ನ್ಯೂಡೆಲ್ಲಿ: ಎಸ್ಬಿಐ ತನ್ನ ‘ವರ್ಕ್ ಫ್ರಮ್ ಹೋಮ್’ ವ್ಯವಸ್ಥೆಯನ್ನು ‘ವರ್ಕ್ ಫ್ರಮ್ ಎನಿವೇರ್’ಗೆ ಉನ್ನತೀಕರಿಸುತ್ತಿದೆ. ಈಗಾಗಲೇ 19 ವಿದೇಶಿ ಕಚೇರಿಗಳಲ್ಲಿ ಈ ವ್ಯವಸ್ಥೆಯನ್ನು ಎಸ್ಬಿಐ ಜಾರಿಗೊಳಿಸಿದೆ.
2.5 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಎಸ್ಬಿಐ ಷೇರುದಾರರಿಗೆ ಬರೆದಿರುವ ಪತ್ರದಲ್ಲಿಎಸ್ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಈ ಬಗ್ಗೆ ಪ್ರಸ್ತಾಪಿಸಿದ್ದು, ದೇಶದ ಬಹುದೊಡ್ಡ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ತನ್ನ ಉದ್ಯೋಗಿಗಳಿಗೆ ಎಲ್ಲಿಂದ ಬೇಕಾದರು ಕೆಲಸ ಮಾಡುವಂತ ಸೌಲಭ್ಯವನ್ನು ಸದ್ಯದಲ್ಲೇ ನೀಡಲಿದೆ ಎಂದು ತಿಳಿಸಿದ್ದಾರೆ.
ಸದ್ಯ ವರ್ಕ್ ಫ್ರಮ್ ಹೋಮ್ ಪ್ರಚಲಿತದಲ್ಲಿದ್ದು, ಎಸ್ಬಿಐ ಕೂಡ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಕೊರೊನಾ ಸೋಂಕು ನಿಯಂತ್ರಣ ದೃಷ್ಟಿ ಮತ್ತು ಮುಂದಿನ ದಿನಗಳಲ್ಲಿ ಇದರಿಂದ ಎದುರಾಗುವ ಸವಾಲುಗಳನ್ನು ಮೆಟ್ಟಿನಿಲ್ಲಲು, ವ್ಯವಹಾರದ ದೃಷ್ಟಿಯಿಂದ, ಮುಂದಿನ ದಿನಗಳಲ್ಲಿ ಬ್ಯಾಂಕ್ನಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಶೀಘ್ರವಾಗಿ ಅಳವಡಿಸಿಕೊಳ್ಳುವುದರ ಜತೆಗೆ ಅಪಾಯದ ಮೌಲ್ಯಮಾಪನ ಮತ್ತು ವ್ಯವಹಾರ ಕಾರ್ಯವಿಧಾನಗಳನ್ನು ಮರುಪರಿಶೀಲಿಸುತ್ತಿದೆ ಎಂದು ಬ್ಯಾಂಕ್ ವಾರ್ಷಿಕ ವರದಿಯಲ್ಲಿ ವಿವರಿಸಿದ್ದಾರೆ.
ಸಿಬ್ಬಂದಿಗೆ ವರ್ಕ್ ಫ್ರಮ್ ಎನಿವೇರ್ ಸೌಲಭ್ಯ ನೀಡುತ್ತಿರುವ ಮೊದಲ ಸರಕಾರಿ ಸ್ವಾಮ್ಯದ ಬ್ಯಾಂಕ್ ಎಸ್ಬಿಐ ಆಗಲಿದ್ದು, ಡಬ್ಲ್ಯುಎಫ್ಎ ನೀತಿಯು ಉದ್ಯೋಗಿಗಳ ಸಮಯವನ್ನು ಉಳಿಸುವ ಜತೆಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡಲು, ಕೆಲಸ-ಮನೆ ನಡುವೆ ಸಮತೋಲನ ಕಾಯ್ದುಕೊಳ್ಳಲು ಉದ್ಯೋಗಿಗಳಿಗೆ ಇದು ಸಾಥ್ ನೀಡುತ್ತದೆ ಎಂದಿದ್ದಾರೆ.