ಲಿವಿಂಗ್ ಟು ಗೆದರ್‌ನಲ್ಲಿದ್ದ ಯುವತಿ ಗರ್ಭಿಣಿ- ಮಗುವಿಗೆ ಜನ್ಮನೀಡಿದ ಕೆಲವೇ ನಿಮಿಷಗಳಲ್ಲಿ ಆಕೆ ಮೃತ: ಯುವಕ ಪರಾರಿ


ಬೆಂಗಳೂರು: ಲಿವಿಂಗ್ ಟು ಗೆದರ್‌ನಲ್ಲಿದ್ದ ಯುವತಿ ಗರ್ಭಿಣಿಯಾದ ನಂತರ ಯುವಕ ಕೈಕೊಟ್ಟಿದ್ದು, ಮಗುವಿಗೆ ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ಆಕೆ ಮೃತಪಟ್ಟಿರುವ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಹಾಲಿ ಬೆಂಗಳೂರಿನ ನಿವಾಸಿ, ಎಲ್‌ಎಲ್‌ಎಂ ವ್ಯಾಸಂಗ ಮಾಡುತ್ತಿದ್ದ ಸಂಜನಾ (25) ಮೃತಪಟ್ಟ ಯುವತಿ.
ಪಶ್ಚಿಮ ಬಂಗಾಳದಿಂದ ತಾಯಿ ಯೊಂದಿಗೆ ಬಂದಿದ್ದ ಸಂಜನಾ ವೆಂಕಟಾಪುರದಲ್ಲಿ ನೆಲೆಸಿದ್ದು, ಸೆಕ್ಯೂರಿಟಿ ಏಜೆನ್ಸಿಯಲ್ಲಿ ತಾಯಿ ಅಡುಗೆ ಕೆಲಸ ಮಾಡುತ್ತಿದ್ದಾರೆ. ಇತ್ತ ಸಂಜನಾ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಎಲ್‌ಎಲ್‌ಎಂ ವ್ಯಾಸಂಗ ಮಾಡುತ್ತಿದ್ದರು.
ಈ ನಡುವೆ ಸಂಜನಾಗೆ ಯುವಕನೊಬ್ಬನ ಪರಿಚಯವಾಗಿ ಸ್ನೇಹ ಬೆಳೆದಿದೆ. ನಂತರ ಅವರಿಬ್ಬರ ಮಧ್ಯೆ ಪ್ರೀತಿಯಾಗಿದ್ದು, ಆಕೆಯ ಮನೆಯಲ್ಲಿ ಆತನೂ ಲಿವಿಂಗ್ ಟು ಗೆದರ್‌ನಲ್ಲಿ ಇದ್ದ.
ನಂತರದ ದಿನಗಳಲ್ಲಿ ಸಂಜನಾ ಗರ್ಭಿಣಿಯಾಗಿದ್ದಾಳೆ. ಕಳೆದ ಎರಡು ಮೂರು ತಿಂಗಳ ಹಿಂದೆ ಸಂಜನಾ ಜೊತೆ ಜಗಳವಾಡಿ ಲಿವಿಂಗ್ ಟು ಗೆದರ್‌ನಲ್ಲಿದ್ದ ಆ ಯುವಕ ಆಕೆಯನ್ನು ಬಿಟ್ಟುಹೋಗಿದ್ದಾನೆ.
ಇನ್ನು ನಿನ್ನೆ ಮುಂಜಾನೆ ಸಂಜನಾಳಿಗೆ ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ತಾಯಿ ಆಸ್ಪತ್ರೆಗೆ ಹೋಗೋಣವೆಂದು ಹೇಳಿದ್ದಾರೆ. ಆದರೆ ಅದನ್ನು ಆಕೆ ನಿರಾಕರಿಸಿದ್ದಾಳೆ.

ಹೆರಿಗೆ ನೋವಿನಿಂದ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಯುವತಿ ತೀವ್ರ ರಕ್ತಸ್ರಾವವಾದ ಪರಿಣಾಮ ನಿತ್ರಾಣಗೊಂಡು ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾಳೆ.
ಇತ್ತ ವಿಷಯ ತಿಳಿಯುತ್ತಿದ್ದಂತೆ ವೈಯಾಲಿ ಕಾವಲ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಹಸುಗೂಸನ್ನು ಮಕ್ಕಳ ಆರೈಕೆ ಕೇಂದ್ರಕ್ಕೆ ಕಳುಹಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
Related
