ಕಲಬುರಗಿ: ಶಹಾಬಾದ ಪಟ್ಟಣದ ಅಪ್ಪರ್ ಮಡ್ಡಿ ಪ್ರದೇಶದಲ್ಲಿ ಶನಿವಾರ 16 ವರ್ಷದವನಿಗೆ ಕೊರೋನಾ ಪಾಸಿಟಿವ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಆತನ ನೇರ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆ ಹಾಕಿ ಎಲ್ಲರ ಸ್ಯಾಂಪಲ್ಸ್ ಗಳನ್ನು ಕೋವಿಡ್-19 ಪರೀಕ್ಷೆಗೆ ಕಳುಹಿಸಿ ಎಂದು ಡಿ.ಸಿ. ಶರತ್ ಬಿ. ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ ಮೇಕಿನ್ ಅವರಿಗೆ ಸೂಚಿಸಿದರು.
ಶನಿವಾರ ಪಟ್ಟಣದ ಅಪ್ಪರ್ ಮಡ್ಡಿ ಪ್ರದೇಶದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರ ಮನೆ ಹಾಗೂ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು ಪ್ರಸ್ತುತ ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು.
ಯಾವುದೇ ಕಾರಣಕ್ಕೂ ಜನಸಮೂಹ ಸೇರದಂತೆ ಮತ್ತು ಸಾರ್ವಜನಿಕರು ಅನಗತ್ಯ ರಸ್ತೆ ಮೇಲೆ ಸಂಚಾರ ಮಾಡದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಲಾಕ್ ಡೌನ್ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು.
ಈ ಹಿಂದೆ ಪಟ್ಟಣದಲ್ಲಿ ಕಂಡುಬಂದ ಎರಡು ಕೊರೊನಾ ಸೋಂಕಿತರ ನೇರ ಸಂಪರ್ಕದಲ್ಲಿ ಬಂದಿರುವ ವ್ಯಕ್ತಿಗಳ ಆರೋಗ್ಯದ ಸ್ಥಿತಿಗತಿ ನೋಡಿಕೊಂಡು ಅಗತ್ಯವಿದ್ದಲ್ಲಿ 14 ದಿನದ ಗೃಹ ಬಂಧನ ಅವಧಿ ಮುಗಿಯುವ ಹಂತದಲ್ಲಿರುವವರಿಗೆ ಮತ್ತೊಮ್ಮೆ ತಪಾಸಣೆ ಮಾಡಬೇಕು ಎಂದು ಡಾ.ಸುರೇಶ ಮೇಕಿನ್ ಅವರಿಗೆ ನಿರ್ದೇಶನ ನೀಡಿದರು.
ಅಪ್ಪರ್ ಮಡ್ಡಿ ಪ್ರದೇಶವನ್ನು ಈಗಾಗಲೆ ಕಂಟೇನ್ ಮೆಂಟ್ ಝೋನ್ ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆ ಬಂದ್ ಮಾಡಲಾಗಿದೆ. ಕೇವಲ ಒಂದು ಕಡೆ ಪ್ರವೇಶ ಮತ್ತು ನಿರ್ಗಮನಕ್ಕಾಗಿ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಪ್ರತಿನಿತ್ಯ ಅರೋಗ್ಯ ಸಿಬ್ಬಂದಿಗಳಿಂದ ಸ್ಕ್ರೀನಿಂಗ್ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರ ಸಾಗಿವೆ ಎಂದು ತಹಸೀಲ್ದಾರ್ ಸುರೇಶ ಶರ್ಮಾ ಡಿಸಿ ಅವರಿಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸಿ.ಇ.ಒ ಡಾ.ಪಿ.ರಾಜಾ, ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ, ಶಹಾಬಾದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ, ಡಿವೈ.ಎಸ್.ಪಿ. ವೆಂಕಣಗೌಡ ಪಾಟೀಲ, ನಗರಸಭೆ ಪೌರಾಯುಕ್ತ ವೆಂಕಟೇಶ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.