ಸಾರಿಗೆ ನೌಕರರಿಂದ ಮನವಿ ಪತ್ರ ಸಲ್ಲಿಸುವ ಚಳವಳಿ ಆರಂಭ: ಸಿಎಂ, ಸಾರಿಗೆ ಮಂತ್ರಿ, ನಾಲ್ಕೂ ನಿಗಮಗಳ ಎಂಡಿಗಳಿಗೆ ಸಲ್ಲಿಕೆ
- ಸಾರಿಗೆ ನೌಕರರ ವೇತನ ಹೆಚ್ಚಳ- ನೀವು ಕೊಟ್ಟ ಸಂಕ್ರಾಂತಿ ಗಡುವು ಮುಗಿದು 15 ದಿನಗಳಾದವು..!!??
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರಿಗೆ ವೇತನ ಆಯೋಗದಂತೆ ಸರ್ಕಾರಿ ನೌಕರರಿಗೆ ಸರಿ ಸಮಾನವಾಗಿ ಅವರವರ ಹುದ್ದೆಗಳಿಗೆ ಅಂದರೆ ಎ, ಬಿ, ಸಿ ಹಾಗೂ ಡಿ ಗ್ರೂಪ್ ನೌಕರರಿಗೆ ಸರಿ ಸಮಾನವಾಗಿ ಕೊಡುತ್ತೇವೆ ಎಂದು ಭರವಸೆ ನೀಡಿದ ಸರ್ಕಾರ ಈವರೆಗೂ ಯಾವುದೇ ತೀರ್ಮಾನ ಮಾಡಿಲ್ಲ.
ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವರು ಕಳೆದ2024ರ ಡಿಸೆಂಬರ್ ಕೊನೆಯಲ್ಲಿ ಕೊಟ್ಟ ಭರವಸೆಯಂತೆ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಕೊಡುವ ಸಂಬಂಧ ಶೀಘ್ರ ನೌಕರರ ಸಂಘಟನೆಗಳ ಸಭೆ ಕರೆಯಬೇಕು ಎಂದು ಸಮಸ್ತ ನೌಕರರು ಒತ್ತಾಯಿಸಿದ್ದಾರೆ.
ಇನ್ನು ಈ ಹಿಂದೆ ಅಂದರೆ 31 ಡಿಸೆಂಬರ್ 2024ರಿಂದ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿತ್ತು. ಆ ವೇಳೆ ಇಲ್ಲ ಸಂಕ್ರಾಂತಿ ಆದ ಕೂಡಲೇ ಸಭೆ ಕರೆದು ಚರ್ಚಿಸಿದ ಬಳಿಕ ವೇತನ ಹೆಚ್ಚಳದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಸಚಿವರು ಮಾಧ್ಯಮಗಳ ಮೂಲಕ ಜಂಟಿ ಕ್ರಿಯಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮುಷ್ಕರ ವಾಪಸ್ ತೆಗೆದುಕೊಳ್ಳುವುದಕ್ಕೆ ಮನವಿ ಮಾಡಿದ್ದರು.
ಆದರೆ, ಸಂಕ್ರಾಂತಿ ಹಬ್ಬ ಆಗಿ 15ದಿನಗಳು ಕಳೆದಿದ್ದರೂ ಈವರೆಗೂ ಯಾವುದೆ ಸಂಘಟನೆಗಳ ಸಭೆ ಕರೆಯುವ ಮನಸ್ಸು ಮಾಡದ ಸರ್ಕಾರದ ನಡೆ ಈಗ ನಮಗೆ ಬೇಸರ ತರಿಸುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವರು ಶೀಘ್ರದಲ್ಲೇ ಸಭೆ ಕರೆಯಬೇಕು ಜತೆಗೆ ನಮ್ಮ ಪ್ರಮುಖ ಬೇಡಿಕೆಯಾದ ಸರಿ ಸಮಾನ ವೇತನವನ್ನು 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಘೋಷಣೆ ಮಾಡಬೇಕು ಎಂದು ಸಮಸ್ತ ಸಾರಿಗೆ ಅಧಿಕಾರಿಗಳು/ನೌಕರರು ಒತ್ತಾಯಿಸಿದ್ದಾರೆ.
ಅಲ್ಲದೆ ಈ ಸಂಬಂಧ ಸಾರಿಗೆ ನೌಕರರು ಮತ್ತು ಅವರ ಕುಟುಂಬದವರು ವೈಯಕ್ತಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಾರಿಗೆಯ ನಾಲ್ಕೂ ನಿಗಮಗಳ ಎಂಡಿಗಳಿಗೆ ಮನವಿ ಪತ್ರವನ್ನು ಅಂಚೆ ಮೂಲಕ ಸಲ್ಲಿಸುವ ಚಳವಳಿಯನ್ನು ಆರಂಭಿಸಿದ್ದಾರೆ. ಇದರ ಅಂಗವಾಗಿ ಮೊದಲಿಗೆ ಯಾದಗಿರಿ ಪ್ರಾದೇಶಿಕ ಕಾರ್ಯಾಗಾರದ ಸಿಬ್ಬಂದಿ ರವಿ ಭಾಸ್ಕರ ಎಂಬುವರು ಅಂಚೆ ಮೂಲಕ ಮನವಿ ಸಲ್ಲಿಸಿದ್ದಾರೆ.
ಇದೇ ರೀತಿ 4 ನಿಗಮಗಳ 1.25 ಲಕ್ಷ ಅಧಿಕಾರಿಗಳು/ನೌಕರರು ಸಮಯ ಸಿಕ್ಕಾಗ ಅಂಚೆ ಮೂಲಕ ಮನವಿ ಪತ್ರಗಳನ್ನು ಸಲ್ಲಿಸಿ ಚಳವಳಿಯನ್ನು ಯಶಸ್ವಿಗೊಳಿಸುವ ಮೂಲಕ ಯಾವುದೇ ಒಂದು ಸಂಘಟನೆ ಪರ ನಿಲ್ಲದೆ, ಅಧಿಕಾರಿಗಳು ನೌಕರರಿಗಾಗಿ- ನೌಕರರು ಅಧಿಕಾರಿಗಳಿಗಾಗಿ ಎಂಬ ಧ್ಯೇಯವಾಕ್ಯದೊಂದಿಗೆ ನೌಕರರ ಸಮಸ್ತ ಸಂಘಟನೆಗಳ ಬೆಂಬಲವನ್ನು ಕೋರಿ ಈ ಮನವಿ ಪತ್ರ ಚಳವಳಿ ಮಾಡುತ್ತಿದ್ದಾರೆ.