ಬೆಂಗಳೂರು: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 20-04-2021 ರಂದು ಹಮ್ಮಿಕೊಂಡಿದ್ದ ಮುಷ್ಕರ ಸಮಯದಲ್ಲಿ ನನಗೆ ಬಲವಂತವಾಗಿ ಡ್ಯೂಟಿ ಹತ್ತಿಸಿದ ಅಧಿಕಾರಿಗಳು ಈಗ ಡ್ಯೂಟಿ ಕೊಡದೆ ಸತಾಯಿಸುತ್ತಿದ್ದು 2021ರಿಂದ ಈವರೆಗೂ ನನಗೆ ಸರಿಯಾಗಿ ಡ್ಯೂಟಿ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಹೀಗಾಗಿ ಮಾನಸಿಕವಾಗಿ ದೈಹಿಕವಾಗಿ ತುಂಬ ನೊಂದಿದ್ದು ದಯಾಮರಣ ಕೋರಿ ನ.9-2024ರಂದು ವಿಜಯಪುರ ವಿಭಾಗದ ತಾಳಿಕೋಟಿ ಘಟಕದ ಚಾಲಕ ಮಾಲೀಕಸಾ ಗಾಲಿಬಿಸಾ ಆಲಮೇಲು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
KKRTC ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ವಿಭಾಗೀಯ ಸಾರಿಗೆ ಅಧಿಕಾರಿ ದೇವಾನಂದ ಬಿರಾದಾರ ಮತ್ತು ತಾಳಿಕೋಟಿ ಘಟಕ ವ್ಯವಸ್ಥಾಪಕ ಅಶೋಕ ಭೋವಿ ಅವರು 20-04-2021 ರಂದು ಒತ್ತಾಯ ಪೂರ್ವಕವಾಗಿ ಕರ್ತವ್ಯಕ್ಕೆ ಕಳುಹಿಸಿದ್ದರು.
ನಾನು ಮುಷ್ಕರ ಇರುವುದರಿಂದ ಕರ್ತವ್ಯ ನಿರ್ವಹಿಸಲು ಅನಾನುಕೂಲ ಉಂಟಾಗುತ್ತದೆ ಎಂದು ಎಷ್ಟೇ ವಿನಂತಿಸಿದರು ಬಲವಂತವಾಗಿ ಕರ್ತವ್ಯಕ್ಕೆ ಕಳುಹಿಸಿದ್ದರು. ಅವರ ಬಲವಂತಕ್ಕೆ ನಾನು ಕರ್ತವ್ಯ ನಿರ್ವಹಿಸಲು ಒಪ್ಪಿಕೊಂಡು ಡ್ಯೂಟಿ ಮಾಡುತ್ತಿದ್ದಾಗ ಸಂಸ್ಥೆಯ ಕೆಲವು ಕಾರ್ಮಿಕರು ನಾವು ಮುಷ್ಕರ ಮಾಡುತ್ತಿದ್ದೇವೆ ನೀನು ಡ್ಯೂಟಿ ಮಾಡುತ್ತೀಯಾ ಅಂತ ಹೊಡಿ ಬಡಿ ಮಾಡಿ ಕೆಳಗೆ ಬೀಳಿಸಿ ಕಾಲಿನಿಂದ ತುಳಿದಿದ್ದರು.
ಆ ಸಮಯದಲ್ಲಿ ನಾನು ಪ್ರಜ್ಞೆ ಕಳೆದುಕೊಂಡಿದ್ದೆ. ಬಳಿಕ ಕಲಕೇರಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ವಿಜಯಪುರ ಸಂಜೀವನೀ ಆಸ್ಪತ್ರೆಯಲ್ಲಿ MRI ಮಾಡಿಸಿದಾಗ ವೈದ್ಯರು 5 ಕಡೆ ನರ ಬ್ಲಾಕ್ ಇರುವುದರಿಂದ ಆಪರೇಷನ್ ಮಾಡಲು ಬರುವುದಿಲ್ಲ ಎಂದು ತಿಳಿಸಿದ್ದರು. ಆ ಸಮಯದಲ್ಲಿ 1 ತಿಂಗಳು IOD ಅಂತಾ ಮತ್ತೊಂದು ತಿಂಗಳು ಲಾಕ್ ಡೌನ್ ಅಂತಾ ಕೇವಲ 2 ತಿಂಗಳು ವೇತನ ಪಾವತಿಸಿದ್ದಾರೆ.
