ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 4ನಿಗಮಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ( ಚಾಲನಾ ಮತ್ತು ತಾಂತ್ರಿಕ ನೌಕರರ ಸಂಘಟನೆಗಳ ಮುಖಂಡರ ಹೊರತು ಪಡಿಸಿ) ಸಂಘಟನೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಪದಾಧಿಕಾರಿಗಳು ಸರಿ ಸಮಾನ ವೇತನ ಸಂಬಂಧ ಗೌಪ್ಯ ಸಭೆ ನಡೆಸಲು ಸಜ್ಜಾಗಿದ್ದಾರೆ.
ಆದರೆ, ಸಾರಿಗೆ ನೌಕರರ ಮತ್ತು ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸುವುದಕ್ಕೆ ಮುಂದಾಗುತ್ತಿಲ್ಲ. ಕಾರಣ ನಮ್ಮದು ಟ್ರೇಡ್ ಯೂನಿಯನ್‌ಗಳಾಗಿದ್ದು, ನಾವು ಅಧಿಕಾರಿಗಳು ಆಯೋಜನೆ ಮಾಡುವ ಸಭೆಗೆ ಹೋಗುವುದು ಸರಿಯಾಗುವುದಿಲ್ಲ ಎಂದು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಂಘಟನೆಗಳ ಮುಖಂಡರು ಈ ಟ್ರೇಡ್ ಯೂನಿಯನ್‌ಗಳನ್ನು ಹೊರಗಿಟ್ಟೇ ನಾವು ಸಭೆ ಮಾಡಿ ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ಸಲ್ಲಿಸೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಬೇಕು ಎಂದು 2020ರಿಂದಲೂ ಹೋರಾಟ ಮಾಡಿಕೊಂಡು ಬರುತ್ತಿರುವ ನೌಕರರ ಕೂಟದ ಪದಾಧಿಕಾರಿಗಳು ಈ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಂಘಟನೆಗಳ ಪ್ರಮುಖರು ಆಯೋಜನೆ ಮಾಡುವ ಸಭೆಯಲ್ಲಿ ಭಾಗವಹಿಸಬಹುದಾಗಿತ್ತು. ಕಾರಣ ಈ ಕೂಟದ ಅಜಂಡ ಮತ್ತು ಅಧಿಕಾರಿಗಳ ಅಜಂಡ ಒಂದೇ ಆಗಿದೆ.
ಆದರೆ, ನಾವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಂಘಟನೆಗಳೊಂದಿಗೆ ಸೇರುವುದಕ್ಕೆ ಅವಕಾಶ ಇಲ್ಲ ಎಂದು ಭಾವಿಸಿರುವ ಕೂಟದ ಪದಾಧಿಕಾರಿಗಳು ಬಾಹ್ಯವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಂಘಟನೆಗಳು ಸರಿ ಸಮಾನ ವೇತನ ಸಂಬಂಧ ತೆಗೆದುಕೊಳ್ಳು ನಿರ್ಧಾರವನ್ನು ಬೆಂಬಲಿಸೋಣ ಎಂಬ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ.
ಇನ್ನು ನೌಕರರ ಕೂಟ ಮತ್ತು ಒಕ್ಕೂಟದ ಪದಾಧಿಕಾರಿಗಳ ತೀರ್ಮಾನ ಇದಾಗಿದ್ದರೆ, ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ತೀರ್ಮಾನ ಮಾತ್ರ ಈಗಲೂ 2024 ಜನವರಿ 1ರಿಂದ ಅನ್ವಯವಾಗುವಂತೆ ಅಗ್ರಿಮೆಂಟ್ ಆಗಬೇಕು ಎಂಬುವುದೆ ಇದೆ. ಆದರೆ 4 ನಿಗಮಗಳ ಅಧಿಕಾರಿಗಳು ಮತ್ತು ನೌಕರರ ಮನಸ್ಸಿನಲ್ಲಿ ಸರಿ ಸಮಾನ ವೇತನ ಪಡೆಯಬೇಕು ಎಂಬುವುದು ಇದೆ.
ಸಾರಿಗೆ ನೌಕರರಿಗೆ ಆಗುತ್ತಿರುವ ವೇತನ ತಾರತಮ್ಯತೆ ವಿರುದ್ಧ ಬೇರೆ ಬೇರೆ ಮಾರ್ಗದಲ್ಲಿ ಜಂಟಿ-ಒಕ್ಕೂಟ ಹೋರಾಟ ನಡೆಸುತ್ತಿದ್ದರೆ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಅಭಿಮತ ಮಾತ್ರ ಒಕ್ಕೂಟದ ಪರವಿದೆ. ಆದರೆ, ಸರ್ಕಾರ ಮತ್ತು ಸಾರಿಗೆ ಸಂಸ್ಥೆಗಳ ಆಡಳಿತ ಮಂಡಳಿಗಳು ಮಾತ್ರ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಇದು ನೌಕರರಿಗೆ ಬಿಸಿ ತುಪ್ಪವಾಗಿ ಪರಿಣಮಿಸುತ್ತಿದೆ.
ಒಟ್ಟಾರೆ ಈ ಬಾರಿ 7ನೇ ವೇತನ ಆಯೋಗದಂತೆ ನಮಗೆ ಸರಿ ಸಮಾನ ವೇತನ ಬೇಕೇಬೇಕು ಎಂಬ ಕೂಗು ಸಾರಿಗೆಯ ಸಮಸ್ತ ನೌಕರರಿಂದ ಕೇಳಿ ಬರುತ್ತಿದೆ. ಆದರೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮಾತ್ರ 7ನೇ ವೇತನ ಆಯೋಗದಂತೆ ವೇತನ ಕೊಡಿಸಲು ನಾವು ಸಿದ್ಧರಿಲ್ಲ ಅಗ್ರಿಮೆಂಟ್ ಮೂಲಕವೇ ಸರ್ಕಾರಿ ನೌಕರರಿಗಿಂತ ಹೆಚ್ಚಿನ ವೇತನ ಕೊಡಿಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ಇವೆರಡರ ಗೊಂದಲದ ನಡುವೆ ನೌಕರರು ಸಿಲುಕಿ ಒದ್ದಾಡುತ್ತಿದ್ದಾರೆ. ಜತೆಗೆ ಈವರೆಗೂ 38 ತಿಂಗಳ ಅರಿಯರ್ಸ್ ಕೂಡ ಬಂದಿಲ್ಲ. ಕೆಲ ಡಿಎ ಸೇರಿದಂತೆ ಇತರೆ ಭತ್ಯಗಳು ಇನ್ನೂ ಸಿಕ್ಕಿಲ್ಲ. ಅದರ ಜತೆಗೆ 2024ರ ಜನವರಿ 1ರಿಂದ ಜಾರಿಗೆ ಬರಬೇಕಿರುವ ವೇತನ 12 ತಿಂಗಳು ಸಮೀಪಿಸುತ್ತಿದ್ದರೂ ಇನ್ನೂ ಅಂತಿಮ ಘಟ್ಟ ತಲುಪಿಲ್ಲ ಎಂದು ಕೈಕೈ ಹಿಸುಕಿಕೊಳ್ಳುತ್ತಲೆ ಡ್ಯೂಟಿ ಮಾಡುತ್ತಿದ್ದಾರೆ.