ಬಳ್ಳಾರಿ: ರಾಜ್ಯದಲ್ಲಿ ಕೊವೀಡ್ 19- ತಡೆಗಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಳೆ(ಏ.19) ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಬಳ್ಳಾರಿಯ ರೂಪನಗುಡಿ ರಸ್ತೆಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಅವರು ಹಾಗೂ ದಾನಿಗಳಿಂದ 45ಸಾವಿರ ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಬಳ್ಳಾರಿಯಲ್ಲಿ 45 ಸಾವಿರ ಕುಟುಂಬಗಳಿಗೆ ಶಾಸಕ ಸೋಮಶೇಖರ್ ರೆಡ್ಡಿ ಮತ್ತು ದಾನಿಗಳು ರೇಷನ್ ಮುಟ್ಟಿಸೋ ಕೆಲಸ ಮಾಡುತ್ತಿದ್ದಾರೆ.ದಾನಿಗಳಿಗೆ ಭಗವಂತ ಮತ್ತಷ್ಟು ಶಕ್ತಿ ಕೊಡಲಿ ಎಂದು ಬೇಡುವೆ ಎಂದರು.
ನಿನ್ನೆ ಯಡಿಯೂರಪ್ಪ ನಮ್ಮ ಸಭೆ ಕರೆದು, ಮಾಹಿತಿ ಪಡೆದಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳನ್ನು ಎಬಿಸಿ ಅಂತ ವಿಂಗಡಣೆ ಮಾಡಲಾಗಿದೆ. ಏಪ್ರಿಲ್ 20ರ ನಂತರ ನಿಯಮ ಸಡಲಿಕೆಗಳ ಕುರಿತು ಚರ್ಚೆ ಮಾಡಲಾಗುತ್ತದೆ. ಜನರು ಕೂಡ ಬಹಳ ದಿನಗಳಾಯ್ತು ಒಂದೇ ಕಡೆ ಇದ್ದಾರೆ. ಕೆಲವೆಡೆ ದಿನದಿಂದ ದಿನಕ್ಕೆ ಕೇಸ್ ಹೆಚ್ಚಾಗುತ್ತಿವೆ. ಜನರು ಕೂಡ ಸಹಕಾರ ಕೊಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.
ಆರೆಂಜ್ ಝೋನ್ ನಲ್ಲಿ ಲಾಕ್ ಡೌನ್ ಸಡಲಿಕೆ ವಿಚಾರವಾಗಿ ಸಿಎಂ ಯಡಿಯೂರಪ್ಪ ಬಳಿ ನಮ್ಮ ಸಲಹೆ ನೀಡಿದ್ದೇನೆ ಎಂದು ವಿವರಿಸಿದ ಅವರು ಹೊಸಪೇಟೆಯಲ್ಲಿ 11 ಪಾಸಿಟಿವ್ ಪ್ರಕರಣ ವಿಚಾರದ ಕುರಿತ ಸೀಲ್ ಡೌನ್ ಆದ ಪ್ರದೇಶಗಳು ಮಾತ್ರ ಕಟ್ಟುನಿಟ್ಟಾಗಿ ಮಾಡಿ, ಉಳಿದ ಕಡೆ ಸಡಲಿಕೆ ನೀಡೋದು ಒಳ್ಳೇಯದು ಎಂದು ಅಭಿಪ್ರಾಯಪಟ್ಟರು.
ಶಾಸಕ ಜಿ.ಸೋಮಶೇಖರ್ ರೆಡ್ಡಿ ಮತ್ತಿತರರು ಇದ್ದರು.