ಇನ್ನು ಹಲ್ಲೆಗೆ ಒಳಗಾಗಿದ್ದರಿಂದ ದೈಹಿಕವಾಗಿ ನಾನು ಸ್ವಾದೀನ ಕಳೆದುಕೊಂಡಿದ್ದೇನೆ. ಹೀಗಾಗಿ ನನಗೆ ಲಘು ಕೆಲಸ ನೀಡಿ ಎಂದು ವಿನಂತಿಸಿದಾಗ ಫಾರಂ 3 ಅಂಗವಿಕಲತೆ ಪ್ರಮಾಣ ಪತ್ರ ತರಲು ಸೂಚಿಸಿದ್ದರು. ನಾನು ಫಾರಂ 3 ಅಂಗವಿಕಲತೆ ಪ್ರಮಾಣ ಸಲ್ಲಿಸಿದ್ದೆ. ಆ ಬಳಿಕ ನನಗೆ 2 ನೇ ಅಭಿಪ್ರಾಯ ತರಲು ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಗೆ ಕಳುಹಿಸಿದ್ದರು.
ಅಲ್ಲಿ ಹೋಗಿ ವಿಚಾರಿಸಿದಾಗ ಇದು ಕಣ್ಣಿನ ಆಸ್ಪತ್ರೆ ಇದ್ದು ಇಲ್ಲಿ Orthoಗೆ 2 ನೇ ಅಭಿಪ್ರಾಯ ನೀಡಲು ಬರುವುದಿಲ್ಲ ಅಂತ ಕಹಿಹಿಸಿದ್ದರು. ಮರಳಿ ನನಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ 2ನೇ ಅಭಿಪ್ರಾಯ ತರಲು ಕಳುಹಿಸಿದ್ದರು. ಅಲ್ಲಿ ನನಗೆ ಬಿಲೋ % ಹಾಕಿ ವರದಿ ನೀಡಿದ್ದರು. ನಾನು ಅದಕ್ಕೆ ಒಪ್ಪಿಗೆ ಇಲ್ಲ ಇನೊಂದು ಕಡೆ 2 ನೇ ಅಭಿಪ್ರಾಯ ತರಲು ಅವಕಾಶ ಮಾಡಿಕೊಡಿ ಎಂದು ವಿನಂತಿಸಿದೆ.
ಆಗ ನನಗೆ ಮೆಡಿಕಲ್ ಬೋರ್ಡ್ ಅವರು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ ನನಗೆ 40% ಅಂಗವಿಕಲತೆ ನೀಡಿದ್ದರು. ಈ ವರದಿಯ ಆಧಾರದ ಮೇಲೆ ನನಗೆ 6 ತಿಂಗಳು ಘಟಕದಲ್ಲಿ ಲಘು ಕೆಲಸ ನೀಡಲು ಆದೇಶ ನೀಡಿದ್ದರು. ನಾನು 3 ತಿಂಗಳು ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಮತ್ತೆ ನನಗೆ ಕೇಂದ್ರ ಕಚೇರಿಗೆ ಕಳುಹಿಸಿ 2ನೇ ಅಭಿಪ್ರಾಯ ತರಲು ತಿಳಿಸಿದ್ದರು.
