KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್ ಪ್ರತಿಭಟನೆ
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗದ ತುಮಕೂರು ಘಟಕ ಒಂದು ಮತ್ತು ಎರಡರಲ್ಲಿ ಗುತ್ತಿಗೆ ಆಧಾರದ ಮೇಲೆ ಡ್ಯೂಟಿ ಮಾಡುತ್ತಿರುವ ಚಾಲಕರು ಅಧಿಕಾರಿಗಳ ಕಿರುಕುಳ ಹಾಗೂ ಸುಸಜ್ಜಿತವಲ್ಲದ ವಾಹನಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಏಕಾಏಕಿ ಇಂದು ಬೆಳಗ್ಗೆ 7 ಗಂಟೆಗೆ ವಿಭಾಗಿಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಅಧಿಕಾರಿಗಳ ನಡೆಯನ್ನು ಖಂಡಿಸಿದ ಚಾಲಕರು ನಮಗೆ ಬರಬೇಕಿರುವ ವೇತನದಲ್ಲೂ ಕಡಿಮೆ ಕೊಡುತ್ತಿದ್ದಾರೆ. ಸರಿ ಸುಮಾರು 23 ಸಾವಿರ ರೂಪಾಯಿ ವೇತನ ಬರುತ್ತಿತ್ತು. ಆದರೆ ಈ ತಿಂಗಳು ಬಂದ ವೇತನದಲ್ಲಿ 21500 ರೂಪಾಯಿ ಮಾತ್ರ ಕೊಟ್ಟಿದ್ದಾರೆ. ಉಳಿದ 1500 ರೂಪಾಯಿ ಬಗ್ಗೆ ಏನನ್ನು ಹೇಳುತ್ತಿಲ್ಲ ಎಂದು ಆರೋಪಿಸಿದರು.
ಇನ್ನು ನಮ್ಮ ಜೀವಕ್ಕೆ ಯಾವುದೇ ಭದ್ರತೆ ಇಲ್ಲ. ಜತೆಗೆ ನಿತ್ಯ ಸುಸಜ್ಜಿತವಲ್ಲದ ವಾಹನಗಳನ್ನು ಕೊಟ್ಟು ಹೆಚ್ಚು ಮೈಲೇಜ್ ಬರುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡುತ್ತಾರೆ ಹಳೇ ವಾಹನಗಳನ್ನು ಕೊಟ್ಟರೆ ಮೈಲೇಜ್ ಎಲ್ಲಿಂದಂತ ಬರುತ್ತದೆ ಎಂದು ಕಿಡಿಕಾರಿದರು.
ಈ ಎಲ್ಲದರ ನಡುವೆ ನಮಗೆ ಸರಿಯಾಗಿ ರಜೆಕೊಡುತ್ತಿಲ್ಲ ಕೇಳಿದರೆ ಏನೇನೋ ಸಬೂಬು ಹೇಳುತ್ತಾರೆ ಅಧಿಕಾರಿಗಳು. ಈ ನಡೆಯಿಂದ ನಮಗೆ ತುಂಬ ನೋವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೆ ನಮಗೆ ಸಂಸ್ಥೆಯಿಂದಲೇ ವೇತನಕೊಡಬೇಕು. ನಮ್ಮನ್ನು ಸಂಸ್ಥೆಯ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು. ಆದರೆ ಆ ರೀತಿ ಮಾಡುವುದಕ್ಕೆ ಅವಕಾಶವಿಲ್ಲ. ಕಾರಣ ಈ ಎಲ್ಲ ನೌಕರರು ಗುತ್ತಿಗೆ ಆಧಾರದ ಮೇಲೆ ಏಜೆನ್ಸಿ ಮೂಲಕ ಬಂದವರಾಗಿದ್ದಾರೆ. ಹಾಗಾಗಿ ಈ ಚಾಲಕರಿಗೆ ಏಜೆನ್ಸಿ ಅವರೆ ವೇತನ ಕೊಡುತ್ತಾರೆ ಎಂದು ಸಂಸ್ಥೆ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಇನ್ನು ಬೆಳಗ್ಗೆ 7ಗಂಟೆಗೆ ಆರಂಭವಾದ ಪ್ರತಿಭಟನೆ ಬೆಳಗ್ಗೆ 10 ಗಂಟೆ ವರೆಗೂ ನಡೆಯಿತು. ಈ ವೇಳೆ ಗುತ್ತಿಗೆ ಪಡೆದ ಏಜೆನ್ಸಿಯ ಅಧಿಕಾರಿಗಳು ಹಾಗೂ ಸಂಸ್ಥೆಯ ಅಧಿಕಾರಿಗಳ ಜತೆಗೆ ಚಾಲಕರು ಚರ್ಚಿಸಿದ ಬಳಿಕ ಪ್ರತಿಭಟನೆ ನಿಲ್ಲಿಸಿ ಡ್ಯೂಟಿಗೆ ಮರಳಿದರು.