ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲೂಕಿ ಬನ್ನೂರು ಸಮೀಪದ ಬಸವನಹಳ್ಳಿ ಗ್ರಾಮದ ಅಣ್ಣನ ಮನೆಗೆ ಮೈಸೂರಿನಿಂದ ಬಂದಿದ್ದ ಪೊಲೀಸ್ ಪೇದೆಯೊಬ್ಬರಿಗೆ ಕೊರೊನಾ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಅಣ್ಣನ ಕುಟುಂಬದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಇಡೀ ಗ್ರಾಮದಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿದ್ದು, ಕಾನ್‌ಸ್ಟೆಬಲ್ ಅಣ್ಣನ ಮನೆಯವರನ್ನು ಗ್ರಾಮದ ಮುಖಂಡರು ಮತ್ತು ಹೆಗ್ಗೂರು ಗ್ರಾಮಪಂಚಾಯಿತಿ ಪಿಡಿಒ ಕುಮಾರಸ್ವಾಮಿ ಹೋಂ ಕ್ವಾರಂಟೈನ್ ಮಾಡಿದ್ದಾರೆ.
ಆರೋಗ್ಯ ಅಧಿಕಾರಿಗಳು ಪೊಲೀಸ್ ಪೇದೆಯ ಗಂಟಲು ದ್ರವ ಮತ್ತು ರಕ್ತ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸೋಂಕಿನ ಬಗ್ಗೆ ನಿಖರವಾಗಿ ಹೇಳಬಹುದು. ಹೀಗಾಗಿ ಯಾರು ಭಯಪಡಬೇಡಿ ಎಂದು ಸಲಹೆ ನೀಡಿದ್ದಾರೆ.
ಇನ್ನು ಈ ಪೊಲೀಸ್ ಪೇದೆ ಮೈಸೂರಿನಲ್ಲಿ ವಾಸವಾಗಿದ್ದು, ನಗರದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಬೆಂಗಳೂರಿನ ಪಾದರಾಯನ ಪುರಕ್ಕೆ ತಾತ್ಕಾಲಿಕವಾಗಿ ಕರ್ತವ್ಯದ ಮೇಲೆ ಕಳುಹಿಸಿ ಕೊಡಲಾಗಿತ್ತು. ಅಲ್ಲಿಂದ ಬಂದ ಬಳಿಕ ಇವರಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಆದರೆ ಆ ವರದಿ ಇನ್ನು ಬಂದಿಲ್ಲ.
ವರದಿ ಬರುವುದಕ್ಕೂ ಮುನ್ನಾ ಅಂದರೆ ಕಳೆದ ಶುಕ್ರವಾರ ಇವರು ಬಸನವಹಳ್ಳಿ ಗ್ರಾಮದ ಅಣ್ಣನ ಮನೆಗೆ ಬಂದು ಹೋಗಿದ್ದಾರೆ. ಆದರೆ ಪಾದರಾಯನಪುರದಿಂದ ಬಂದಿರುವ ಕೆಲ ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಇರುವ ಬಗ್ಗೆ ಮೈಸೂರು ಜಿಲ್ಲಾಧಿಕಾರಿಗಳೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಹೀಗಾಗಿ ಇವರಿಗೂ ಸೋಂಕು ಇರಬಹುದು ಎಂಬ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಆದರೆ ವರದಿ ಬರುವುದಕ್ಕೂ ಮುನ್ನ ಇಂಥ ಊಹಪೋಹಗಳಿಗೆ ಯಾರು ಕಿವಿಯಾಗಬಾರದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿ ಕುಮಾರ್ ಮನವಿ ಮಾಡಿದ್ದಾರೆ.