NEWSನಮ್ಮರಾಜ್ಯಲೇಖನಗಳು

KSRTC: ಚಾಲನಾ ಸಿಬ್ಬಂದಿ ಸಾರ್ವಜನಿಕ ಸೇವೆಯಲ್ಲಿರುವ ರಾಜ್ಯದೊಳಗಿನ ಯೋಧರೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪ್ರತಿದಿನವೂ ಅತೀ ಹೆಚ್ಚಾಗಿ ಸಾರ್ವಜನಿಕರೊಂದಿಗೆ ನೇರ ಸಂಪರ್ಕದಲ್ಲಿರುವವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಚಾಲನಾ ಸಿಬ್ಬಂದಿಗಳು.

ಹೀಗಾಗಿ ಈ ನಿಮ್ಮ ನೌಕರರ ಪ್ರತಿಯೊಂದು ನಡೆನುಡಿಯನ್ನು ಪ್ರಯಾಣಿಕರು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಅವರಲ್ಲಿ ಕೆಲವರು ಕೆಲಸದ ವೇಳೆಯಲ್ಲಿನ ವರ್ತನೆಗಳನ್ನು ಅಂದರೆ ಮೊಬೈಲ್ ಉಪಯೋಗಿಸುವುದಾಗಲಿ, ತಿಂಡಿ ತಿನ್ನುವುದಾಗಲಿ ಅಥವಾ ಬೇರೆ ಚಟುವಟಿಕೆಗಳಾಗಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ.

ಕೆಲವರು ಹೀಗೆ ಮಾಡುವುದರಿಂದ ನಿರಂತರವಾಗಿ ಅದರಲ್ಲೂ ದೈಹಿಕವಾಗಿ ಶ್ರಮಿಸುತ್ತಿರುವ ನೌಕರರ ಮೇಲೆ ಕ್ರಮ ಕೈಗೊಳ್ಳಲ್ಪಡುವ ಘಟನೆಗಳು ಹೆಚ್ಚುತ್ತಿವೆ. ಇಂತಹ ಸಂದರ್ಭಗಳು ನೌಕರರ ಪ್ರತಿಷ್ಠೆಗೆ ಧಕ್ಕೆಯಾಗುವುದಷ್ಟೇ ಅಲ್ಲದೇ ನಿಗಮಗಳ ಗೌರವಕ್ಕೂ ಧಕ್ಕೆಯುಂಟು ಮಾಡುತ್ತಿರುತ್ತವೆ.

ಆದ್ದರಿಂದ, ಎಲ್ಲ ಚಾಲನಾ ಸಿಬ್ಬಂದಿಯೂ ಚಾಲನೆ ಮಾಡುವ ಸಮಯದಲ್ಲಿ ಪೂರ್ಣ ಎಚ್ಚರಿಕೆಯಿಂದ, ಜವಾಬ್ದಾರಿಯುತವಾಗಿ ವರ್ತಿಸಬೇಕಿದೆ. ಕಾರಣ ನೀವು ಕೂಡ ಗೌರವಯುತವಾದ ಅದರಲ್ಲೂ ಸಾರ್ವಜನಿಕ  ಸೇವೆಯಲ್ಲಿರುವ ರಾಜ್ಯದೊಳಗಿನ ಯೋಧರಾಗಿದ್ದೀರಿ.

ಜತೆಗೆ ಬಸ್‌ನಲ್ಲಿರುವ ಎಲ್ಲ ಪ್ರಯಾಣಿಕರ ಜೀವ ನಿಮ್ಮ ಕೈಯಲ್ಲಿರುತ್ತದೆ. ಅವರ ಸುರಕ್ಷತೆ ನಿಮ್ಮ ಕರ್ತವ್ಯದೊಂದಿಗೆ ಜವಾಬ್ದಾರಿಯೂ ಕೂಡ ಆಗಿರುತ್ತದೆ. ನೀವು ಸುರಕ್ಷಿತವಾಗಿ ವಾಹನ ಚಲಾಯಿಸಿದರೆ, ಅದು ಕೇವಲ ಸಂಸ್ಥೆಗಳಲ್ಲಿ ಅಳವಡಿಸಿಕೊಂಡಿರುವ ನಿಯಮ ಪಾಲನೆಯಷ್ಟೇ ಅಲ್ಲ ಅದು ನಿಮ್ಮ ಮಾನವೀಯ ಕರ್ತವ್ಯವೂ ಆಗಿ ಪರಿವರ್ತನೆ ಆಗುತ್ತದೆ.

