NEWSನಮ್ಮಜಿಲ್ಲೆಮೈಸೂರು

KSRTC: ತಿ.ನರಸೀಪುರ – ಮಳವಳ್ಳಿ ನಡುವೆ ಸಮರ್ಪಕ ಬಸ್‌ ವ್ಯವಸ್ಥೆ ಕಲ್ಪಿಸಿ- ಮೈಸೂರು ಡಿಸಿ ವೀರೇಶ್‌ಗೆ ರೈತ ಮುಖಂಡರ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಜಿಲ್ಲೆಯ ತಿ.ನರಸೀಪುರ – ಮಳವಳ್ಳಿ ನಡುವೆ ಹೋಗಿ ಬರಲು ಹೆಚ್ಚು ಬಸ್ಸುಗಳ ವ್ಯವಸ್ಥೆ ಮಾಡಿಕೊಡುವ ಮೂಲಕ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ನಗರದ ವಿಭಾಗೀಯ ನಿಯಂತ್ರಣಾಧಿಕಾರಿ ಅವರನ್ನು ರೈತ ಮುಖಂಡರು ಭೇಟಿ ಮಾಡಿ ಒತ್ತಾಯಿಸಿದರು.

ಇಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ. ವೀರೇಶ್ ಅವರನ್ನು ಭೇಟಿ ಮಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಪದಾಧಿಕಾರಿಗಳು ಪೀಕ್‌ ಟೈಂನಲ್ಲಿ ಬಸ್ಸುಗಳ ಸಂಖ್ಯೆ ಹೆಚ್ಚಿಸುವಂತೆ ಮನವಿ ಪತ್ರ ಸಲಿಸಿದರು.

ಈ ವೇಳೆ ಮಾತನಾಡಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು ನಮ್ಮ ನೇತೃತವದಲ್ಲಿ ಸಂಘದ ಪದಾಧಿಕಾರಿಗಳ ತಂಡ ಇಂದು ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಭೇಟಿ ಮಾಡಿ ತಿ.ನರಸೀಪುರದಿಂದ ಮಳವಳ್ಳಿಗೆ ಹೋಗಿ ಬರುವ ಮಾರ್ಗ ಮಧ್ಯದ ಮುಡುಕನಪುರ ಹಾಗೂ ಅಕ್ಕ ಪಕ್ಕದ ಹಳ್ಳಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ಸುಗಳು ಬಾರದ ಕಾರಣ ಹೆಚ್ಚು ಬಸ್ಸುಗಳ ಸೌಕರ್ಯ ಕಲ್ಪಿಸಿ ಕೊಡುವ ಬಗ್ಗೆ ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.

ಇನ್ನು ನರಸೀಪುರ ತಾಲೂಕು ಸೋಸಲೆ ಹೋಬಳಿ ಮುಡುಕನಪುರ ಮಾರ್ಗವಾಗಿ ನರಸೀಪುರದಿಂದ ಮಳವಳ್ಳಿಗೆ ಹೋಗಿ ಬರುವ ಮಾರ್ಗ ಮಧ್ಯದ ಹಳ್ಳಿಗಳಾದ ಬೆನಕನಹಳ್ಳಿ, ಮುಸುವಿನ ಕೊಪ್ಪಲು, ಮೇಗಡಹಳ್ಳಿ, ಕೆಬ್ಬೆಹುಂಡಿ, ಕೈಯಂಬಳ್ಳಿ, ಕಾರ್ಗಳ್ಳಿ, ಕೃಷ್ಣಾಪುರ, ದೊಡ್ಡೇಬಾಗಿಲು, ದೊಡ್ಡೆಬಾಗಿಲು ಗೆಟ್, ಹಲವಾರ, ಮುಡುಕನಪುರ, ಚಿದರವಳ್ಳಿ, ಎಸ್.ದೊಡ್ಡಪುರ.

