NEWSನಮ್ಮಜಿಲ್ಲೆನಮ್ಮರಾಜ್ಯ

ಪೊಲೀಸ್ ಸಂಸ್ಮರಣಾ ದಿನಾಚರಣೆ- ಅನೈತಿಕ ಪೊಲೀಸ್‌ಗಿರಿಗೆ ರಾಜ್ಯದಲ್ಲಿ ಕಡಿವಾಣ ಬಿದ್ದಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ಘನತೆ, ಅಭಿವೃದ್ಧಿ ಮತ್ತು ಪ್ರಗತಿಗೆ ಕಂಟಕವಾಗಿದ್ದ ಸಂವಿಧಾನ ವಿರೋಧಿ ಅನೈತಿಕ ಪೊಲೀಸ್‌ಗಿರಿಗೆ ರಾಜ್ಯದಲ್ಲಿ ಕಡಿವಾಣ ಬಿದ್ದಿದೆ.‌ ಇದರ ಶ್ರೇಯಸ್ಸು ಪೊಲೀಸ್ ಇಲಾಖೆಗೆ ಸಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಇಂದು ಬೆಂಗಳೂರಿನ ಪೊಲೀಸ್ ಹುತಾತ್ಮರ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದರು.

ಪೊಲೀಸ್ ಇಲಾಖೆ ಶಾಂತಿ- ಸುವ್ಯವಸ್ಥೆ ಕಾಪಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗಾಗಿ ಅನೈತಿಕ ಪೊಲೀಸ್ ಗಿರಿಗೆ ಕಡಿವಾಣ ಬಿದ್ದಿರುವುದು ಉತ್ತಮ‌ ಕೆಲಸ. ಹಾಗೆಯೇ ಮಾದಕ ವಸ್ತು ಹಾವಳಿಗೂ ಬ್ರೇಕ್ ಬಿದ್ದಿದ್ದು ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ. ಈ ಎಲ್ಲ ಸಾಧನೆಗಳ ಶ್ರೇಯ ಪೊಲೀಸ್ ಇಲಾಖೆಗೆ ಸಲ್ಲಬೇಕು ಎಂದರು.

ಇನ್ನು ರಾಜ್ಯದಲ್ಲಿ ಪರಿಶಿಷ್ಠ ಜಾತಿ ಹಾಗೂ ವರ್ಗದವರ ಮೇಲಿನ ದೌರ್ಜನ್ಯ ತಡೆಗೆ ಡಿಸಿಆರ್‌ಇ ಪೊಲೀಸ್ ಠಾಣೆಗಳನ್ನು ಕಾರ್ಯೋನ್ಮುಖಗೊಳಿಸಿದ್ದೇವೆ. ಇವು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಸಾಂವಿಧಾನಿಕ ಹಕ್ಕು ಮತ್ತು ಮೌಲ್ಯಗಳನ್ನು ಕಾಪಾಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಒಂದು ವರ್ಷದಲ್ಲಿ ರಾಜ್ಯದ 8 ಮಂದಿ ಸೇರಿ ದೇಶದಲ್ಲಿ 191 ಮಂದಿ ಕರ್ತವ್ಯ ನಿರ್ವಹಣೆ ವೇಳೆ ಪ್ರಾಣ ತ್ಯಾಗ ಮಾಡುವ ಮೂಲಕ ಹುತಾತ್ಮರಾಗಿದ್ದಾರೆ. ಇವರ ತ್ಯಾಗ, ಬಲಿದಾನಕ್ಕೆ ಬೆಲೆ ಕಟ್ಟಲಾಗದು. ಇವರನ್ನು ಸ್ಮರಿಸಿ, ನಮಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ಇನ್ನು ಸಂವಿಧಾನದಲ್ಲಿ ಜನರಿಗೆ ಕೊಟ್ಟಿರುವ ಹಕ್ಕುಗಳನ್ನು ಕಾಪಾಡುವ ಜವಾಬ್ದಾರಿಯನ್ನೂ ಪೊಲೀಸ್ ಇಲಾಖೆ ನಿರ್ವಹಿಸುತ್ತಿದೆ ಎಂದ ಅವರು, ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಯ ವೈದ್ಯಕೀಯ ಮರು ಪಾವತಿ ವೆಚ್ಚವನ್ನು ವಾರ್ಷಿಕ 1 ಲಕ್ಷ ರೂ.ಗಳಿಂದ 1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಎಲ್ಲ ಪೊಲೀಸ್ ಸಿಬ್ಬಂದಿಯ ಆರೋಗ್ಯ ತಪಾಸಣಾ ವೆಚ್ಚವನ್ನು 1,000 ರೂ.ಗಳಿಂದ 1,500 ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

Megha
the authorMegha

Leave a Reply

error: Content is protected !!