕ್ ಬಳಿ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ಹಲವು ಸ್ಥಳಗಳಲ್ಲಿ ಮೊಣಕಾಲಿನವರೆಗೆ ತುಂಬಿದ ನೀರಿನಲ್ಲಿ ಪ್ರಯಾಣಿಕರು ಕಷ್ಟಪಟ್ಟು ಪ್ರಯಾಣಿಸಬೇಕಾಯಿತು. ನಗರದ ರಸ್ತೆಗಳಲ್ಲಿ ಹೊಸ ಗುಂಡಿಗಳು ಕಾಣಿಸಿಕೊಂಡು ವಾಹನ ಸವಾರರಿಗೆ ಅಪಾಯವನ್ನುಂಟುಮಾಡಿದವು. ನೀರು ತುಂಬಿದ್ದರಿಂದ ವಾಹನಗಳು ಹಳ್ಳಕ್ಕೆ ಬಿದ್ದು ಸಿಲುಕಿಕೊಂಡಿದ್ದವು. ಇದರಿಂದ ಹಲವು ಭಾಗಗಳಲ್ಲಿ ದೀರ್ಘಕಾಲದವರೆಗೂ ಸಂಚಾರ ದಟ್ಟಣೆ ಉಂಟಾಯಿತು.

ಇನ್ನು ಮೈಕೋ ಲೇಔಟ್‌ ಒಂದರ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಮಳೆನೀರನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಾಗ 12 ವರ್ಷದ ಬಾಲಕ ಸೇರಿದಂತೆ ಇಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಬಿಟಿಎಂ 2 ನೇ ಹಂತದ ಬಳಿಯ ಎನ್ಎಸ್ ಪಾಳ್ಯದ ಮಧುವನ್ ಅಪಾರ್ಟ್‌ಮೆಂಟ್ ನಿವಾಸಿ ಮನಮೋಹನ್ ಕಾಮತ್ (63) ನಿನ್ನೆ ಸಂಜೆ ತನ್ನ ಮನೆಯಿಂದ ನೀರನ್ನು ಹೊರಹಾಕಲು ಪಂಪ್ ಬಳಸಲು ಪ್ರಯತ್ನಿಸಿದ್ದರು.

ಪಂಪ್‌ನ್ನು ಸಾಕೆಟ್‌ಗೆ ಸಂಪರ್ಕಿಸಿದಾಗ, ಶಾರ್ಟ್ ಸರ್ಕ್ಯೂಟ್ ಉಂಟಾಗಿ ವಿದ್ಯುತ್ ಆಘಾತಕ್ಕೆ ಒಳಗಾದರು. ಕಾಮತ್ ಬಳಿಯ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಕೆಲಸ ಮಾಡುತ್ತಿದ್ದ ನೇಪಾಳದ ವ್ಯಕ್ತಿಯ ಮಗ ದಿನೇಶ್ (12) ಕೂಡ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಈ ಇಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಎರಡೂ ಪ್ರಕರಣಗಳಲ್ಲಿ ಅಸ್ವಾಭಾವಿಕ ಸಾವಿನ ವರದಿಗಳು (ಯುಡಿಆರ್‌ಗಳು) ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ಮೃತರ ಸಂಖ್ಯೆ 5ಕ್ಕೇರಿಕೆ: ಸೋಮವಾರ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಂಪನಿಯಲ್ಲಿ ಕೆಲಸದಾಕೆ ಶಶಿಕಲಾ (35) ಎಂಬುವರ ಮೇಲೆ ಕಾಂಪೌಂಡ್ ಗೋಡೆ ಬಿದ್ದು ಮೃತಪಟ್ಟಿದ್ದಾರೆ. ಇನ್ನು ರಾಯಚೂರು ಮತ್ತು ಕಾರವಾರದಲ್ಲಿ ಸಿಡಿಲಿಗೆ ಇಬ್ಬರು ಮೃತಪಟ್ಟಿದ್ದಾರೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಸುಮಾರು 30 ಮಿ.ಮೀ ಮಳೆಯಾಗಿದೆ. ಮೂರು ದಿನಗಳಿಂದ ಸುರಿದ ವರುಣನಿಂದ ನಗರದಲ್ಲಿ 105 ಮಿ.ಮೀ ಮಳೆ ದಾಖಲಾಗಿದೆ.

Megha
the authorMegha

Leave a Reply

error: Content is protected !!