ಇದೆಲ್ಲದಕ್ಕಿಂದ ಮೇಲಾಗಿ ನೀವು ನೀಡುವ ಸೇವೆ ಸಾರ್ವಜನಿಕ ಪ್ರಯಾಣಿಕರಿಗೆ ಅತ್ಯಂತ ಉತ್ತಮವಾದ ಸೇವೆಯಾಗಿದೆ. ಇಂಥ ಸಾರ್ವಜನಿಕ ಸೇವಕರಾದ ನಿಮಗೆ ಪ್ರಯಾಣಿಕರು ಗೌರವಕೊಡಬೇಕು. ಆ ನಿಟ್ಟಿನಲ್ಲಿ ನೀವು ನಡೆದುಕೊಳ್ಳಬೇಕು.

ಇನ್ನು ನಿಮ್ಮ ಬಸ್‌ಗಳಲ್ಲಿ ಪ್ರಯಾಣಿಸುವ ಮಂದಿಯಲ್ಲಿ ಕೆಲವರು ಮದ್ಯವ್ಯಸನಿಗಳು, ಅನಾರೋಗ್ಯದಿಂದ ಬಳಲುತ್ತಿರುವವರು, ಕಳ್ಳರು, ಸುಳ್ಳರು ಇವರ ಜತೆಗೆ ಗೌರವಾನ್ವಿತ ಜನರು ಇರುತ್ತಾರೆ. ಇವರಲ್ಲಿ ಗೌರವಾನ್ವಿತ ಜನರು ನಿಮ್ಮ ಜತೆ ಗೌರವದಿಂದಲೇ ನಡೆದುಕೊಳ್ಳುತ್ತಾರೆ, ಇನ್ನು ಕಳ್ಳರು, ಮದ್ಯ ವ್ಯಸನಿಗಳು ಸೇರಿದಂತೆ ಇತರರು ನಿಮ್ಮ ಜತೆ ದುಂಡಾವರ್ತನೆ ತೋರಿಸಬಹುದು. ಅಂಥವರೊಂದಿಗೆ ತಾಳ್ಮೆ ಕಳೆದುಕೊಳ್ಳದೆ ವರ್ತಿಸುವ ಜಾಣರು ನೀವಾಗಬೇಕಿದೆ.

ಕೆಲವರು ಗೌರವಕೊಡದಿದ್ದರೂ ಅವರೊಂದಿಗೆ ನಾವು ಗೌರವದಿಂದ ನಡೆದುಕೊಂಡರೆ ಬಸ್‌ನಲ್ಲಿರುವ ಪ್ರಯಾಣಿಕರೆ ನಿಮ್ಮ ಉತ್ತಮ ನಡೆಯ ಬಗ್ಗೆ ಶ್ಲಾಘಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಬಗ್ಗೆ ಹೊಗಳಿ ಬರೆಯುತ್ತಾರೆ. ಹೀಗಾಗಿ ನಿಮ್ಮ ನಡೆ ಯಾವಾಗಲು ತಾಳ್ಮೆಯಿಂದಲೇ ಇರಬೇಕು. ಇದು ನಿಮ್ಮ ಗೌರವವನ್ನು ಸಮಾಜದಲ್ಲಿ ಹೆಚ್ಚಿಸುವ ಜತೆಗೆ ನಿಮ್ಮನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ.

ಹಾಗಾಗಿ ರಾಜ್ಯದೊಳಗಿನ ಸೈನಿಕರಾದ ನೀವು ಎಷ್ಟೆ ಒತ್ತಡದಲ್ಲಿದ್ದರೂ ತಾಳ್ಮೆ ಎಂಬುವುದನ್ನು ಕಳೆದುಕೊಳ್ಳದೆ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರು ತಾವಾಗಿಯೇ ನಿಮಗೆ ಗೌರವ ಕೊಡುತ್ತಾರೆ, ಅಂದರೆ ಕ್ರಿಯೆ ಉತ್ತಮವಾಗಿದ್ದರೆ ಪ್ರತಿಕ್ರಿಯೇಯೂ ಅದಕ್ಕಿಂತ ಉತ್ತಮವಾಗಿರುತ್ತದೆ ಎಂಬುದನ್ನು ಮರೆಯಬೇಡಿ.

Megha
the authorMegha

Leave a Reply

error: Content is protected !!