NEWSಮೈಸೂರುಸಂಸ್ಕೃತಿ

ಮೈಸೂರು: ದಸರಾ ಆನೆಗಳಿಗೆ ನಿತ್ಯ ಅರಮನೆಯಿಂದ ಬನ್ನಿ ಮಂಟಪದವರೆಗೆ ಬೆಳಗ್ಗೆ-ಸಂಜೆ ದೈನಂದಿನ ನಡಿಗೆ ತಾಲೀಮು

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ನಾಡಹಬ್ಬ ದಸರಾದ ಜಂಬೂ ಸವಾರಿ ಮೆರವಣಿಗೆ ತಾಲೀಮನ್ನು ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಈಗಾಗಲೇ ಆರಂಭಿಸಿದ್ದು, ಈ ತಾಲೀಮಿನಲ್ಲಿ ಗಜಪಡೆಯ ಮೊದಲ ಹಂತದ 9 ಆನೆಗಳು ಭಾಗವಹಿಸುತ್ತಿದ್ದಾವೆ.

ವಿಶ್ವ ಆನೆ ದಿನ ಈ ದಿನದಂದೇ ದಸರಾದ ಮೊದಲ ತಂಡದ ಗಜಪಡೆ ತಾಲೀಮನ್ನು ಆರಂಭಿಸಿದ್ದು, ವಿಶೇಷವಾಗಿತ್ತು. ಅಂದು (ಆ.12) ಬೆಳಗ್ಗೆ 7.30ಕ್ಕೆ ಅರಮನೆ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯದ ಬಳಿಯ ಆನೆ ಶಿಬಿರದಿಂದ ಹೊರಟ ಅಭಿಮನ್ಯು, ಧನಂಜಯ, ಭೀಮ, ಏಕಲವ್ಯ, ಮಹೇಂದ್ರ, ಕಂಜನ್, ಪ್ರಶಾಂತ ಹೆಣ್ಣಾನೆಗಳಾದ ಕಾವೇರಿ ಹಾಗೂ ಲಕ್ಷ್ಮೀ ಆನೆಗಳು ಅರಮನೆ ಮುಂಭಾಗದಿಂದ ಹೊರಟು ಬಲರಾಮ ದ್ವಾರದ ಮೂಲಕ ಕೆ.ಆರ್.ವೃತ್ತ, ಸಯ್ಯಾಜಿರಾವ್ ವೃತ್ತ, ಆಯುರ್ವೇದ ಆಸ್ಪತ್ರೆ ಸರ್ಕಲ್​ನಿಂದ ಆರ್.ಎಂ.ಸಿ ಮಾರುಕಟ್ಟೆವರೆಗೆ ಸಾಗಿದವು.

ದಸರಾ ಗಜಪಡೆಗೆ ಭಾರ ಹೊರುವ ತಾಲೀಮು: ಎರಡನೇ ತಂಡದ ಆನೆಗಳು ಆಗಮಿಸಿದ ಬಳಿಕ ದಸರಾ ಗಜಪಡೆಗೆ ಭಾರ ಹೊರುವ ತಾಲೀಮು ಆರಂಭವಾಗಲಿದೆ. ಹೌದು! ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಮೊದಲ ತಂಡದ ಗಜಪಡೆಗೆ ತಾಲೀಮು ಆರಂಭವಾಗಿದೆ. ಕಾಡಿನಲ್ಲಿ ಸಂಚರಿಸುತ್ತಿದ್ದ ಆನೆಗಳು ಜನಜಂಗುಳಿ, ವಾಹನಗಳ ಸಂಚಾರಕ್ಕೆ ಒಗ್ಗಿಕೊಳ್ಳುವಂತೆ ಮಾಡಲು ಅರಮನೆ ಆವರಣದಿಂದ ಆರ್‌ಎಂಸಿ ವೃತ್ತದವರೆಗೆ ತಾಲೀಮು ನಡೆಸಲಾಗುತ್ತಿದೆ.

