ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿಯೊಬ್ಬರಲ್ಲೂ ಕೊರೊನಾ ಸೋಂಕು ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಆಯುಕ್ತರ ಕಚೇರಿಯನ್ನು ಮೂರುದಿನಗಳವರೆಗೆ ಸೀಲ್ ಡೌನ್ ಮಾಡಲಾಗಿದೆ.
ಜೂನ್ 27 ರಿಂದ 29ರವರೆಗೆ ಕಚೇರಿಯಲ್ಲಿ ನಡೆಯುವ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದು ಅವುಗಳನ್ನು ನಿರ್ವಹಿಸುತ್ತಿದ್ದ ಕಚೇರಿ ಸಿಬ್ಬಂದಿಗೆ Work from home ಅಥವಾ ವಿಭಾಗೀಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವಂತೆ ಆಯುಕ್ತರು ಸೂಚನೆ ನೀಡಿದ್ದಾರೆ.
ಇಲ್ಲಿಯವರೆಗೆ 92ಕ್ಕೂ ಹೆಚ್ಚು ಪೊಲೀಸರಿಗೆ ಈ ಮಹಾಮಾರಿ ಆವರಿಸಿದ್ದು, 15 ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸುಮಾರು 870 ಮಂದಿ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಹಿಂಜರಿಕೆ, ಭಯದಿಂದಲೇ ಪೊಲೀಸರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಅಲ್ಲದೆ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಪದೇಪದೆ ಆರೋಪಿಗಳಿಗೆ ಪಾಸಿಟಿವ್ ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರೇ ಸ್ವಯಂ ಪ್ರೇರಿತವಾಗಿ ಸಣ್ಣ ಪುಟ್ಟ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ.
7 ವರ್ಷ ಮೇಲ್ಪಟ್ಟ ಶಿಕ್ಷೆಯ ಆರೋಪಿಗಳ ಬಂಧನಕ್ಕೆ ಮಾತ್ರ ಪೊಲೀಸರು ಒಲವು ವ್ಯಕ್ತಪಡಿಸುತ್ತಿದ್ದಾರೆ. ದೊಡ್ಡ ಪ್ರಕರಣಗಳಲ್ಲಿ ಬಂಧಿಸಿದ್ರೆ ಅವರನ್ನು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಕೊಲೆ, ಕೊಲೆ ಯತ್ನ, ರಾಬರಿ, ಇಂತಹ ದೊಡ್ಡ ಪ್ರಕರಣಗಳಲ್ಲಿ ಮಾತ್ರ ಈಗ ಆರೋಪಿಗಳ ಬಂಧನವಾಗುತ್ತಿದೆ.
ಇನ್ನು ಆಯುಕ್ತರ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದ್ದು ಪಾಸಿಟಿವ್ ಬಂದ ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಇನ್ನು 14 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಅವರ ಸ್ವಾಬ್, ರಕ್ತ ಮಾದರಿಯನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ. ವರದಿ ಬಂದ ಬಳಿಕ ಕೊರೊನಾ ಸೋಕಿನ ಬಗ್ಗೆ ತಿಳಿಯಲಿದೆ.