ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ
ಸರಿಸಮಾನ ವೇತನ ಯಾಕೆ ಬೇಡ?
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರನ್ನು ಜಂಟಿ ಕ್ರಿಯಾ ಸಮಿತಿ ಮುಖಂಡರು ಎಡಬಿಡಂಗಿ ಮಾಡಲು ಹೊರಟಿದ್ದಾರೆ ಎಂದು ಸಾರಿಗೆ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿ ವೇತನ ಹೆಚ್ಚಳಕ್ಕಾಗಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಮುಷ್ಕರ ಮಾಡಿಯೇ ಪಡೆಯಬೇಕು ಎಂಬ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಇಲ್ಲಿ ಸಮಸ್ತ ಸಾರಿಗೆ ನಿಗಮದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ವರ್ಗಕ್ಕೂ ವೇತನ ಪರಿಷ್ಕರಣೆ ಆಗುತ್ತದೆ. ಆದರೆ, ಇಲ್ಲಿ ಬಲಿಪಶುವನ್ನಾಗಿ ಮಾಡುವುದು ಮಾತ್ರ ಚಾಲನಾ ಸಿಬ್ಬಂದಿಗಳನ್ನು. ಇದಕ್ಕೆಲ್ಲ ಕಾರಣ ಯಾರು ಎಂದು ಹೇಳಿದರೆ ಸಂಘಟನೆಗಳ ಮಹಾನ್ ನಾಯಕರು ಎಂದು ನೌಕರರಿಗೆ ಅರ್ಥವಾಗಿದೆ.
ಹೀಗಾಗಿ ಪ್ರಸ್ತುತ ನೌಕರರು ಮತ್ತು ಅಧಿಕಾರಿಗಳು ಕೇಳುತ್ತಿರುವ ಸರಿ ಸಮಾನ ವೇತನ ಕೊಡಿಸುವುದಕ್ಕೆ ಮುಂದಾಗಿ. ಇದರಿಂದ ಅಧಿಕಾರಿಗಳು-ನೌಕರರ ನಡುವೆ ಇರುವ ತಾರತಮ್ಯತೆ ದೂರವಾಗುತ್ತದೆ.
ಅದನ್ನು ಬಿಟ್ಟು ಈ ರೀತಿ ಹೋರಾಟ ಮಾಡಿ ಮೂರು ಕಾಸಿನ ವೇತನ ಹೆಚ್ಚಳ ಮಾಡಿಸಿ ಬಳಿಕ ನೌಕರರನ್ನು ಶಿಕ್ಷೆಗೆ ಗುರಿ ಮಾಡುವುದು ಸರಿಯಲ್ಲ. ಕಳೆದ 40 ವರ್ಷಗಳಿಂದಲೂ ಇದು ನಡೆಯುತ್ತಲೇ ಬಂದಿದೆ. ಇನ್ನಾದರೂ ಇವರಿಗೆ ಒಂದು ಶಾಶ್ವತ ಪರಿಹಾರ ಸಿಗಬೇಕು ಎಂದು ಹೇಳಿಕೊಂಡು ಹೋರಾಟಕ್ಕೆ ಇಳಿಯುವ ಮನಸ್ಸು ಮಾಡಿ. ಅದನ್ನು ಬಿಟ್ಟು ಕುಂತಂತ್ರಗಳನ್ನು ಮಾಡಿ ಒಡೆದಾಳುವುದಕ್ಕೆ ಮುಂದಾಗಬೇಡಿ.
