ಬೆಂಗಳೂರು: ಐಟಿ, ಬಿಟಿ ಕ್ಷೇತ್ರದಲ್ಲಿ ಶೇ. 50ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವ ಬಗ್ಗೆ ಏ.20ರ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕೊವಿಡ್ -19 ಪ್ರಕರಣ ಮೂರು ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು, ಹಿರಿಯ ಅಧಿಕಾರಿಗಳು, ತಜ್ಞ ವೈದ್ಯರ ಜೊತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸಕ್ಕೆ ಹಾಜರಾಗುವ ಸಂಬಂಧ ಏ.14ರಂದು ಕೆಲ ಮಾರ್ಪಾಡು ಮಾಡಿದ್ದರ ಬಗ್ಗೆ ಹೇಳಲಾಗಿತ್ತು. ಆದರೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಯೋಚಿಸಿ ಹೆಜ್ಜೆಯಿಡಬೇಕಿದೆ ಎಂದು ಹೇಳಿದರು.
ಲಾಕ್ ಡೌನ್ ಸಡಲಿಗೊಳಿಸಿದ ನಂತರ ಪ್ರಕರಣ ಹೆಚ್ಚದಂತೆ ನಿಭಾಯಿಸಲು ತೀರ್ಮಾನಿಸಲಾಗಿದ್ದು, ಜತೆಗೆ ಕಂಪನಿಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲು ತಜ್ಞರು ಅಭಿಪ್ರಾಯ ಕೊಟ್ಟಿದ್ದು ಅದರಂತೆ ಲಾಕ್ ಡೌನ್ ನಂತರ ಯಾವ ರೀತಿ ಮುನ್ನಡೆಯಬೇಕು ಎನ್ನುವ ಕುರಿತು ಮಾರ್ಗಸೂಚಿ ರಚಿಸಲು ತೀರ್ಮಾನಿಸಲಾಗಿದೆ. ಆದರೆ ಅದನ್ನು ಜಾರಿಗೆ ತರುವ ಮುನ್ನಾ ಅಂದರೆ ಏ. 20 ರಂದು ಮತ್ತೊಂದು ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
11 ಜಿಲ್ಲೆಗಳಲ್ಲಿ ಯಾವುದೇ ಸೋಂಕು ಪ್ರಕರಣಗಳು ವರದಿಯಾಗಿಲ್ಲ. ಆದರೆ ತಪಾಸಣೆ ನಡೆಸಿದಾಗಲೇ ವಾಸ್ತವ ಸ್ಥಿತಿ ಗೊತ್ತಾಗಲಿದೆ, ಏಪ್ರಿಲ್ ಅಂತ್ಯದೊಳಗೆ ಹೊಸದಾಗಿ 10 ಪ್ರಯೋಗಾಲಯ ಆರಂಭಿಸಲಾಗುವುದು. ಸದ್ಯ ರೋಗಿಗಳಿಗಾಗಿ ವಿಶೇಷ ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ, ಪ್ಲಾಸ್ಮ ಚಿಕಿತ್ಸೆಗೆ ಅನುಮತಿ ಕೋರಿ ಮನವಿ ಮಾಡಿದ್ದು, ಐಸಿಎಂಆರ್ ಅನುಮತಿಗಾಗಿ ಕಾಯುತ್ತಿದ್ದೇವೆ. ಯಾವುದೇ ಪ್ರಕರಣ ಇರದ ಜಿಲ್ಲೆಯಲ್ಲೂ ಈ ಲಕ್ಷಣದ ತಪಾಸಣೆ ನೀಡಲು ಸೂಚನೆ ನೀಡಲಾಗಿದೆ ಎಂದು ಯಡಿಯೂರಪ್ಪ ವಿವರಿಸಿದರು.
ಸಣ್ಣ ಕೈಗಾರಿಕೆ ಆರಂಭದ ಮಾಡುವ ಬೇಡಿಕೆ ಕುರಿತು ಚರ್ಚೆ ನಡೆಸಿದ್ದೇವೆ. ಜತೆಗೆ ಕಟ್ಟಡ ಕಾರ್ಮಿಕರಿಗೆ ಕೆಲಸ ಮಾಡುವ ಸ್ಥಳದಲ್ಲೇ ಅವರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ ಕೆಲಸ ಆರಂಭಕ್ಕೆ ಅವಕಾಶ ನೀಡುವ ಚಿಂತನೆ ಇದೆ. ಪರಿಸ್ಥಿತಿ ಸೂಕ್ತವಾಗಿದ್ದರೆ ಎಲ್ಲವೂ 20 ರಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಕ್ರಮ ಸಕ್ರಮ ಕುರಿತು ಚರ್ಚೆ ನಡೆಸಲಾಯಿತು, ಹಲವು ಅನಧಿಕೃತ ಬಡವಾಣೆ, ಕಟ್ಟಡಗಳಿಗೆ ಈಗಾಗಲೇ ಸರ್ಕಾರ ಮೂಲಸೌಕರ್ಯ ಕಲ್ಪಿಸಿದೆ. ಆದರೆ ಸರ್ಕಾರಕ್ಕೆ ತೆರಿಗೆ ಬರುತ್ತಿಲ್ಲ. ಹಾಗಾಗಿ ಅವುಗಳ ಸಕ್ರಮದ ಮೂಲಕ ರಾಜಸ್ವ ಸಂಗ್ರಹದ ಉದ್ದೇಶವನ್ನು ಹೊಂದಿದ್ದೇವೆ ಎಂದರು.
ಬೆಂಗಳೂರಿನಲ್ಲಿ 2.93 ಲಕ್ಷ ಅಂದಾಜು ಅಕ್ರಮ ಕಟ್ಟಡ, ರಾಜ್ಯದಲ್ಲಿ 35 ಲಕ್ಷ ಅಕ್ರಮಕಟ್ಟಡ ಇರುವ ಅಂದಾಜಿದೆ. ಇತರ ರಾಜ್ಯ ಯಾವ ರೀತಿ ದಂಡ ವಿಧಿಸಿ ಸಕ್ರಮ ಮಾಡಿವೆ ಎನ್ನುವ ಕುರಿತು ಅಧ್ಯಯನ ನಡೆಸಿ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು, ಇದಕ್ಕಾಗಿ ನಗರಾಭಿವೃದ್ಧಿ ಇಲಾಖೆ ಒಂದು ವಾರದಲ್ಲಿ ಹೊಸ ಮಾರ್ಗಸೂಚಿ ರಚಿಸಲಿದೆ ಎಂದರು.