NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಮುಷ್ಕರಕ್ಕೆ ಸಿಎಂ, ಸಾರಿಗೆ ಸಚಿವರು, ಎಂಡಿಗಳೇ ನೇರ ಕಾರಣ:  ಲಿಖಿತ ಸಮಜಾಯಿಷಿ ಕೊಡುತ್ತಿರುವ ನೌಕರರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರು ಮುಷ್ಕರ ಮಾಡಲು ಮೂಲ ಕಾರಣ ನಾಲ್ಕೂ ಸಂಸ್ಥೆಯ ಆಡಳಿತ ವರ್ಗದ ಮುಖ್ಯಸ್ಥರೇ ಎಂದು ಆಪಾದನಾ ಪತ್ರ ನೀಡಿರುವ ಶಿಸ್ತುಪಾಲನಾಧಿಕಾರಿಯೂ ಆಗಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನೌಕರರು ಲಿಖಿತ ಸಮಜಾಯಿಷಿ ಕೊಡುತ್ತಿದ್ದಾರೆ.

ತಾವು ಜಾರಿ ಮಾಡಿರುವ ಆಪಾದನಾ ಪತ್ರದಲ್ಲಿ ನನ್ನ ಮೇಲೆ ಆರೋಪಗಳನ್ನು ಹೊರೆಸಿದ್ದೀರಿ. ಈ ಎಲ್ಲ ಆರೋಪಗಳನ್ನು ಈ ಕೆಳಕಂಡ ಕಾರಣಗಳಿಂದ ನಾನು ನಿರಾಕರಿಸುತ್ತೇನೆ ಎಂದು ಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸಮಜಾಯಿಷಿ ಪತ್ರದಲ್ಲಿ ಉತ್ತರಕೊಡುತ್ತಿದ್ದಾರೆ.

1) ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರು ಮುಷ್ಕರ ಮಾಡಲು ಮೂಲ ಕಾರಣ ನಾಲ್ಕೂ ಸಂಸ್ಥೆಯ ಆಡಳಿತ ವರ್ಗದ ಮುಖ್ಯಸ್ಥರು. ಇವರು ಸಂಸ್ಥೆಯ ನೌಕರರಿಗೆ ಕಾಲಕಾಲಕ್ಕೆ ವೇತನ ಪರಿಷ್ಕರಣೆ ಮಾಡಿ ಆ ಪರಿಷ್ಕರಣೆಯ ಬಾಕಿಗಳನ್ನು ನೀಡಿದ್ದರೆ ಈ ಮುಷ್ಕರ ನಡೆಯುತ್ತಿರಲಿಲ್ಲ.

2) ಸಾರಿಗೆ ನೌಕರರ ಸಂಘಟನೆಗಳು ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ನೀಡಿದ‌ ಮನವಿಗಳಿಗೆ ಸರ್ಕಾರ ಸ್ಪಂದಿಸಿದ್ದರೆ ಈ ಮುಷ್ಕರ ನಡೆಯುತ್ತಿರಲಿಲ್ಲ. ಈ ಮುಷ್ಕರ ನಡೆಯಲು ರಾಜ್ಯದ ಮುಖ್ಯ ಮಂತ್ರಿ, ಸಾರಿಗೆ ಮಂತ್ರಿ, ಮುಖ್ಯ ಕಾರ್ಯದರ್ಶಿ, ಸಾರಿಗೆ ಕಾರ್ಯದರ್ಶಿ, ಆರ್ಥಿಕ ಇಲಾಖೆಯ ಕಾರ್ಯದರ್ಶಿ, ಎಲ್ಲ 4 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಭದ್ರತಾ ಮತ್ತು ಜಾಗೃತ ನಿರ್ದೇಶಕರು, 4 ನಿಗಮಗಳ ವಿಭಾಗೀಯ ನಿಯಂತ್ರಣಾಧಿಕಾರಿ (ಶಿಸ್ತು ಪಾಲನಾಧಿಕಾರಿ) ಅವರೇ ನೇರವಾಗಿ ಕಾರಣ ಎಂದು ತಿಳಿಸಿದ್ದಾರೆ.

3) ರಾಜ್ಯ ಸರ್ಕಾರದ ಎಲ್ಲ ನಿಗಮ ಮಂಡಳಿಗಳಿಗೆ ಕಾಲಕಾಲಕ್ಕೆ ವೇತನ ಪರಿಷ್ಕರಿಸುವ ಸರ್ಕಾರ‌ ಸಾರಿಗೆ ನೌಕರರ ವಿಚಾರದಲ್ಲಿ ಮಾತ್ರ ಮಲತಾಯಿ ಧೋರಣೆ ನಡೆಸುತ್ತಿದೆ. ಆ ನಿಗಮ ಮಂಡಳಿಗಳ ಆಡಳಿತ ವರ್ಗ ಸರ್ಕಾರಕ್ಕೆ ಕಾಲ ಕಾಲಕ್ಕೆ ವೇತನ ಪರಿಷ್ಕರಣೆಯ ಸಂಬಂಧ ವ್ಯವಹರಿಸಿ ತನ್ನ ನೌಕರರಿಗೆ ವಿಳಂಬಕ್ಕೆ ಅವಕಾಶ ಮಾಡದೆ ವೇತನ ಪರಿಷ್ಕರಣೆಯನ್ನು ಮಾಡುವುದಿಂದ ಸರ್ಕಾರದ ಬೇರೆ ಎಲ್ಲ ನಿಗಮ ಮಂಡಳಿಗಳ ನೌಕರರು ಮುಷ್ಕರಕ್ಕೆ ಹೋಗುವುದಿಲ್ಲ.