ಇವಿಷ್ಟೆ ಅಲ್ಲದೆ ಕೆಂಪನಪುರ, ರಾಮೇಗೌಡನ ಪುರ, ನೆಲ್ಲಿಗೆರೆ, ಅವ್ವೇರಹಳ್ಳಿ, ಶನೇಶ್ವರ ದೇವಸ್ಥಾನ, ವಾಡಕೆಪುರ, ಹಂಗ್ರಾಪುರ, ರಾಗಿಬೊಮ್ಮನಹಳ್ಳಿ ಹಾಗೂ ಹುಚ್ಚನ ದೊಡ್ಡಿಗೇಟ್ ಮುಂತಾದ ಹಳ್ಳಿಗಳ ಮುಖಾಂತರ ಮುಡುಕನಪುರ ಮಾರ್ಗವಾಗಿ – ನರಸೀಪುರ-ಮಳವಳ್ಳಿಗೆ ಮತ್ತು ಮಳವಳ್ಳಿಯಿಂದ ತಿ ನರಸೀಪುರಕ್ಕೆ ಹೋಗಿ ಬರುವ ಮುಡುಕನಪುರ ಗ್ರಾಮದ ಹಾಗೂ ಅಕ್ಕ ಪಕ್ಕದ ಹಳ್ಳಿಗಳ ಜನಸಾಮಾನ್ಯರಿಗೆ ಬಸ್‌ ಇಲ್ಲದೆ ತೊಂದರೆ ಆಗುತ್ತಿದೆ.

ಇನ್ನು ಈ ಎಲ್ಲ ಗ್ರಾಮಗಳಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಗರ್ಭಿಣಿಯರು, ರೋಗಿಗಳು, ವೃದ್ಧರು ಆಸ್ಪತ್ರೆಗೆ ಹೋಗಿ ಬರಲು ಸಮಯಕ್ಕೆ ಸರಿಯಾದ ಬಸ್ಸುಗಳ ಸಂಚಾರ ವ್ಯವಸ್ಥೆ ಇಲ್ಲದೆ ಬಸ್ಸುಗಳು ಕಡಿಮೆ ಇದ್ದು ಅವುಗಳೂ ಕೂಡ ಸಮಯಕ್ಕೆ ಸರಿಯಾಗಿ ಬಾರದೆ ಇರುವುದರಿಂದ ತುಂಬಾ ಸಮಸ್ಯೆ ಯಾಗುತ್ತಿದೆ. ಹೀಗಾಗಿ ಗರ್ಭಿಣಿಯರು, ವಯಸ್ಸಾದ ವೃದ್ದರು ಆಸ್ಪತ್ರೆಗಳಿಗೆ ಹೋಗಿ ಬರಲು ಸಹ ಹರಸಾಹಸ ಪಡುತ್ತಿದ್ದಾರೆ.

ಜತೆಗೆ ರೈತರು ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ಮತ್ತು ಸರ್ಕಾರಿ ಕಚೇರಿಗಳು ಹಾಗೂ ನ್ಯಾಯಾಲಯಗಳಿಗೆ ಪ್ರತಿ ದಿನ ಸಮಯಕ್ಕೆ ಹೋಗಿ ಬರಲು ಸರಿಯಾದ ಬಸ್ಸುಗಳ ವ್ಯವಸ್ಥೆ ಇಲ್ಲದ ಕಾರಣ ಸಾರಿಗೆ ಸೌಕರ್ಯದಿಂದ ವಂಚಿತರಾಗಿ ಬೇರೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಆದ್ದರಿಂದ ತಾವು ತುರ್ತಾಗಿ ಕ್ರಮ ಕೈಗೊಂಡು ಹೆಚ್ಚು ಬಸ್ಸುಗಳ ವ್ಯವಸ್ಥೆ ಮಾಡಿಸಿ ಸಮಯಕ್ಕೆ ಸರಿಯಾಗಿ ಹೋಗಿ ಬರಲು ಅನುಕೂಲ ಮಾಡಿ ಕೊಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಈ ಬಗ್ಗೆ ಪರಿಶೀಲನೆ ಮಾಡಿ ನಿಮ್ಮ ಸಮಸ್ಯೆ ನಿವಾರಿಸುವತ್ತ ಗಮನಹರಿಸುತ್ತೇವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ. ವೀರೇಶ್ ರೈತ ಮುಖಂಡರಿಗೆ ಭರವಸೆ ನೀಡಿದರು.

ಭೇಟಿ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗನೂರು ಶಂಕರ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ತಿ.ನರಸೀಪುರ ತಾಲೂಕು ಮಹಿಳಾ ಅಧ್ಯಕ್ಷೆ ರೂಪ, ತಲಕಾಡು ಚಂದ್ರಮ್ಮ, ಮಮತಾ, ಸಂಜನಾ, ಮುಖಂಡರಾದ ಯಾಕನೂರು ರಾಜೇಶ್, ಕರೋಹಟ್ಟಿ ಉಮೇಶ್, ರಾಮಮೂರ್ತಿ ಮುಂತಾದವರು ಇದ್ದರು.

Megha
the authorMegha

Leave a Reply

error: Content is protected !!