ಮುಂದಿನ 15 ದಿನಗಳ ನಂತರ 2ನೇ ತಂಡದ ಆನೆಗಳನ್ನು ಕರೆತರಲಾಗುತ್ತದೆ. ಈ ನಿಟ್ಟಿನಲ್ಲಿ ಡಿಸಿಎಫ್‌ ಪ್ರಭುಗೌಡ ಅವರು ಅನುಮತಿಗಾಗಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಅನುಮತಿ ದೊರೆತ ಕೂಡಲೇ 2ನೇ ತಂಡದ ಆನೆಗಳನ್ನು ಅರಮನೆಗೆ ಸ್ವಾಗತಿಸಲಾಗುತ್ತದೆ. ಬಳಿಕ ಒಟ್ಟು 14 ಆನೆಗಳನ್ನು ಒಳಗೊಂಡಂತೆ ತಾಲೀಮು ಆರಂಭಿಸಲಾಗುತ್ತದೆ. ಈ ಹಂತದಲ್ಲಿ ಕೆಲವು ಆನೆಗಳಿಗೆ ಭಾರ ಹೊರುವ ತಾಲೀಮು ನಡೆಸಲಾಗುವುದು.

ನಡಿಗೆ ತಾಲೀಮು: ಆನೆಗಳಿಗೆ ದೈನಂದಿನ ತಾಲೀಮು ಅರಮನೆಯಿಂದ ಬನ್ನಿ ಮಂಟಪದವರೆಗೆ ಬೆಳಗ್ಗೆ ಮತ್ತು ಸಂಜೆ ನಡೆಯುತ್ತಿದೆ. ಈ ತಾಲೀಮಿನಲ್ಲಿ ಆನೆಗಳು ಜಂಬೂ ಸವಾರಿಯ ಮಾರ್ಗದಲ್ಲಿ ಪರಸ್ಪರ ಸಮನ್ವಯದಿಂದ ನಡೆಯುವ ಅಭ್ಯಾಸವನ್ನು ಕಲಿಯುತ್ತಿವೆ.

ಭಾರ ಹೊರುವ ತರಬೇತಿ: ನಾನಾ ಹಂತಗಳಲ್ಲಿ ಕ್ರಮೇಣ ಮರಳು ಮೂಟೆಗಳ ಭಾರ ಹೆಚ್ಚಿಸಿ ಮೂರು ಹಂತಗಳಲ್ಲಿ ಭಾರ ಹೊರುವ ತಾಲೀಮು ನೀಡಲಾಗುತ್ತದೆ. ಈ ಹಂತದಲ್ಲಿ ಅಂಬಾರಿ ಆನೆ ಅಭಿಮನ್ಯು ಹಾಗೂ ಭವಿಷ್ಯದಲ್ಲಿ ಈ ಜವಾಬ್ದಾರಿ ಹೊರುವ 2 ನೇ ಹಂತದ ಆನೆಗಳಿಗೆ ಭಾರ ಹೊರುವ ತಾಲೀಮು ನಡೆಸಲಾಗುತ್ತದೆ.

ಮರದ ಅಂಬಾರಿ ತಾಲೀಮು: ಭಾರ ಹೊರುವ ತಾಲೀಮಿನ ನಂತರ ಪ್ರಮುಖ ಆನೆಗಳಿಗೆ ಮರದ ಅಂಬಾರಿ ಹೊರುವ ತರಬೇತಿ ನೀಡಲಾಗುತ್ತದೆ. ಈ ತಾಲೀಮಿನ ಕಡೆ ಹಂತದಲ್ಲಿ ಅರಮನೆ ಒಳಾವರಣದಲ್ಲಿ ದಸರಾ ಜಂಬೂ ಸವಾರಿ ದಿನ ನಡೆಯುವ ಎಲ್ಲಾ ಪದ್ಧತಿಗಳನ್ನು ಒಳಗೊಂಡಂತೆ ಮರದ ತಾಲೀಮು ಮಾಡಿಸಲಾಗುತ್ತದೆ.

ಶಬ್ಧ ತಾಲೀಮು: ಮರದ ಅಂಬಾರಿ ಹೊತ್ತ ಬಳಿಕ ಆನೆಗಳಿಗೆ ಮುಖ್ಯವಾಗಿ ಶಬ್ಧ ತಾಲೀಮು ನಡೆಸಲಾಗುತ್ತದೆ. ಜಂಬೂ ಸವಾರಿ ವೇಳೆ ಅರಮನೆ ಬಳಿ ನಾನಾ ಸುತ್ತುಗಳಲ್ಲಿ ಕುಶಾಲತೋಪು ಸಿಡಿಸಲಾಗುತ್ತದೆ. ಈ ಸಂದರ್ಭದಲ್ಲಿಅವು ಬೆದರಿ ಸಾವಿರಾರು ಜನರ ನಡುವೆ ಯಾವುದೇ ಅವಾಂತರಗಳಾಗದಿರಲಿ ಎಂಬ ಕಾರಣಕ್ಕೆ ಆನೆಗಳ ಮುಂದೆ ಸಿಡಿಮದ್ದು ಸಿಡಿಸಿ ಅವುಗಳು ಶಬ್ಧಕ್ಕೆ ಅಂಜದಂತೆ ತರಬೇತಿ ನೀಡಲಾಗುತ್ತದೆ.

