ಮೆಜೆಸ್ಟಿಕ್: KSRTC ಟಿಸಿಗಳಿಗೆ ಕಂಡಕ್ಟರ್ಗಳು ₹10 ಕೊಟ್ಟರಷ್ಟೆ ಲಾಗ್ಶೀಟ್ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್ !!?
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಎಂದರೆ ಅದು ನಾಡಿನ ಜನತೆಗೂ ಹೆಮ್ಮೆಯ ಪ್ರತೀಕ. ಸಂಸ್ಥೆಗೆ ದೇಶದ ಸಾರಿಗೆ ವ್ಯವಸ್ಥೆಯಲ್ಲೇ ಒಂದು ವಿಶಿಷ್ಟ ಸ್ಥಾನ-ಮಾನ ಕೂಡ ಇದೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ನೂರಾರು ಪ್ರಶಸ್ತಿಗಳಿಗೂ ಪಾತ್ರವಾಗಿದೆ.
ಆದರೆ ಇಂಥ ಕೆಎಸ್ಆರ್ಟಿಸಿಯ ಗೌರವಕ್ಕೆ ಮಸಿ ಬಳಿಯಲೆಂದೇ ಕೆಲವಷ್ಟು ಸಿಬ್ಬಂದಿಗಳು ಲಂಚ, ಭ್ರಷ್ಟಾಚಾರ ಹಾಗೂ ದುಷ್ಟ ಮಾರ್ಗ ಅನುಸರಿಸುತ್ತಿರುವುದು ಬಹುಳ ಮುಜುಗರದ ವಿಷಯ.
ಮೆಜೆಸ್ಟಿಕ್ ಕೇಂದ್ರೀಯ ಬಸ್ ನಿಲ್ದಾಣದ ಟರ್ಮಿನಲ್ 2A, ಅಂಕಣ: 3 & 4 ಹಾಗೂ ಟರ್ಮಿನಲ್ 01, ಅಂಕಣ: 14 & 15 ಹಾಗೂ 17 & 18ರಲ್ಲಿ ಸಂಚಾರ ನಿಯಂತ್ರಕ ಡ್ಯೂಟಿ ಮಾಡುತ್ತಿರುವ ಸಂಚಾರ ನಿಯಂತ್ರಕರಾದ ಧನಂಜಯ್ ಗೌಡ ಮತ್ತು ಪದ್ಮರಾಜ್ ಅವರು ನಿಗಮದ ಬಸ್ಗಳನ್ನು ಮಾರ್ಗಗಳ ಮೇಲೆ ಬಿಡಲು ಲಾಗ್ ಶೀಟ್ ಮೇಲೆ ಸಹಿ ಮಾಡುವುದಕ್ಕೆ ನಿರ್ವಾಹಕರಿಂದ ಲಂಚ ಪಡೆಯುತ್ತಿದ್ದಾರೆ.
ತಲಾ ಒಬ್ಬೊಬ್ಬ ಸಿಬ್ಬಂದಿಯಿಂದ ಈ ಇಬ್ಬರು ಸಂಚಾರ ನಿಯಂತ್ರಕರು 10 ರೂಪಾಯಿ ಲಂಚ ಪಡೆಯುತ್ತಿರುವ ವಿಡಿಯೋಗಳು ವಿಜಯಪಥ ಮೀಡಿಯಾಗೆ ಸಿಕ್ಕಿವೆ. ನೋಡಿ ಲೈನ್ ಚೆಕಿಂಗ್ ವೇಳೆ ತನಿಖಾ ಸಿಬ್ಬಂದಿ ನಿರ್ವಾಹಕರ ಬ್ಯಾಗ್ ಪಡೆದು ಹಣ ಲೆಕ್ಕಹಾಕಿದರೆ. ಆ ಬ್ಯಾಗ್ನಲ್ಲಿ ಟಿಕೆಟ್ ವಿತರಿಸಿರುವ ಮೌಲ್ಯಕ್ಕಿಂತ ಹೆಚ್ಚು ಹಣವಿದ್ದರೆ ಪ್ರಯಾಣಿಕರಿಗೆ ಮೋಸ ಮಾಡಿದ್ದೀಯ ಎಂದು ಕಾರಣ ಕೇಳಿ ದೋಷಾರೋಪಣ ಪತ್ರ ನೀಡುತ್ತಾರೆ.
ಅದರಂತೆ ಒಂದುವೇಳೆ ಬ್ಯಾಗ್ನಲ್ಲಿ ವಿತರಿಸಿರುವ ಟಿಕೆಟ್ ಮೌಲ್ಯಕ್ಕಿಂತ ಕಡಿಮೆ ಹಣವಿದ್ದರೂ ಸಹ ಸಂಸ್ಥೆಗೆ ಲಾಸ್ ಮಾಡಿದ್ದೀಯ ಎಂದು ಕಾರಣ ಕೇಳಿ ನಿರ್ವಾಹಕರಿಗೆ ದೋಷಾರೋಪಣ ಪತ್ರ ನೀಡುತ್ತಾರೆ. ಜತೆಗೆ ಈ ವಿಚಾರಣೆ ಆ ವಿಚಾರಣೆ ಎಂದು ಕೇಂದ್ರ ಕಚೇರಿಗೆ ಅಲೆಸುತ್ತಾರೆ. ಬಳಿಕ 3ರಿಂದ 6 ತಿಂಗಳ ವರೆಗೆ ಅಮಾನತು ಮಾಡುತ್ತಾರೆ.