ಈಗಲೂ ಕಾಲ ಮಿಂಚಿಲ್ಲ ನೌಕರರಿಗೆ ಒಳ್ಳೆಯದನ್ನೇ ಬಯಸುವುದೆ ಆಗಿದ್ದರೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಸರಿ ಸಮಾನ ವೇತನ ಕೊಡಿಸುವುದಕ್ಕೆ ಒಗ್ಗಟ್ಟಿನಿಂದ ಮುಂದೆ ಬನ್ನಿ. ನೀವು ನಮಗೆ ಶೇ.20 ಇಲ್ಲ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂಬ ಹೋರಾಟವನ್ನು ರೂಪಿಸಿ ಬಳಿಕ ಸರ್ಕಾರದ ಏಕಪಕ್ಷೀಯ ನಿರ್ಧಾರ ಎಂದು ನೌಕರರನ್ನು ಬಲಿಕೊಡುವ ಕೆಲಸಕ್ಕೆ ಇಳಿಯಬೇಡಿ ಎಂದು ನೌಕರರು ಮನವಿ ಮಾಡಿದ್ದಾರೆ.
ಅದರ ಜತೆಗೆ ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸಾಧ್ಯವಾದರೆ ನೌಕರರ ಪ್ರಶ್ನೆಗೆ ಉತ್ತರವನ್ನು ಕೊಡುವ ಪ್ರಯತ್ನವನ್ನಾದರೂ ಮಾಡಿ. ಅದರಲ್ಲೂ ಅನಂತ ಸುಬ್ಬರಾವ್ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ.
ಸರಿಸಮಾನ ವೇತನ ಯಾಕೆ ಬೇಡ? ಅಗ್ರಿಮೆಂಟ್ನ ಲಾಭ ಏನು? ಇನ್ನು ನಾವು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಮುಷ್ಕರ ಮಾಡಿಯೇ ಅಗ್ರಿಮೆಂಟ್ಯಾಕೆ ಪಡೆಯಬೇಕು?
ಅಗ್ರಿಮೆಂಟ್ ನಾವುಗಳು ಕೇಳಿದ ಮೇಲೆಯೇ ಯಾಕೆ ಆಗಬೇಕು? ಇನ್ನು ಪ್ರಮುಖವಾಗಿ ಮುಷ್ಕರ ನೀವು ಮಾಡಿದರೇ ಯಾಕೆ ಕಾನೂನು ಪ್ರಕಾರ? ಬೇರೆಯವರು ಮಾಡಿದರೇ ಯಾಕೆ ಕಾನೂನು ಬಾಹೀರ?
ನಾವು ನೌಕರರಾಗಿದ್ದರೂ ಕಾರ್ಮಿಕ ಪದ ಬಳಕೆ ಯಾಕೆ? ನಿಮಗೆ ಬೆಂಬಲ ಕಡಿಮೆ ಇದೆ ಅಂತ ಗೊತ್ತಿದ್ದೂ ಮುಷ್ಕರಕ್ಕೆ ಯಾಕೆ ಕರೆ ಕೊಡುತ್ತಿದ್ದೀರೀ? ನಾಯಕನಾದವ ನಿಮ್ಮನ್ನು ನಂಬಿ ಬರುವ ನೌಕರರ ಪರ ನಿಲ್ಲಬೇಕೆ ಅಥವಾ ಅವರನ್ನು ತುಳಿಯುವ ಕೆಲಸ ಮಾಡಬೇಕೆ?
ಸಮಸ್ತ ಸಾರಿಗೆ ಅಧಿಕಾರಿಗಳು ನೌಕರರ ಕೇಳುತ್ತಿರುವ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಕೊಡಿಸುವುದಕ್ಕೆ ನೀವು ಅಡ್ಡಗಾಲು ಹಾಕುತ್ತಿರುವುದು ಯಾಕೆ? ಈ ಎಲ್ಲಪ್ರಶ್ನೆಗಳಿಗೂ ಅನಂತ ಸುಬ್ಬರಾವ್ ಅವರನ್ನೂ ಒಳಗೊಂಡಂತೆ ಎಲ್ಲ ಪದಾಧಿಕಾರಿಗಳು ಯೋಚಿಸಿ ಉತ್ತರ ಕೊಡಬೇಕು ಎಂದು ಕೇಳುತ್ತಿದ್ದಾರೆ.