ಪೌಷ್ಟಿಕ ಆಹಾರ: ತಾಲೀಮಿನ ಜತೆಗೆ ಆನೆಗಳಿಗೆ ವಿಶೇಷ ಆಹಾರ ವ್ಯವಸ್ಥೆಯನ್ನು ಒದಗಿಸಲಾಗಿದೆ. ಮೊಳಕೆ ಕಾಳು, ಭತ್ತ, ಬೆಲ್ಲ, ಬೆಣ್ಣೆ, ಕೊಬ್ಬರಿ ಮತ್ತು ವಿವಿಧ ಸೊಪ್ಪುಗಳನ್ನು ಒಳಗೊಂಡ ಆಹಾರವನ್ನು ದಿನಕ್ಕೆ ಎರಡು ಬಾರಿ ನೀಡಲಾಗುತ್ತದೆ. ಅಭಿಮನ್ಯುವಿಗೆ ಹೆಚ್ಚಿನ ಬೆಣ್ಣೆ ಮತ್ತು ಕಬ್ಬಿನ ಜತೆ ವಿಶೇಷ ಆಹಾರ ನೀಡಲಾಗುತ್ತಿದೆ.

ತಾಲೀಮಿನ ಬಗ್ಗೆ ಡಿಸಿಎಫ್ ಪ್ರಭುಗೌಡ ಹೇಳಿದ್ದೇನು?: ಈಗಾಗಲೇ ದಸರಾ ಗಜಪಡೆಗೆ ಜಂಬೂ ಸವಾರಿ ತಾಲೀಮನ್ನು ಆರಂಭಿಸಲಾಗಿದ್ದು, ಮೊದಲ ಹಂತವಾಗಿ 9 ಆನೆಗಳ ತಾಲೀಮನ್ನು ಆರ್.ಎಂ.ಸಿ ಮಾರುಕಟ್ಟೆ ಸರ್ಕಲ್​ವರೆಗೆ ನಡೆಸಲಾಯಿತು. ಎಲ್ಲ ಆನೆಗಳ ಆರೋಗ್ಯ ಪರೀಕ್ಷೆಯನ್ನು ವೈದ್ಯರು ಮಾಡಿದ್ದು, ಎಲ್ಲ ಆನೆಗಳು ಆರೋಗ್ಯವಾಗಿವೆ. ಆನೆಗಳಿಗೆ ಸಾಮಾನ್ಯ ಆಹಾರದ ಜೊತೆಗೆ ವಿಶೇಷ ಆಹಾರಗಳನ್ನು ಸಹ ನೀಡಲಾಗುತ್ತಿದೆ. ಮೊದಲ ಹಂತದ 9 ಆನೆಗಳು ಈಗಾಗಲೇ ಹಲವು ದಸರಾಗಳಲ್ಲಿ ಭಾಗಿ ಆಗಿರುವುದರಿಂದ ಈ ಎಲ್ಲ ಆನೆಗಳು ಶಬ್ದಕ್ಕೆ, ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡಿವೆ. ನಮಗೆ ಯಾವುದೇ ಭಯ ಇಲ್ಲ.

Megha
the authorMegha

Leave a Reply

error: Content is protected !!
Latest news
NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ ಪೆಟ್ರೋಲ್‌, ಡೀಸೆಲ್‌ ಬಳಿಕ CNG ದರದಲ್ಲೂ ಏರಿಕೆ- ಎರಡನೇ ಬಾರಿಗೆ 2ರೂ. ಹೆಚ್ಚಳ -ಗ್ರಾಹಕರಿಗೆ ಶಾಕ್‌ ಕೊಟ್ಟ MGL ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್‌: ಬಿಲ್‌ಗಳಿಗೆ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಮಾಡಿ KERC ಆದೇಶ- ಜೂನ್‌... BMTC KSRTC ನಿವೃತ್ತ ನೌಕರರ ಪ್ರತಿಭಟನೆ: ಕನಿಷ್ಠ ಪಿಂಚಣಿ 7500 ರೂ. ನೀಡಲು ಆಗ್ರಹ