BMTC ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿ ಬೈಕ್ ಹಿಂಬದಿ ಸವಾರ ಮಹಿಳೆ ಮೃತ, ಮತ್ತೊಬ್ಬರಿಗೆ ಗಾಯ ಆಸ್ಪತ್ರೆಗೆ ದಾಖಲು

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗೆ ಬೈಕ್ ಹಿಂಬದಿ ಸವಾರ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಇಂದು ಬೆಳಗ್ಗೆ ರೇಷ್ಮೆ ಸಂಸ್ಥೆ ಮುಂದೆ ನೈಸ್ ರಸ್ತೆ ಸಮೀಪ ನಡೆದಿದೆ.
ನಗರದ ಬನಶಂಕರಿಯ ಬಿಎಂಟಿಸಿ ಘಟಕ -20ಕ್ಕೆ ಸೇರಿದ ಬಸ್ ಹಾಗೂ ಬೈಕ್ ನಡುವೆ ಇಂದು ಬೆಳಗ್ಗೆ 10ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಈ ವೇಳೆ ಬೈಕ್ ಹಿಂಬದಿ ಕುಳಿತಿದ್ದ 60 ವರ್ಷ ಮಹಿಳೆ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ಆಗ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಅಲ್ಲದೆ ಬೈಕ್ ಸವಾರ ಮೃತ ಮಹಿಳೆಯ ಅಳಿಯನಿಗೂ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಬೈಕ್ ಸವಾರರ ಬಗ್ಗೆ ಪೂರ್ಣ ಮಾಹಿತಿ ತಿಳಿದು ಬಂದಿಲ್ಲ. ಬಸ್ ಅಂಚಿಪುರದಿಂದ ಬನಶಂಕರಿಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಬೈಕ್‌ನಿಂದ ಬಿದ್ದು ಮಹಿಳೆ ಬಸ್‌ಗೆ ಸಿಲುಕಿ ಮೃತಪಟ್ಟಿದ್ದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಬಸ್ ಚಾಲಕ ಉಮೇಶ್ ಹಾಗೂ ನಿರ್ವಾಹಕ ಮಲ್ಲೇಶ್ ಎಂಬುವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಜೀವ ಭಯದಿಂದ ಚಾಲನಾ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದರು.
ಇನ್ನು ವಿಷಯ ತಿಳಿಯುತ್ತಿದ್ದಂತೆ ಘಟಕ ವ್ಯವಸ್ಥಾಪಕರು ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಚಾಲನಾ ಸಿಬ್ಬಂದಿಗಳು ಬಂದಿದ್ದಾರೆ. ಪೊಲೀಸರು ಕೂಡ ಸ್ಥಳಕ್ಕೆ ಕೂಡಲೇ ಆಗಮಿಸಿ ಗಾಯಾಳು ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಳೆದ ಶುಕ್ರವಾರವಷ್ಟೆ ಪೀಣ್ಯ 2ನೇ ಹಂತದಲ್ಲಿ ಬಸ್ ರಸ್ತೆ ಬದಿ ಹೋಗುತ್ತಿದ್ದ 25 ವರ್ಷದ ಸುಮಾ ಎಂಬ ಯುವತಿಗೆ ಡಿಕ್ಕಿ ಹೊಡೆದು ಆಕೆ ಸ್ಥಳದಲ್ಲೇ ಅಸುನೀಗಿದ್ದರು. ಈ ದುರಂತ ಮಾಸುವ ಮುನ್ನವೇ ಮತ್ತೆ ಇಂದು 60 ವರ್ಷದ ಮಹಿಳೆ ಬಲಿಯಾಗಿದ್ದಾರೆ.

ಈ ರೀತಿ ಅಪಘಾತಗಳು ಸಂಭವಿಸುತ್ತಿರುವುದಕ್ಕೆ ಕಾರಣ ಏನು ಎಂಬ ಪ್ರಶ್ನೆ ಮೂಡುತ್ತಿದೆ. ಚಾಲನಾ ಸಿಬ್ಬಂದಿಗಳು ಅಧಿಕಾರಿಗಳ ಒತ್ತಡಕ್ಕೆ ಸಿಲುಕಿ ಆ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದರಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆಯೋ ಇಲ್ಲ ಬಸ್‌ಗಳನ್ನು ಡಿಪೋಗಳಲ್ಲಿ ಸರಿಯಾಗಿ ನಿರ್ವಾಹಣೆ ಮಾಡದಿರುವುದರಿಂದ ನಡೆಯುತ್ತಿದೆಯೋ ಗೊತ್ತಾಗುತ್ತಿಲ್ಲ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಸಂಸ್ಥೆಯ ವಿರುದ್ಧ ಕಿಡಿಕಾರುತ್ತಿದ್ದರು.
ಇನ್ನು ಬಹುತೇಕ ಡಿಪೋಗಳಲ್ಲಿ ಬಸ್‌ಗಳನ್ನು ಸರಿಯಾಗಿ ನಿರ್ವಾಹಣೆ (Maintenance) ಮಾಡುತ್ತಿಲ್ಲ. ಬಸ್‌ಗಳು ಖಂಡಿಷನ್‌ನಲ್ಲಿರುವುದಿಲ್ಲ. ಈ ರೀತಿಯ ಬಸ್‌ಗಳನ್ನು ರಸ್ತೆಗೆ ಇಳಿಸಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಚಾಲನಾ ಸಿಬ್ಬಂದಿಗಳ ಜೀವದ ಜತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
Related








