ಬೆಂಗಳೂರು: ಇಪಿಎಸ್ ಪಿಂಚಿಣಿದಾರರ 82ನೇ ಮಾಸಿಕ ಸಭೆ ಇದೇ ನ.3ರ ಭಾನುವಾರದಂದು ಲಾಲ್‌ಬಾಗ್ ಆವರಣದಲ್ಲಿ ಜರುಗಲಿದೆ ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆ ಕಾರ್ಯಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ನಂಜುಂಡೇಗೌಡ ಅವರು, ಅಂದು ಬೆಳಗ್ಗೆ 8 ಗಂಟೆಗೆ ಸಭೆ ಆರಂಭವಾಗಲಿದ್ದು ಎಲ್ಲ ನಿವೃತ್ತರೂ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಇದೇ ನ.6ರಂದು ಕಾರ್ಯಕಾರಿ ಸಮಿತಿ (ಸಿಬಿಟಿ) ಪೂರ್ವಭಾವಿ ಸಭೆ ದೆಹಲಿಯಲ್ಲಿನ ಇಪಿಎಫ್ಒ ಕೇಂದ್ರ ಕಚೇರಿಯಲ್ಲಿ ನಡೆಯುತ್ತಿದ್ದು, ಆ ಸಭೆಯಲ್ಲಿ ಇಪಿಎಸ್ ನಿವೃತ್ತರ ಕನಿಷ್ಠ ಹಾಗೂ ಹೆಚ್ಚುವರಿ ಪಿಂಚಣಿಗೆ ಸಂಬಂಧಿಸಿದಂತೆ (ನ್ಯಾಯಾಲಯದ ತೀರ್ಪು ಒಳಗೊಂಡಂತೆ) ಚರ್ಚಿಸಿದ ನಂತರ ನವಂಬರ್ 23ರಂದು 236ನೇ ಸಿಬಿಟಿ ಸಭೆ ದೆಹಲಿಯಲ್ಲಿ ಉದ್ಯೋಗ ಹಾಗೂ ಕಾರ್ಮಿಕ ಖಾತೆಯ ಸಚಿವರಾದ(minister for labour & employment)ಶ್ರೀ ಮುನ್ಸುಖ್ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.
ನಮ್ಮ ಎಲ್ಲ ಬೇಡಿಕೆಗಳ ಬಗ್ಗೆ ಅಂದೇ ಚರ್ಚಿಸಿ, ನಿರ್ಣಯಿಸುವ ಸಾಧ್ಯತೆ ನಿಚ್ಚಳವಾಗಿದೆ. ಸಪ್ಟೆಂಬರ್ 1, 2014 ಕ್ಕೆ ಪೂರ್ವ ಹಾಗೂ ನಂತರ ನಿವೃತ್ತರಾದವರಿಗೆ ಸಂಬಂಧಿಸಿದಂತೆ ಯಾವ ರೀತಿ ಲೆಕ್ಕ ತಕ್ತೆಯನ್ನು ಸಿದ್ಧಪಡಿಸಬೇಕು ಎಂಬ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ನೀಡಿರುವ ಅಂಶಗಳು. ಆದರೆ ಅಧಿಕಾರಿಗಳು ಇದನ್ನು ವಿಭಿನ್ನವಾಗಿ ಅರ್ಥೈಸಿರುವ ರೀತಿ, ಈ ಎಲ್ಲ ವಿಷಯಗಳ ಬಗ್ಗೆ ಮಾಸಿಕ ಸಭೆಯಲ್ಲಿ ಚರ್ಚಿಸಲಾಗುವುದು.
ಸಭೆಗೆ ಎನ್ಎಸಿ ಮುಖ್ಯ ಸಂಯೋಜಕ ರಮಾಕಾಂತ್ ನರಗುಂದ ಹಾಗೂ ಜಿಎಸ್‌ಎಮ್ ಸ್ವಾಮಿ, ಜತೆಗೆ ಚಿಕ್ಕಬಳ್ಳಾಪುರದ ಕೆಎಸ್ಆರ್‌ಟಿಸಿ, ಕ್ಷೇಮಾಭಿವೃದ್ಧಿ ಸಂಘದ ಎಲ್ಲ ಪದಾಧಿಕಾರಿಗಳು/ ಸದಸ್ಯರು ಭಾಗವಹಿಸಲಿದ್ದು, ಮುಖಂಡರು ನಮ್ಮ ಮುಂದಿನ ಹೋರಾಟದ ರೂಪರೇಷೆ ಬಗ್ಗೆ ಪ್ರಸ್ತುತಪಡಿಸಲಿದ್ದಾರೆ.
ಹೀಗಾಗಿ ಎಲ್ಲರೂ ವಿಶ್ವ ಪಾರಂಪರಿಕ ಲಾಲ್‌ಬಾಗ್ ಹೂತೋಟದಲ್ಲಿ ವಾಯು ವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಭೇಟಿ, ವಿಚಾರ ವಿನಿಮಯ ಜತೆಗೆ ಈ ಎಲ್ಲ ಅಂಶಗಳ ಬಗ್ಗೆ ಚರ್ಚಿಸಲು ಆಗಮಿಸಿ ಎಂದು ಮನವಿ ಮಾಡಿದ್ದಾರೆ.