ಅದಕ್ಕೆ ನಾನು 2 ನೇ ಅಭಿಪ್ರಾಯ ತಂದು ಇನ್ನು 3 ತಿಂಗಳು ಆಗಿಲ್ಲ ಮತ್ತೇಕೆ ಕಳುಹಿಸುತ್ತಿದ್ದೀರಿ ಎಂದು MD ಅವರಿಗೆ ವಿನಂತಿಸಿದೆ. ಅದಕ್ಕೆ ಅವರು 2 ನೇ ಅಭಿಪ್ರಾಯ ತರಲೇ ಬೇಕು ಎಂದು ಆದೇಶ ಮಾಡಿದ್ದರು. ಅದಕ್ಕೆ ನಾನು ವಿರೋಧ ವ್ಯಕ್ತ ಪಡಿಸಿದಕ್ಕೆ ನನಗೆ ಅಮಾನತು ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಎಲ್ಲದರ ನಡುವೆ ನಾನು ಉಚ್ಚ ನ್ಯಾಯಾಲಯ ಕಲ್ಬುರ್ಗಿಯಿಂದ ಡ್ಯೂಟಿ ಕೊಡಬೇಕು ಎಂದು ಆದೇಶ ಮಾಡಿಕೊಂಡು ಬಂದರು ನನಗೆ ಅಧಿಕಾರಿಗಳು ಡ್ಯೂಟಿ ನೀಡದೆ ಕಿರಕುಳ ನೀಡುತ್ತಿದ್ದಾರೆ.
ಈ ವಿಷಯವಾಗಿ ನಾನು ಜನಪ್ರತಿನಿಧಿಗಳು ಮತ್ತು ಲೋಕಾಯುಕ್ತರಿಗೆ ವಿವರಿಸಿದ್ದರಿಂದ ಅವರು ಲಘು ಕೆಲಸ ನೀಡಲು ಸೂಚಿಸಿದರು. ಆದರೆ, ನನಗೆ ಕೆಲಸ ಕೊಡುವ ಬದಲು ಅಮಾನತು ಮಾಡುವುದಾಗಿ ಮತ್ತೆ ಬೆದರಿಕೆ ಹಾಕುತ್ತಿದ್ದಾರೆ.
ಇನ್ನು ಇದೇ ನ.07-2024 ರಂದು ನಾನು ವಿಡಿಯೋ ಮಾಡಿ ನನ್ನ ದುಃಖ ಹಾಗೂ ನನಗೆ ಆಗುತ್ತಿರುವ ಅನ್ಯಾಯದ ವಿರುದ್ಧ ವಿಡಿಯೋದಲ್ಲಿ ಹೇಳಿಕೊಂಡಿದ್ದೇನೆ. ಒತ್ತಡದಲ್ಲಿ ನಾನು ಏನಾದರೂ ಹೆಚ್ಚು ಕಮ್ಮಿ ಮಾಡಿಕೊಂಡರೆ ಅದಕ್ಕೆ ನೇರವಾಗಿ ವ್ಯವಸ್ಥಾಪಕ ನಿರ್ದೇಶಕರಾದ ಎಂ. ರಾಚಪ್ಪ, ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ವಿಭಾಗದ ಸಾರಿಗೆ ಅಧಿಕಾರಿ ದೇವಾನಂದ ಬಿರಾದಾರ, ಮಾಜಿ ವಿಭಾಗೀಯ ನಿಯಂತ್ರಣಾಧಿಕಾರಿ ಜೆ.ಎಂ. ಫೈಜ್, ಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿ ದಿಲ್‌ಶಾದ ಬೇಗಮ್ ಜಮಾದಾರ ಮತ್ತು ತಾಳಿಕೋಟೆ ಘಟಕ ವ್ಯವಸ್ಥಾಪಕ ಅಶೋಕ ಭೋವಿ ಅವರು ನೇರವಾಗಿ ಕಾರಣರಾಗಿರುತ್ತಾರೆ.
ನನಗೆ ಆದ ಅನ್ಯಾಯಕ್ಕೆ ನ್ಯಾಯ ಒದಗಿಸಿ ನನಗೆ ಹುದ್ದೆ ಬದಲಾವಣೆ ಮಾಡಿ 2021ರಿಂದ ಇಲ್ಲಿಯವರೆಗೆ ವೇತನ ಪಾವತಿಸಲು ಆದೇಶಿಸಿ ಇಲ್ಲ ಅಂದ್ರೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ರಾಜ್ಯಪಾಲರಾದ ತಮ್ಮ ಸನ್ನಿಧಾನಕ್ಕೆ ಈ ಪತ್ರ ಬರೆಯುತ್ತಿದ್ದೇನೆ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.