ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ಹಲವು ಕಡೆ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ರಸ್ತೆ ಕುಸಿತ ಮನೆಗೆ ನೀರು ನುಗಿರುವುದು ಸೇರಿ ಹಲವು ಅವಂತರಗಳು ಸೃಷ್ಟಿಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಪೂರ್ವ ಮುಂಗಾರಿನಲ್ಲಿ ಅಬ್ಬರಿಸುತ್ತಿರುವ ವರುಣನ ಆರ್ಭಟಕ್ಕೆ ಬೆಂಗಳೂರಿನ ಕೋರಮಂಗಲ, ಕೊಟ್ಟಿಗೆಪಾಳ್ಯ, ಸುಂಕನಕಟ್ಟೆ, ಮಲ್ಲೇಶ್ವರಂ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಮರಗಳು ಧರೆಗುರುಳಿವೆ.
ಇನ್ನು ಹಲವೆಡೆ ಕಾರುಗಳು ಮುಳುಗಡೆಯಾಗಿರುವ ವರದಿಯೂ ಆಗಿದೆ. ಮಲ್ಲೇಶ್ವರಂನ 8ನೇ ಕ್ರಾಸ್‌ನಲ್ಲಿ ಮರವೊಂದು ಬಿದ್ದಿದ್ದು, ಇದರಿಂದ ನಾಲ್ಕು ಕಾರುಗಳು ಜಖಂಗೊಂಡಿವೆ. ಇನ್ನು ಪಟ್ಟೇಗಾರನ ಪಾಳ್ಯದಲ್ಲಿ ರಸ್ತೆ ಕುಸಿದಿದ್ದು, ಸಂಚಾರಕ್ಕೆ ತೊಂದರೆಯಾಗಿದೆ.
ರಾಜಕಾಲುವೆ ಮೂಲಕ ಬಂದ ಮಳೆನೀರು ಮನೆಗಳಿಗೆ ನುಗ್ಗಿರುವ ಪರಿಣಾಮ ಬೆಂಗಳೂರಿನ ಹೊಂಗಸಂದ್ರ ಸೇರಿ ತಗ್ಗು ಪ್ರದೇಶದ ಮನೆಗಳಲ್ಲಿ ವಾಸುತ್ತಿರುವ ಜನರು ಭಾರಿ ತೊಂದರೆ ಅನುಭವಿಸುವಂತಾಗಿದೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಬೇರೆ ಮನೆಯವರು ಸಹಾಯಕ್ಕೆ ಬಾರದಿರುವುದರಿಂದ ಬೆಂಗಳೂರಿನ ಹಲವು ತಗ್ಗು ಪ್ರದೇಶದ ನಿವಾಸಿಗಳು ಯಾತನೆಪಡುವಂತಾಗಿದೆ.
ಹೀಗೆಯೇ ಮಳೆ ತನ್ನ ಆರ್ಭಟವನ್ನು ಮುಂದುವರಿಸಿದ್ದೇ ಆದಲ್ಲಿ ಕೊರೊನಾ ತನ್ನ ಅಟ್ಟಹಾಸವನ್ನು ನಾಗಲೋಟದಲ್ಲಿ ಮುಂದುವರಿಸಲಿದ್ದು, ಲಕ್ಷಾಂತರ ಭಾರತೀಯರು ಈ ಯಮಸ್ವವರೂಪಿ ಕೋವಿಡ್-19ಗೆ ಬಲಿಯಾಗಲಿದ್ದಾರೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಮೈಸೂರಿನ ಹಲವೆಡೆ ಭಾರಿ ಮಳೆಯಾಗಿದ್ದು, ಅಲ್ಲಲ್ಲಿ ಹಾನಿಯಾಗಿದೆ. ಅಲ್ಲದೇ ಕೆಲವೆಡೆ ಬಿದ್ದ ಧಾರಾಕಾರ ಮಳೆಗೆ ಹಲವು ಅವಂತರಗಳು ಉಂಟಾಗಿದ್ದು, ಜನರು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಕರಾವಳಿ ಮತ್ತು ಮಲೆನಾಡಿನ ಹಲವೆಡೆ ಭಾರಿ ಮಳೆಯಾಗಿದ್ದು, ಮರಗಳು ಧರೆಗಳಿವೆ.