ನಾಗಮಂಗಲ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಬುಧವಾರ ರಾತ್ರಿ ನಾಗಮಂಗಲದಲ್ಲಿ ಕೋಮು ಗಲಭೆ ಸಂಭವಿಸಿ ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಪಟ್ಟಣ ಹೊತ್ತಿ ಉರಿದಿದೆ.
ಪೆಟ್ರೋಲ್ ಬಾಂಬ್, ಮಾರಕಾಸ್ರದೊಂದಿಗೆ ಕಲ್ಲುತೂರಾಟ ನಡೆಸಿ ಅಂಗಡಿ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಏಳು ಬೈಕ್ ಸುಟ್ಟು ಕರಕಲಾಗಿದ್ದು ಹಲವು ಬೈಕ್ಗಳಿಗೆ ಹಾನಿಯಾಗಿದ್ದರೆ ಕಾರೊಂದು ಹೊತ್ತಿ ಉರಿದಿದೆ, ಶೋರೂಂ, ಬ್ಯಾಂಗಲ್ ಸ್ಟೋರ್, ಪಾತ್ರೆ ಅಂಗಡಿ ಸೇರಿ ಹಲವು ಅಂಗಡಿಗಳು ಭಸ್ಮ ಗೊಂಡಿದ್ದರೆ, ಕೆಲವು ಅಂಗಡಿ ಮಳಿಗೆಗಳ ಬಾಗಿಲುಗಳಿಗೆ ಸೈಜುಗಲ್ಲು ಎತ್ತಿ ಹಾಕಲಾಗಿದ್ದು ಹೆಚ್ಚಿನ ಪ್ರಮಾಣದ ಹಾನಿ ಸಂಭವಿಸಿದೆ.
ಗುರುವಾರ ಮುಂಜಾನೆ ವೇಳೆಗೆ ಪಟ್ಟಣದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನಾಗಮಂಗಲದ ಟಿಬಿ ಬಡಾವಣೆ ಬಳಿಯ ಬದ್ರಿ ಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಬುಧವಾರ ಸಂಜೆ ಆರಂಭಗೊಂಡಿತ್ತು, ತಮಟೆ, ಡೊಳ್ಳು, ಡಿಜೆಯೊಂದಿಗೆ ಸಾಗಿದ ಮೆರವಣಿಗೆ ಮಂಡ್ಯ ಸರ್ಕಲ್ ಮಾರ್ಗವಾಗಿ ಮೈಸೂರು ರಸ್ತೆ ಯಲ್ಲಿರುವ ಮಸೀದಿ ಮತ್ತು ದರ್ಗಾದ ಅನತಿ ದೂರದಲ್ಲಿ ತೆರಳುತ್ತಿದ್ದಾಗ ಅನ್ಯ ಕೋಮಿನ ಗುಂಪು ತಮಟೆ, ಡೊಳ್ಳು ಡಿಜೆ ಸೌಂಡ್ ಮಾಡದಂತೆ ಹೇಳಿದೆ.
ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆದು ಮಾರಾಕಾಸ್ರ ಝಳಪಳಿಸಿದ ಗುಂಪು ಗಣಪತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಎರಡು ಗುಂಪಿನ ನಡೆದ ಕಲ್ಲುತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತು.
ಗಣಪತಿ ಮೂರ್ತಿಯನ್ನು ಪೊಲೀಸ್ ಠಾಣೆ ಬಳಿ ತಂದು ಕಲ್ಲುತೂರಾಟ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒಂದು ಕೋಮಿನ ಗುಂಪು ಪ್ರತಿಭಟನೆ ನಡೆಸಿದ್ದು, ಸಂತೆ ಬೀದಿ ಮೈಸೂರು ರಸ್ತೆಯಲ್ಲಿ ಗುಂಪೊಂದು ದಾಂಧಲೆ ನಡೆಸಿ ಸಿಕ್ಕಸಿಕ್ಕ ವಾಹನ, ಅಂಗಡಿಗಳಿಗೆ ಬೆಂಕಿ ಹಚ್ಚಿದೆ ಇದರಿಂದ ಬೆಂಕಿಯ ಕೆನ್ನಾಲಿಗೆ ಅಂಗಡಿಯಲ್ಲಿದ್ದ ವಸ್ತುಗಳು, ಬೈಕ್ಗಳು ಸುಟ್ಟು ಕರಕಲಾಗಿವೆ. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಹಲವು ಬಾರಿ ಲಾಠಿ ಪ್ರಹಾರ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದ್ದು, ನಿಷೇಧಾಜ್ಞೆ ಜಾರಿ ಗೊಳಿಸಿ ಕ್ರಮವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಮುಂಜಾನೆ ವೇಳೆಗೆ ಪಟ್ಟಣದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರೂ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.
ಪಟ್ಟಣದಾದ್ಯಂತ ವ್ಯಾಪಕ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಆಯಾ ಕಟ್ಟಿನ ಸ್ಥಳದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಎಚ್ಚರಿಕೆ ವಹಿಸಿದ್ದಾರೆ.
46 ಜನರ ಬಂಧನ: ಪಟ್ಟಣದಲ್ಲಿ ಸಂಭವಿಸಿದ ಈ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 46 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಸದ್ಯಕ್ಕೆ ಪಟ್ಟಣದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಸೂಕ್ತ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಆಯಾ ಕಟ್ಟಿನ ಪ್ರದೇಶದಲ್ಲಿ ಗಸ್ತು ಹೆಚ್ಚಿಸಲಾಗಿದೆ. ಜನಜೀವನ ಸಹಜ ಸ್ಥಿತಿಯಲ್ಲಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದರು.
ಗಲಭೆಯಲ್ಲಿ ಎರಡು ಕೋಮಿನವರು ಕಲ್ಲು ತೂರಾಟ ನಡೆಸಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಸಾರ್ವಜನಿಕರು ಗಾಯಗೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಏಳು ಬೈಕ್ ಸಂಪೂರ್ಣ ಸುಟ್ಟು ಹೋಗಿದ್ದು ಹಲವು ಬೈಕ್ ಗಳಿಗೆ ಹಾನಿಯಾಗಿದೆ. ಇಂಡಿಕಾ ಕಾರು ಬೆಂಕಿ ಗಾಹುತಿ ಯಾಗಿದ್ದು ಗಲಭೆ ಪೀಡಿತ ಪ್ರದೇಶದಲ್ಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದ್ದು ಗಲಭೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಲಾಗುವುದೆಂದು ಹೇಳಿದರು.