ಇನ್ನು ಈ ಬಗ್ಗೆ ಸಮಗ್ರ ವಿಚಾರಣೆ ನಡೆಯಬೇಕಾಗಿದ್ದು ತಾವು ನನ್ನ ವಿರುದ್ಧ ಆರೋಪಿಸುವ ಎಲ್ಲ ಆಪಾದನೆಗಳಿಗೆ ದಾಖಲೆಗಳ ಸಮೇತ ನಾನು ವಿಚಾರಣೆಲ್ಲಿ ಸಾಕ್ಷಿಗಳನ್ನು ಒದಗಿಸಲು ಸಿದ್ಧನಿದ್ದು, ತಾವು ಕೂಡಲೇ ದಕ್ಷ ವಿಚಾರಣಾಧಿಕಾರಿಗಳನ್ನು ನೇಮಿಸಿ ವಿಚಾರಣೆಗೆ ಆದೇಶಿಸಬೇಕೆಂದು ತಮ್ಮನ್ನು ಕೋರುತ್ತೇವೆ ಎಂದು ನೌಕರರು ಮನವಿ ಮಾಡಿದ್ದಾರೆ.

4) ವಿಭಾಗ ನಿಯಂತ್ರಣಾಧಿಕಾರಿ ಹಾಗೂ ಶಿಸ್ತು ಪಾಲನಾಧಿಕಾರಿಯೂ ಆದ ತಾವು ಸಹ ವೇತನ ಅಧಿಕಾರಿಯಾಗಿರುತ್ತೀರಿ. ಕಾಲಕಾಲಕ್ಕೆ ವೇತನ ಪರಿಷ್ಕರಣೆ ಮಾಡುವಂತೆ ತಾವು ಸಂಸ್ಥೆಯ ಮೇಲಧಿಕಾರಿಗಳಿಗೆ ಸರ್ಕಾರಕ್ಕೆ ಮನವಿ ಮಾಡಿದ್ದರೆ ಈ ಮುಷ್ಕರ ನಡೆಯುತ್ತಿರಲಿಲ್ಲ. ಸಾರಿಗೆ ನೌಕರರ ಮುಷ್ಕರ ನಡೆಯಲು ತಾವೂ ಸಹ ನೇರ ಹೊಣೆಗಾರರಾಗಿರಿ.

5) ಸಾರಿಗೆ ಸಂಸ್ಥೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದು, ಈ ಸಂಬಂಧ ನ್ಯಾಯಾಲಯ ತೀರ್ಪು ಇನ್ನೂ ನೀಡಿಲ್ಲ. ನ್ಯಾಯಾಲಯದ ತೀರ್ಪು ಬರುವವರೆಗೂ ತಾವು ಯಾವುದೇ ಶಿಸ್ತು ಕ್ರಮ ಕೈಗೊಳ್ಳುವಂತಿಲ್ಲ. ಆದುದರಿಂದ ತಾವು ಜಾರಿ ಮಾಡಿರುವ ಆಪಾದನಾ ಪತ್ರದ ಮೇಲೆ ವಿಚಾರಣೆ ನಡೆಯುವುದು ಸೂಕ್ತವಾಗಿದ್ದು, ವಿಳಂಬಕ್ಕೆ ಅವಕಾಶ ನೀಡದೆ ವಿಚಾರಣಾಧಿಕಾರಿಯನ್ನು ನೇಮಿಸಬೇಕೆಂದು ತಮ್ಮನ್ನು ಕೋರುತ್ತೇವೆ. ವಿಚಾರಣೆ ನಡೆಸದೆ ತಾವು ಯಾವುದೇ ಶಿಸ್ತು ಕ್ರಮ ಕೈಗೊಳ್ಳಬಾರದೆಂದೂ ತಮ್ಮನ್ನು ವಿನಂತಿಸುತ್ತೇವೆ ಎಂದು  ಹೇಳಿದ್ದಾರೆ.

ಜತೆಗೆ ಈ ಪ್ರತಿಗಳನ್ನು ಮುಖ್ಯ ಮಂತ್ರಿಗಳು, ಸಾರಿಗೆ ಸಚಿವರು, ಮುಖ್ಯ ನ್ಯಾಯಮೂರ್ತಿ, ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ ಕಾರ್ಯದರ್ಶಿ, ಸಾರಿಗೆ ಇಲಾಖೆ ಕಾರ್ಯದರ್ಶಿ, ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ನಿಗಮಗಳ ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಆರ್ಥಿಕ ಸಲಹೆಗಾರರು, ನಿಗಮಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮಾಹಿತಿಗಾಗಿ ರವಾನಿಸುತ್ತಿದ್ದಾರೆ.

Megha
the authorMegha

Leave a Reply

error: Content is protected !!