ಬೆಂಗಳೂರು: ಹಿರಿಯ ಸಾಹಿತಿ, ಕವಿ ಪ್ರೊ.ಕೆ.ಎಸ್. ನಿಸಾರ್ ಅಹ್ಮದ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಸಕಲ ಸರ್ಕಾರಿ ಗೌರವದೊಂದಿಗೆ ಮುನಿರೆಡ್ಡಿಪಾಳ್ಯದ ಸ್ಮಶಾನದಲ್ಲಿ ಅತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಲಾಕ್ಡೌನ್ನಿಂದಾಗಿ ಹೆಚ್ಚು ಜನರು ಅತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಅಂತಿಮ ದರ್ಶನ ಪಡೆಯಬಹುದಾಗಿದೆ.
ನಿತ್ಯೋತ್ಸವ ಕವಿಯ ನಿಧನದಿಂದ ಕನ್ನಡದ ಮೇರು ಸಾಹಿತಿಯನ್ನು ನಾವು ಕಳೆದುಕೊಂಡಿದ್ದೇವೆ. ಸಾಹಿತ್ಯಲೋಕದಲ್ಲಿ ತನ್ನದೆ ಆದ ರೀತಿಯಲ್ಲಿ ಅವರು ಸೇವೆ ಸಲ್ಲಿಸಿದ್ದರು. ಅನೇಕ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದರು. ಅವರ ನಿಧನದಿಂದ ಕನ್ನಡ ನಾಡಿಗೆ, ಭಾಷೆಗೆ ದೊಡ್ಡ ಆಘಾತವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.
ನಿಸಾರ್ ಅಹ್ಮದ್ ಅವರ ಹೆಸರಿನಲ್ಲಿ ಟ್ರಸ್ಟ್ ವೊಂದನ್ನು ರಚಿಸಿ ಚಿಕ್ಕಬಳ್ಳಾಪುರ ಬಳಿ 2.20 ಎಕರೆ ಜಮೀನು ನೀಡಲಾಗಿದೆ. ಮುಂದಿನ ಕ್ಯಾಬಿನೆಟ್ ನಲ್ಲಿ ಘೋಷಣೆ ಆಗಬೇಕಿತ್ತು. ಅಷ್ಟರದಲ್ಲಿ ಅವರು ನಮ್ಮನ್ನು ಅಗಲಿದ್ದಾರೆ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅಶೋಕ ಕಂಬನಿ ಮಿಡಿದಿದ್ದಾರೆ.