NEWSಲೇಖನಗಳುಸಂಸ್ಕೃತಿ

ನಂದಿಗಿರಿಯ ಯೋಗ – ಭೋಗ ನಂದೀಶ್ವರರ ಸನ್ನಿಧಿಯಲಿ ಸಚಿವ ಸಂಪುಟ ಸಭೆ

ವಿಜಯಪಥ ಸಮಗ್ರ ಸುದ್ದಿ

ನಂದಿ ಗಿರಿಯಲ್ಲಿ ನಡೆಯುತಿರುವ ವೈಭೋಗವ ಕಂಡ ಬೆಳಗಿನ ಚುಮು ಚುಮು ಚಳಿಯಿಂದ ಮೈಮುದುರಿ ಮಲಗಿದ್ದ ಸೂರ್ಯದೇವ ತನ್ನ ಕಿರಣಗಳನು ನಿಧಾನವಾಗಿ ಪಸರಿಸಲು ಪ್ರಯತ್ನಿಸಿದರೂ ಬೆಟ್ಟಕ್ಕೆ ಹೊದಿಕೆಯಾಗಿದ್ದ ಮಂಜು ಅಷ್ಟು ಸಲೀಸಾಗಿ ಬಿಟ್ಟುಕೊಡಲು ಸಿದ್ದವಾಗಿರಲಿಲ್ಲವಾದರೂ ತನ್ನ ಡ್ಯೂಟಿ ಮಾಡಲೇಬೇಕಾದುದರಿಂದ ಮೋಡಗಳನು ಸೀಳಿ ಬೆಳಕು ಚೆಲ್ಲಿದ.

ನವ ವಧುವಿನಂತೆ ಸಿಂಗರಿಸಿಕೊಂಡಿದ್ದ ನಂದಿಬೆಟ್ಟದ ಮೇಲೆ ನೆಲೆಸಿರುವ ಯೋಗ ನಂದೀಶ್ವರನಿಗೂ ಈ ಬೆಳವಣಿಗೆಯಿಂದ ಆಶ್ಚರ್ಯ. ನಾಡಿನ ಮಂತ್ರಿ ಮಹೋದಯರ ದಂಡು ಬೆಟ್ಟದ ಮೇಲೆ ಧಾಂಗುಡಿಯಿಡುತ್ತಿರುವುದನ್ನು ತಿಳಿದ ಯೋಗ ನಂದೀಶ್ವರನಿಗೆ ಆದ ಪುಳಕ ಅಷ್ಟಿಷ್ಟಲ್ಲ.

ತಕ್ಷಣ ತನ್ನ ಜಂಗಮವಾಣಿಯಿಂದ ಬೆಟ್ಟದ ತಪ್ಪಲಲ್ಲಿರುವ ಭೋಗ ನಂದೀಶ್ವರನಿಗೆ ಕರೆಮಾಡಿ ಬೆಟ್ಟದ ಮೇಲಿನ ವೈಭೋಗವನ್ನು ವಿವರಿಸಿದ ಅಷ್ಟಕ್ಕೆ ಪ್ರತಿಕ್ರಿಯಿಸಿದ ಭೋಗನಂದೀಶ್ವರ ಗುರೂ ನನ್ನ ದೇವಾಲಯದ ಆವರಣವೂ ಕೂಡ  ಹಾಗೆಯೇ ಸಿಂಗಾರಗೊಂಡಿದೆ.

ಮಂಗಳ ವಾದ್ಯದ ನಿನಾದ ನೀರ ಅಲೆಯಂತೆ ತೇಲಿ ಬರುತ್ತಿದೆ. ರಾಜ್ಯದ ಮಂತ್ರಿ ಮಹೋದಯರೆಲ್ಲಾ ಮೊದಲು ನನ್ನ ಸನ್ನಿಧಿಗೆ ಬಂದು ನಂತರ ಬೆಟ್ಟಕ್ಕೆ ತೆರಳಲು ನಿಗದಿಯಾಗಿದೆಯಂತೆ. ರಾಜ್ಯ ಸಚಿವ ಸಂಪುಟ ಸಭೆ ಇಲ್ಲಿ ನಡೆಯುವುದರಿಂದ ಈ ಭಾಗದ ಅಭಿವೃದ್ಧಿಗೆ ವೇಗ ದೊರೆತು ಒಳ್ಳೆಯದಾದರೆ ಸಾಕು.

ಇನ್ನೇನು ಸಭೆ ಆರಂಭವಾಗುವ ಸಮಯ ಹತ್ತಿರ ಬರುತ್ತಿದೆ ನಾವು ಬೇಗ ರೆಡಿಯಾಗೋಣ ಮತ್ತೆ ಸಂಜೆ ಭೇಟಿಯಾಗೋಣ ಎಂದು ಯೋಗ ನಂದೀಶ್ವರ ಜಂಗಮವಾಣಿ(ಪೋನ್) ಕಟ್ ಮಾಡಿದ.

Megha
the authorMegha

Leave a Reply

error: Content is protected !!