NEWSಆರೋಗ್ಯನಮ್ಮರಾಜ್ಯ

ಕೊರೊನಾ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ, ಎಚ್ಚರಿಕೆ ಇರಲಿ: ಸಿಎಂ ಸಿದ್ದರಾಮಯ್ಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೋವಿಡ್-19 ಪರಿಸ್ಥಿತಿ ಅವಲೋಕಿಸಲು ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಭೆ ನಡೆಸಿ, ಅಧಿಕಾರಿಗಳು, ತಜ್ಞರು ಮತ್ತು ಸಚಿವರಿಂದ ಮಾಹಿತಿ ಪಡೆದರು.

ಬಳಿಕ ಕೆಲ ಸೂಚನೆಗಳನ್ನು ಅವರು ನೀಡಿದ್ದು, ಸದ್ಯಕ್ಕೆ ಕೊರೊನಾ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಮುಂಚಿತವಾಗಿಯೇ ಮುಂದೆ ಸಂಭವಿಸಬಹುದಾದ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯವಾದ ಎಲ್ಲ ಸವಲತ್ತು, ಸಲಕರಣೆಗಳನ್ನು ಸಜ್ಜುಗೊಳಿಸಿಟ್ಟುಕೊಳ್ಳಬೇಕು. ಸದ್ಯಕ್ಕೆ ಗಂಭೀರ ಪರಿಸ್ಥಿತಿಗೆ ತಲುಪಿಲ್ಲವಾದರೂ ವೆಂಟಿಲೇಟರ್, ಆಕ್ಸಿಜನ್, ಔಷಧ ಸೇರಿ ಇತ್ಯಾದಿ ಅಗತ್ಯಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಇನ್ನು ವಯಸ್ಸಾದವರು, ಗರ್ಭಿಣಿಯರು, ಹೃದಯ ಸಂಬಂಧಿ, ಶ್ವಾಸಕೋಶ ಸಮಸ್ಯೆ ಇರುವವರು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವುದು ಒಳ್ಳೆಯದು. ಈ ಬಗ್ಗೆ ಅರಿವು ಮೂಡಿಸಬೇಕು. ಪ್ರತೀ ವಾರ ಅಥವಾ ಅಗತ್ಯ ಬಿದ್ದರೆ ಮೂರು ದಿನಕ್ಕೊಮ್ಮೆ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಾ ತೀವ್ರ ನಿಗಾ ಇಡಬೇಕು ಎಂದು ಸೂಚನೆ ನೀಡಿದರು.

ಗರ್ಭಿಣಿಯರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ ಅವರನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸುವುದನ್ನು ನಿಲ್ಲಿಸಿ, ಎಲ್ಲ ಆಸ್ಪತ್ರೆಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಿಕೊಂಡಿರಬೇಕು. ಶೀತ, ನೆಗಡಿ, ಜ್ವರ ಇರುವ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸದಿರುವುದು ಉತ್ತಮ. ಶಾಲೆಗಳೂ ಈ ಬಗ್ಗೆ ಗಮನ ಹರಿಸಿ ಶೀತ, ನೆಗಡಿ ಇರುವ ಮಕ್ಕಳನ್ನು ವಾಪಾಸ್ ಪೋಷಕರ ಮೂಲಕ ಮನೆಗೆ ಕಳುಹಿಸಬೇಕು ಎಂದು ಸಲಹೆ ನೀಡಿದರು.

ಇನ್ನು ಎಂತಹುದೇ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿರಬೇಕು. ಕಳೆದ ಜನವರಿಯಿಂದಲೂ ಕೊರೊನಾ ಪ್ರಕರಣಗಳು ಅಲ್ಲಲ್ಲಿ ಒಂದೊ – ಎರಡು ಕಾಣಬರುತ್ತಿದ್ದು, ಮೇ ತಿಂಗಳಲ್ಲಿ ಉಲ್ಬಣವಾಗಿವೆ. ಮೇ ತಿಂಗಳ ನಾಲ್ಕನೇ ವಾರಕ್ಕೆ 62 ಪ್ರಕರಣಗಳು ವರದಿಯಾಗಿವೆ. ಆದರೆ ಗಂಭೀರ ಎನ್ನುವಂತಹ ಪ್ರಕರಣಗಳ ಸಂಖ್ಯೆ ಒಂದು ಮಾತ್ರ ಇದೆ. ಎಸ್‌ಎಆರ್‌ಐ ಪ್ರಕರಣಗಳಲ್ಲಿ ತಪಾಸಣೆ ಕಾರ್ಯ ಈಗಾಗಲೇ ನಡೆಯುತ್ತಿದೆ. ನೆರೆಯ ರಾಜ್ಯಗಳಾದ ಕೇರಳದಲ್ಲಿ 95, ತಮಿಳು ನಾಡಿನಲ್ಲಿ 66, ಮಹಾರಾಷ್ಟ್ರ ಗಳಲ್ಲಿ 56 ಪ್ರಕರಣಗಳು ವರದಿಯಾಗಿವೆ.

ಹೀಗಾಗಿ ರಾಜ್ಯದಲ್ಲಿ ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಬಾಣಂತಿ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊರೊನಾ ಸಹಾಯವಾಣಿ ಪ್ರಾರಂಭಿಸಬೇಕು. ಮುಂದಿನ ದಿನಗಳಲ್ಲಿ ಅವಶ್ಯಕತೆ ಕಂಡು ಬಂದರೆ
ವಿಮಾನ ನಿಲ್ದಾಣಗಳಲ್ಲಿ ಹೊರಗಡೆಯಿಂದ ಬರುವ ಪ್ರಯಾಣಿಕರಿಗೆ ತಪಾಸಣಾ ಘಟಕಗಳನ್ನು ಪ್ರಾರಂಭಿಸಬೇಕು ಎಂದು ಸೂಚನೆ ನೀಡಿದರು.

ಇನ್ನು ಕೊರೊನಾ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು. ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾ ಆಸ್ಪತ್ರೆಗಳೂ ಸರ್ವ ಸನ್ನದ್ಧವಾಗಿ ಇರಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ರಜಾ ಹಾಕಿ ತೆರಳದೆ ಕೇಂದ್ರ ಸ್ಥಾನದಲ್ಲಿಯೇ ಇದ್ದು ಕಾರ್ಯ ನಿರ್ವಹಿಸಬೇಕು. ರೂಪಾಂತರಿ ಕೊರೊನಾ ವೈರಾಣುವಿಗೆ ಸಂಬಂಧಿಸಿದಂತೆ ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯಾಗಿ ವ್ಯಾಕ್ಸಿನ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಕಾಲ ಕಾಲಕ್ಕೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

Megha
the authorMegha

Leave a Reply

error: Content is protected !!