ಬೆಂಗಳೂರು: ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳು ನರಕ ದರ್ಶನ ಮಾಡಿಸುತ್ತಿವೆ. ಒಂದು ಕಡೆ ಸರಿಯಾದ ಔಷಧ ನೀಡುತ್ತಿಲ್ಲ, ಸ್ವಚ್ಛತೆ ಇಲ್ಲ. ಇನ್ನು ಹಲವೆಡೆ ಸ್ನಾನಕ್ಕೆ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ಸೌಲಭ್ಯವಿಲ್ಲ… ಹೀಗೆ ಹಲವಾರು ಸಮಸ್ಯೆಯಿಂದ ಕೋವಿಡ್ ಆಸ್ಪತ್ರೆಗಳು ನರಳುತ್ತಿವೆ.
ಕುಡಿಯುವ ನೀರು ಕೇಳಿದರೆ 8ತಾಸಿನ ಬಳಿಕ ಕೊಡುತ್ತಾರೆ ಎಂದರೆ ಅಲ್ಲಿನ ವ್ಯವಸ್ಥೆ ಹೇಗಿದೆ ಎಂಬುದನ್ನು ಸಂಬಂಧಸಿದ ಅಧಿಕಾರಿಗಳೇ ಹೇಳಬೇಕು.
ಸರ್ಕಾರ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡುವ ಎಲ್ಲಾ ವ್ಯವಸ್ಥೆಯನ್ನು ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಆಸ್ಪತ್ರೆಗಳಲ್ಲಿ ಮಾತ್ರ ಎಲ್ಲ ಇದ್ದರೂ ಇಲ್ಲ ಎಂಬಂತ್ತಾಗಿದೆ. ಕಾರಣ ತಿಳಿಯುತ್ತಿಲ್ಲ.
ಒಂದು ಕಡೆ ಆರೋಗ್ಯ ಸಚಿವರು ಬೆಂಗಳೂರಿನಲ್ಲಿ 2-3 ಸಾವಿರ ಬೆಡ್‌ಗಳ ವ್ಯವಸ್ಥೆ ಇದೆ ಎಂದು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಅದು ಸುಳ್ಳು ಎಂಬಂತೆ ಆಸ್ಪತ್ರೆಗಳ ಆಡಳಿತ ಮಂಡಳಿಗಳು, ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲೂ ಇದರ ವ್ಯತ್ಯಾಸವೇನು ಇಲ್ಲ. ಹೀಗಾಗಿ ಇನ್ನು ಮುಂದಾದರೂ ಇರುವ ವ್ಯವಸ್ಥೆಯನ್ನೇ ಸರಿಯಾಗಿ ಮಾಡಬೇಕಿದೆ.
ಈ ವ್ಯವಸ್ಥೆ ಸರಿಯಾದರೆ ಇನ್ನಷ್ಟು ಸೋಂಕಿತರು ಬಂದರೂ ಸೂಕ್ತ ಚಿಕಿತ್ಸೆ ನೀಡಬಹುದಾಗಿದೆ. ಇನ್ನು ಕೊರೊನಾ ಸೋಂಕಿತರು ಆಸ್ಪತ್ರೆಗೆ ಹೋದರೆ ಬಿಬಿಎಂಪಿಯಿಂದ ಲೆಟರ್ ತೆಗದುಕೊಂಡು ಬನ್ನಿ ಎಂಬುವುದು ಬದಲಾಗಬೇಕು. ಮೊದಲು ಸೋಂಕಿತರನ್ನು ದಾಖಲು ಮಾಡಿಕೊಂಡು ನಂತರ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರಿಂದ ಲೆಟರ್ ತೆಗೆದುಕೊಳ್ಳುವ ವ್ಯವಸ್ಥೆ ಮಾಡಿದರೆ ಸಮಸ್ಯೆ ಅರ್ಧವಾದರೂ ದೂರವಾದಂತೆ.
ಇನ್ನು ಬೆಡ್‌ಗಳು ಇರುವ ಕಡೆ ಮೊದಲು ಬಂದ ಸೋಂಕಿತರನ್ನು ದಾಖಲು ಮಾಡಿಕೊಂಡು ಅವರಿಗೆ ಸರಿಯಾದ ಉಪಚಾರ ಮಾಡಿದರೆ ಶೀಘ್ರದಲ್ಲೇ ಅವರು ಗುಣಮುಖರಾಗುವುದರಿಂದ ಬೇರೆಯವರಿಗೆ ಬೆಡ್ ಬಿಟ್ಟುಕೊಡಲು ಅನುಕೂಲವಾಗುತ್ತದೆ.
ಮತ್ತೊಂದೆಡೆ ಕೊರೊನಾ ವಾರಿಯರ್ಸ್‌ಗಳಿಗೂ ಎಲ್ಲರೀತಿಯ ಸೌಲಭ್ಯಗಳನ್ನು ಮಾಡಿಕೊಟ್ಟರೆ ಅವರು ಸೋಂಕಿನಿಂದ ದೂರ ಉಳಿಯಬಹುದು. ಜತೆಗೆ ಸೋಂಕಿತರಿಗೆ ಉತ್ಸಾಹದಿಂದಲ್ಲೇ ಸೂಕ್ತ ಉಪಚಾರ ಮಾಡುವರು. ಈಗಾದರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗುವುದು. ಇದರತ್ತ ಸರ್ಕಾರ ಮತ್ತು ಅಧಿಕಾರಿಗಳು ಹೆಚ್ಚಿನ ಗಮನ ಕೊಡಬೇಕಿದೆ. ಇಲ್ಲದಿದ್ದರೆ ಇಂಥ ನರಕ ದರ್ಶನ ಮುಂದುವರಿಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದೇ ಹೇಳಬಹುದು.