ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27ನೇ ಸಂಸ್ಥಾಪನಾ ದಿನ ಸಮಾರಂಭದಲ್ಲಿ 2023-24ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳನ್ನು ಪುರಸ್ಕರಿಸಲಾಯಿತು.
ಶುಕ್ರವಾರ ಅಂದರೆ ನ.15 ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27ನೇ ಸಂಸ್ಥಾಪನಾ ದಿನದ ಅಂಗವಾಗಿ ಎಚ್.ಡಿ.ಬಿ.ಆರ್.ಟಿ.ಎಸ್ ಘಟಕ ಹುಬ್ಬಳ್ಳಿಯಲ್ಲಿ ಸಮಾರಂಭ ಆಯೋಜನೆ ಮಾಡಲಾಗಿತ್ತು.
ಈ ಸಮಾರಂಭದಲ್ಲಿ 2023-24ನೇ ಸಾಲಿನಲ್ಲಿ ಸಂಸ್ಥೆಯ ಕಾರ್ಯ ನಿರ್ವಹಣೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಪ್ರಯುಕ್ತ ಹಾವೇರಿ ವಿಭಾಗಕ್ಕೆ ಮೊದಲ ಸ್ಥಾನ ಹಾಗೂ ವಿಭಾಗದ ವ್ಯಾಪ್ತಿಯ ಘಟಕಗಳ ಉತ್ತಮ ಕಾರ್ಯ ಸಾಧನೆಗೆ ಹಿರೇಕೆರೂರು ಮತ್ತು ಹಾವೇರಿ ಘಟಕಗಳಿಗೆ 2ನೇ ಮತ್ತು 3ನೇ ಪಡೆದುಕೊಂಡಿವೆ.
2023-24 ನೇ ಸಾಲಿನಲ್ಲಿ ಸಂಸ್ಥೆಯ ಕಾರ್ಯ ನಿರ್ವಹಣೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ ವಿಭಾಗದ ಭದ್ರತಾ ಶಾಖೆಯ ವಿಭಾಗೀಯ ಭದ್ರತಾ ಅಧೀಕ್ಷಕ ಎಚ್. ಡಿ. ತೋಗುಣುಸಿ ಅತ್ಯುತ್ತಮ ಮೇಲ್ವಿಚಾರಕ ಸಿಬ್ಬಂದಿ ಪುರಸ್ಕಾರ ಪಡೆದುಕೊಂಡಿದ್ದಾರೆ.
ಇನ್ನು ಸಂಸ್ಥೆಯ ಕಾರ್ಯ ನಿರ್ವಹಣೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಅಧಿಕಾರಿಯಾಗಿ ವಿಭಾಗದ ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ರು. ಪಾಟೀಲ ಅವರು ಭಾಜನರಾಗಿದ್ದಾರೆ. ಒಟ್ಟಾರೆಯಾಗಿ ಹಾವೇರಿ ವಿಭಾಗದ ಉತ್ತಮ ಕಾರ್ಯನಿರ್ವಹಣೆಗೆ 5 ಅಧಿಕಾರಿಗಳಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಗಿದೆ.
ಈ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕಾರ್ಮಿಕ ಸಚಿವ ಸಂತೋಷ ಲಾಡ್, ಸಂಸ್ಥೆಯ ಅಧ್ಯಕ್ಷ ಭರಮಗೌಡ (ರಾಜು) ಅ. ಕಾಗೆ, ಉಪಾಧ್ಯಕ್ಷ ಪೀರ್ಸಾಬ್ ಕೌತಾಳ, ವ್ಯವಸ್ಥಾಪಕ ನಿರ್ದೇಶಕಿ ಎಂ.ಪ್ರಿಯಾಂಗಾ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.