ಕನಕಪುರ: ಕೊರೊನಾ ಸೋಂಕಿತರ ಸಂಖ್ಯೆ ಪಟ್ಟಣದಲ್ಲಿ ಹೆಚ್ಚಾಗಿತ್ತಿರುವ ಹಿನ್ನೆಲೆಯಲ್ಲಿ ಕನಕಪುರವನ್ನು ಜುಲೈ 1ರವರೆಗೆ ಲಾಕ್ ಡೌನ್ ಮಾಡಲು ನಾಗರಿಕರು ಒಪ್ಪಿಗೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾನುವಾರ ಘೋಷಣೆ ಮಾಡಿದ್ದಾರೆ.
ಕೊರೊನಾ ರಣಕೇಕೆಗೆ ಕನಕಪುರ ಜನ ಬೆಚ್ಚಿಬಿದ್ದಿದ್ದು, ಇಂದಿನಿಂದ (ಜೂನ್ 22) ಕನಕಪುರದಲ್ಲಿ ಜನರು ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ಮುಂದಾಗಿದ್ದು, ಬೆಳಗ್ಗೆ 11 ರ ವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಅವಕಾಶ ನೀಡಲಾಗಿದೆ.
ನಂತರ ಸಂಪೂರ್ಣ ಲಾಕ್ ಡೌನ್ ಆಗಲಿದ್ದು, ಜನರು ಓಡಾಡುವಂತಿಲ್ಲ. ಹೀಗಾಗಿ ಸೋಮವಾರ ಕೆಲ ಅಂಗಡಿಗಳು ಓಪನ್ ಆಗಿದ್ದು, ಹಲವು ಅಂಗಡಿಗಳು ಕ್ಲೋಸ್ ಆಗಿವೆ.
ಕೊರೊನಾ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕನಕಪುರ ಶಾಸಕರೂ ಆದ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅರ್ಚನಾ, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಪಟ್ಟಣದ ನಾಗರಿಕರ ಸಭೆ ನಡೆಯಿತು. ಸಭೆಯಲ್ಲಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರ ಸಲಹೆ ಪಡೆದು ನಂತರ 9 ದಿನ ಪಟ್ಟಣವನ್ನು ಲಾಕ್ ಡೌನ್ ಮಾಡುವ ಘೋಷಣೆ ಮಾಡಿದ್ದಾರೆ.
ಇದು ಸರ್ಕಾರದ ಆದೇಶವಲ್ಲ
ಕನಕಪುರವನ್ನು ಲಾಕ್ ಡೌನ್ ಮಾಡುತ್ತಿರುವುದು ಸರ್ಕಾರದ ಆದೇಶವಲ್ಲ, ಆರೋಗ್ಯಕ್ಕಾಗಿ. ಪಟ್ಟಣದ ನಾಗರಿಕರೆಲ್ಲರೂ ಸೇರಿ ತೆಗೆದುಕೊಂಡ ನಿರ್ಧಾರ. ಇನ್ನು ಶಾಲೆ, ಕಾಲೇಜು ಪರೀಕ್ಷೆಗಳು ಮಾಮೂಲಿನಂತೆ ನಡೆಯುತ್ತವೆ, ಮದ್ಯದಂಗಡಿಗಳು ತೆರೆದಿರುತ್ತವೆ ಅವುಗಳಿಗೆ ಒಂದು ಸಮಯ ನಿಗದಿ ಮಾಡಲು ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಡಿಕೆಶಿ ಹೇಳಿದರು.
ಇನ್ನು ಹಾಲು, ಹಣ್ಣು, ತರಕಾರಿ, ದಿನಸಿ ಅಂಗಡಿ, ಹಾಗೂ ಮಾಂಸದಂಡಿಗಳು ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ಮಾತ್ರ ತೆರೆಯಬೇಕು. ಮೆಡಿಕಲ್ ಸ್ಟೋರ್ ಮತ್ತು ಆಸ್ಪತ್ರೆ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಸಭೆ ಮಾಡಿ ಅಂತಿಮ ಮಾಡುತ್ತಾರೆ ಎಂದು ಡಿಕೆಶಿ ತಿಳಿಸಿದರು.
ಡಿಕೆಎಸ್ ಟ್ರಸ್ಟ್ ನಿಂದ ತಲಾ ನೂರು ರೂ.
ಜಿಲ್ಲೆಯಲ್ಲಿ ಕ್ವಾರಂಟೈನ್ ಇರುವ ಜನರಿಗೆ ಸರ್ಕಾರವು ಊಟಕ್ಕೆ 60 ರೂಪಾಯಿ ನಿಗದಿ ಮಾಡಿದೆ. ಸರ್ಕಾರ ನೀಡುವ ಹಣದ ಜೊತೆಗೆ ನಮ್ಮ ಡಿಕೆಎಸ್ ಟ್ರಸ್ಟ್ ವತಿಯಿಂದ ಒಬ್ಬರಿಗೆ ನೂರು ನೀಡುತ್ತೇವೆ. ಒಟ್ಟು ಒಬ್ಬರಿಗೆ 160 ರೂಪಾಯಿಯ ಉತ್ತಮ ದರ್ಜೆಯ ಆಹಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ಉತ್ತಮ ಊಟ ಒದಗಿಸಲು ಜಿಲ್ಲಾಡಳಿತಕ್ಕೆ ಕಷ್ಟವಾದರೆ ನಮ್ಮ ಟ್ರಸ್ಟ್ ವತಿಯಿಂದಲೇ ಸರಬರಾಜು ಮಾಡುತ್ತೇವೆ ಎಂದು ಹೇಳಿದರು.