ಆದರೆ, ಬಸ್ ನಿಲ್ದಾಣಗಳಲ್ಲಿ ಕೆಲ ಇಂಥ ಸಂಚಾರ ನಿಯಂತ್ರಕರು 10 ರೂ. ಕೊಡದೆ ಹೋದರೆ ಅವರು ಲಾಗ್ ಶೀಟ್ ಮೇಲೆ ಸಹಿ ಮಾಡುವುದೇ ಇಲ್ಲ. ಇದರಿಂದ ನಿರ್ವಾಹಕರು ವಿಧಿ ಇಲ್ಲದೆ 10 ರೂಪಾಯಿಯನ್ನು ಕೊಡಬೇಕು. ಅಂದರೆ ನಿರ್ವಾಹಕರಿಗೆ ಆ ಹಣ ಎಲ್ಲಿಂದ ಬರಬೇಕು. ಅವರು ವಾಮ ಮಾರ್ವದಿಂದ ಗಳಿಸಬೇಕಲ್ಲವೇ?
ಇದೇ 11/11/2024ರಂದು ಸುಮಾರು ರಾತ್ರಿ 11.50ರಲ್ಲಿ ಕೆಎಸ್ಆರ್ಟಿಸಿ ಬೆಂಗಳೂರು ಕೆಂಪೇಗೌಡ ನಿಲ್ದಾಣದಟರ್ಮಿನಲ್ 01, ಅಂಕಣ: 14 & 15 ಹಾಗೂ 17 & 18ರಲ್ಲಿ ಸಂಚಾರ ನಿಯಂತ್ರಕರ ಡ್ಯೂಟಿ ಮಾಡುತ್ತಿದ್ದ ಪದ್ಮರಾಜ್ ಅವರು ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಗಡೆ ಹೋಗುವ ವಾಹನಗಳ ನಿರ್ವಾಹಕರಿಗೆ ಅವರ ಡ್ಯೂಟಿ ಚಾರ್ಟಿಗೆ ಎಂಟ್ರಿ ಹಾಕಿ ಬಳಿಕ ಆ ನಿರ್ವಾಹಕರಿಂದ ಲಂಚದ ಹಣ ತೆಗೆದುಕೊಳ್ಳುತ್ತಿದ್ದಾರೆ. ಆ ದೃಶ್ಯವನ್ನು ಪ್ರಯಾಣಿಕರೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದು ವಿಜಯಪಥಕ್ಕೆ ವಿಡಿಯೋ ಕಳುಹಿಸಿದ್ದಾರೆ.
ಮೆಜೆಸ್ಟಿಕ್ ಕೇಂದ್ರೀಯ ಬಸ್ ನಿಲ್ದಾಣದ ಟರ್ಮಿನಲ್ 2A, ಅಂಕಣ: 3 & 4ರಲ್ಲಿ ಇದೇ 13/11/2024ರಂದು ಡ್ಯೂಟಿ ಮಾಡುತ್ತಿದ್ದ ಸಂಚಾರ ನಿಯಂತ್ರಕರಾದ ಧನಂಜಯ್ ಗೌಡ ಕೂಡ ನಿರ್ವಾಹಕರಿಂದ ಲಂಚ ಪಡೆಯುತ್ತಿದ್ದಾರೆ.
ಸಂಕಷ್ಟದ ನಡುವೆಯೂ ಸಾರ್ವಜನಿಕರ ಸಾರಿಗೆಗೆ ಕಟಿಬದ್ಧವಾಗಿರುವ ಸಂಸ್ಥೆ ತನ್ನ ನೌಕರರಿಗೆ ಸಂಬಳ ಕೊಡಲ್ವಾ? ಪ್ರತಿ ನಿತ್ಯ ತನ್ನ ಸಹ ನೌಕರರಿಂದಲೇ ಲಂಚ ಪೀಕುವ ಇಂಥವರಿಂದ ಸಂಸ್ಥೆಗೆ ಕಳಂಕ ಅಂಟಿಕೊಳ್ಳುತ್ತದೆ ಹಾಗೂ ನಿಗಮದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಇತರೆ ಸಿಬ್ಬಂದಿಗಳಿಗೂ ಈ ಕಳಂಕ ಅಂಟಿಕೊಳ್ಳುತ್ತದೆ. ಆದ್ದರಿಂದ ಈ ಟಿಸಿಗಳ ವಿರುದ್ಧ ಸಂಸ್ಥೆಯ ಮೇಲಧಿಕಾರಿಗಳು ಕಾನೂನು ಕ್ರಮ ಜರುಗಿ ಅಮಾನತು ಮಾಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.