
ಬೆಂಗಳೂರು: ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಘೊಷಣೆ ಮಾಡಿರುವಂತೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ ಸರಿಸಮಾನ ವೇತನ ನೀಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಬೈರಣ್ಣ ಒತ್ತಾಯಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಸುಮಾರು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಅದರಂತೆ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ.
ಚುನಾವಣಾ ಪೂರ್ವದಲ್ಲಿ ಮಾಡಿದಂತಹ ಘೋಷಣೆಗಳ ಎಲ್ಲ ಗ್ಯಾರಂಟಿಗಳನ್ನು ತಾವು ಅನುಷ್ಠಾನಕ್ಕೆ ತಂದು ಆ ಘೋಷಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ ಸರ್ಕಾರಿ ನೌಕರರರ ವೇತನಕ್ಕೆ ಸರಿಸಮಾನವಾಗಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ರು, ಸಾರಿಗೆ ಸಂಸ್ಥೆ ನೌಕರರಿಗೆ ಯಾಕೆ ಇನ್ನೂ ಅನುಷ್ಠಾನಗೊಳಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ಶಕ್ತಿ ಯೋಜನೆ ಬಂದಮೇಲೆ ಸಾರಿಗೆ ಸಂಸ್ಥೆಗೆ ಅಧಿಕ ಲಾಭ ಬಂದಿದೆ ಅಂತ ನಮ್ಮ ಸಾರಿಗೆ ಸಚಿವರು ಪದೇಪದೇ ಹೇಳ್ತಾ ಇದ್ದಾರೆ. ಆದಾಯ ಬಂದರು ಸಹ ಬಾಕಿ 38 ತಿಂಗಳ ವೇತನ ಮತ್ತೆ 1/1 2024 ರಿಂದ ವೇತನ ಪರಿಷ್ಕರಣೆಯನ್ನು ಮಾಡಿಲ್ಲ. ಎಲ್ಲ ಇಲಾಖೆಗಳಿಗೂ ಸಂಬಳವನ್ನು ಹೆಚ್ಚು ಮಾಡ್ತಾ ಬಂದು ನಮ್ಮ ಸಾರಿಗೆ ಸಂಸ್ಥೆ ನೌಕರರಿಗೆ ಮಾತ್ರ ಮಾಡದೆ ತಾರತಮ್ಯವನ್ನು ತೋರಿಸ್ತಾ ಇದ್ದೀರಿ ಯಾಕೆ ಅಂತ ನಮಗೆ ಇನ್ನು ಗೊತ್ತಾಗಿಲ್ಲ.
ನೋಡಿ ಈ ಸಂಸ್ಥೆಯ ನೌಕರರು ಹಗಲು ರಾತ್ರಿ ಅನ್ನ, ನಿದ್ದೆ ಇಲ್ಲದೆ ಸರಿಯಾದ ಸಮಯಕ್ಕೆ ಊಟ, ತಿಂಡಿ ಇಲ್ಲದೆ ದುಡಿತಾ ಇರ್ತಕ್ಕಂತ ವರ್ಗ, ಸಾರಿಗೆ ಸಂಸ್ಥೆಯ ನೌಕರರು. ಇವರ ದುರಿತದಿಂದ ಸಾರಿಗೆ ಸಂಸ್ಥೆ ಚೆನ್ನಾಗಿದೆ. ಹೀಗಾಗಿ ತಾವು ಏನು ಘೋಷಣೆ ಮಾಡಿದ್ದೀರಿ ಅದನ್ನು ಅನುಷ್ಠಾನಕ್ಕೆ ತರಬೇಕು ಅಂತ ಮನವಿ ಮಾಡಿದ್ದಾರೆ.
ಇನ್ನು ಮುಂದೆ ನಾಲ್ಕು ಸಾರಿಗೆ ನಿಗಮಗಳಿಗೂ ಒಂದನೇ ತಾರೀಖು ಸಂಬಳವನ್ನು ನಿಗದಿ ಮಾಡಿ ಜತೆಗೆ ಸಮರ್ಪಕವಾಗಿ ಜಾರಿಗೆ ತರುವ ಮೂಲಕ ನೌಕರರಲ್ಲಿ ನಾವೆಲ್ಲ ಒಂದೇ ಸಂಸ್ಥೆಯ ನೌಕರರು ಎಂಬ ಆಶಾ ಭಾವನೆ ಮೂಡಿಸಿ ಉತ್ಸಾಹ ತುಂಬಬೇಕು ಎಂದು ಒತ್ತಾಯಿಸಿದ್ದಾರೆ.