NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಬಸ್‌ನಲ್ಲಿ ಪಟಾಕಿ ತರುತ್ತಿದ್ದ 14 ವರ್ಷದ ಬಾಲಕಿ- ಅಮಾನತು ಭಯದಲ್ಲಿ ಮಾರ್ಗಮಧ್ಯೆ ಇಳಿಸಿದ ನಿರ್ವಾಹಕ

ವಿಜಯಪಥ ಸಮಗ್ರ ಸುದ್ದಿ

ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನಲ್ಲಿ ಪಟಾಕಿ ಸಾಗಿಸುವುದು ನಿಷೇಧಿಸಲಾಗಿರುವುದರಿಂದ ನಿರ್ವಾಹಕರು ಪಟಾಗಿ ಸಾಗಿಸುತ್ತಿದ್ದ 14 ವರ್ಷದ ಬಾಲಕಿಯನ್ನು ಮಾರ್ಗಮಧ್ಯೆ ರಸ್ತೆಯಲ್ಲಿ ಇಳಿಸಿ ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರಾಮನಾಥಪುರದಿಂದ ಹಾಸನಕ್ಕೆ ಬರುತ್ತಿದ್ದ ರಾಮನಾಥಪುರ ಘಟಕಕ್ಕೆ ಸೇರಿದ ಸಾರಿಗೆ ಬಸ್‌ನಲ್ಲಿ ಈಕೆ ಹಾಸನಕ್ಕೆ ಬರುತ್ತಿದ್ದರು. ಇನ್ನು ಈ ಬಾಲಕಿ ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದ ಸರ್ಕಾರಿ ವಕೀಲರೊಬ್ಬರ ಪುತ್ರಿ ಎಂದು ತಿಳಿದು ಬಂದಿದೆ.

ಬಸ್‌ ನಿರ್ವಾಹಕರು ಬಾಲಕಿ ಪಟಾಕಿ ತರುತ್ತಿದ್ದನ್ನು ಗಮನಿಸಿದ್ದರಿಂದ ಮುಂದೆ ಲೈನ್‌ಚೆಕಿಂಗ್‌ ಸಿಬ್ಬಂದಿ ಬಸ್‌ಗೆ ಬಂದರೆ ನನ್ನನ್ನು ಅಮಾನತು ಮಾಡುತ್ತಾರೆ ಎಂಬ ಭಯದಲ್ಲಿ ಬಾಲಕಿಯನ್ನು ಮಾರ್ಗಮಧ್ಯೆ ಇಳಿಸಿ ಹೋಗಿದ್ದಾರೆ.

ಆದರೆ, ನನ್ನ ಮಗಳನ್ನು ಯಾವುದಾದರೂ ಒಂದು ಬಸ್‌ ನಿಲ್ದಾಣದಲ್ಲಿ ಇಳಿಸಿ ಹೋಗಿದ್ದರೆ ಆಗುತ್ತಿತ್ತು. ಇಲ್ಲ ಎಂದರೆ ಆ ಪಟಾಕಿಗಳನ್ನು ಬಿಸಾಕಿ ಬಿಡು ಎಂದು ಹೇಳಿ ಆಕೆಯನ್ನು ಕರೆದುಕೊಂಡು ಬರಬೇಕಿತ್ತು ಎಂದು ಸರ್ಕಾರಿ ವಕೀಲರಾಗಿರುವ ಪಾಲಕರು ಹೇಳುತ್ತಿದ್ದಾರೆ.

ಸರಿ ನಮಗೂ ಗೊತ್ತಿದೆ ಪಟಾಕಿಯನ್ನು ಬಸ್‌ನಲ್ಲಿ ತರುವುದಕ್ಕೆ ನಿಷೇಧವಿದೆ ಎಂದು. ಆದರೆ, ಮಾನವೀಯತೆ ದೃಷ್ಟಿಯಿಂದ ಆಕೆಯನ್ನು ಕರೆದುಕೊಂಡು ಬರಬೇಕಿತ್ತು. ಮಾರ್ಗಮಧ್ಯೆ ಇಳಿಸಿ ಹೋಗಿದ್ದರಿಂದ ಆಕೆಗೆ ಏನಾದರೂ ಆಗಿದ್ದರೆ ಯಾರು ಹೊಣೆಗಾರರಾಗುತ್ತಿದ್ದರು. ಹೀಗಾಗಿ ಇನ್ನು ಮುಂದಾದರೂ ಈ ರೀತಿಯ ಘಟನೆಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

ಇನ್ನು ನನ್ನ ಮಗಳು ಮಾರ್ಗಮಧ್ಯೆ ಬಸ್‌ನಿಂದ ಇಳಿದಿದ್ದು ಬೇರೆ ದಾರಿಕಾಣದೆ ಅಳುತ್ತ ನಿಂತಿದ್ದನ್ನು ಗಮನಿಸಿದ ಬೈಕ್‌ ಸವಾರರೊಬ್ಬರು ಆಕೆಯನ್ನು ಕರೆದುಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

ಇತ್ತ ಸರ್ಕಾರಿ ಬಸ್‌ನ ಚಾಲನಾ ಸಿಬ್ಬಂದಿ ಆಕೆಯನ್ನು ಮಾನವೀಯತೆ ದೃಷ್ಟಿಯಿಂದ ಕರೆದುಕೊಂಡು ಬಂದಿದ್ದರೆ ಮಾರ್ಗಮಧ್ಯೆ ಚೆಕಿಂಗ್‌ ಸಿಬ್ಬಂದಿ ಬಂದು ಪಟಾಕಿ ಸಾಗಿಸುತ್ತಿರುವುದನ್ನು ಗಮನಿಸಿದರೆ ನಿರ್ವಾಹಕರನ್ನು ಮುಲಾಜಿಲ್ಲದೆ ಅಮಾನತು ಮಾಡುತ್ತಿದ್ದರು.

ಇಲ್ಲಿ ಕಾನೂನು ಪ್ರಕಾರ ಬಂದರೆ ನಿರ್ವಾಹಕರು ಮಾಡಿರುವುದು ಸರಿ ಇದೆ. ಆದರೆ, ಮಾನವೀಯತೆ ದೃಷ್ಟಿಯಿಂದ ನೋಡಿದರೆ ಮುಂದೆ ಯಾವುದಾದರೊಂದು ಬಸ್‌ ನಿಲ್ದಾಣದಲ್ಲಿ ಇಳಿಸಬೇಕಿತ್ತು ಎನ್ನುವುದು ಸರಿಯಿದೆ. ಆದರೆ ಲೈನ್‌ಚೆಕಿಂಗ್‌ ಸಿಬ್ಬಂದಿ ಬಂದಿದ್ದರೆ ಈ ಮಾನವೀಯತೆಯನ್ನು ನಿರ್ವಾಹಕರಿಗೆ ಖಂಡಿತ ತೋರಿಸುವುದಿಲ್ಲ. ಈ ಭಯದಲ್ಲೇ ನಿರ್ವಾಹಕರು ಇಲ್ಲಿ ಮಾನವೀಯತೆ ಬದಿಗಿಟ್ಟು ಕಾನೂನು ಪ್ರಕಾರ ನಡೆದುಕೊಂಡಿದ್ದಾರೆ.

Megha
the authorMegha

Leave a Reply

error: Content is protected !!