NEWSನಮ್ಮರಾಜ್ಯರಾಜಕೀಯವಿಜ್ಞಾನಶಿಕ್ಷಣ-

ಕನ್ನಡ ಕಡ್ಡಾಯ ಬೋಧಿಸಲು ವಿಟಿಯುಗೆ ಟಿ.ಎಸ್. ನಾಗಾಭರಣ ಸೂಚನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಭಾಷೆ ಬಗ್ಗೆ ಪ್ರೀತಿ, ಗೌರವವಿದೆ ಎಂದು ಹೇಳಿದರಷ್ಟೇ ಸಾಲದು,  ಅದು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದ್ದು, ಆಗಸ್ಟ್ ಅಂತ್ಯದೊಳಗೆ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿಕೊಂಡು, ಈ ಸಾಲಿನ ಶೈಕ್ಷಣಿಕ ವರ್ಷ ಆರಂಭವಾದಾಗ ಅದನ್ನು ವೃತ್ತಿ ಶಿಕ್ಷಣ ಪದವಿ ವಿದ್ಯಾರ್ಥಿಗಳಿಗೆ ಬೋಧಿಸಬೇಕು. ಇಲ್ಲದಿದ್ದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಮುಂದಿನ ಹಾದಿಯನ್ನು ತುಳಿಯಬೇಕಾಗುತ್ತದೆ ಎಂದು ಅಧ್ಯಕ್ಷ ಟಿ.ಎಸ್. ನಾಗಾಭರಣ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕರಿಸಿದ್ದಪ್ಪ ಹಾಗೂ ಕುಲಸಚಿವರಿಗೆ ಎಚ್ಚರಿಕೆ ನೀಡಿದ ಪ್ರಸಂಗ ಜರುಗಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆಯ ಜಾಲ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಕಳೆದ ಶೈಕ್ಷಣಿಕ ವರ್ಷದಲ್ಲಿಯೇ ಪರಿಷ್ಕೃತ ಕಡ್ಡಾಯ ಕನ್ನಡ ಪಠ್ಯಕ್ರಮವನ್ನು ಅಂಕಗಣನೆಯ ಆಧಾರದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಡೀಮ್ಡ್ ಇನ್ ವಿಶ್ವವಿದ್ಯಾಲಯ, ಸ್ವಾಯತ್ತ ವಿಶ್ವವಿದ್ಯಾಲಯ, ಖಾಸಗಿ ವಿಶ್ವವಿದ್ಯಾಲಯ ಹಾಗೂ ಅದರ ಅಧೀನ ವಿದ್ಯಾಲಯಗಳಲ್ಲಿ ಬೋಧಿಸುವ ಸಂಬಂಧ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಇದುವರೆಗೂ ಆ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಈ ಬಾರಿಯ ಶೈಕ್ಷಣಿಕ ವರ್ಷದಿಂದ ಪರಿಷ್ಕೃತ ಕಡ್ಡಾಯ ಕನ್ನಡ ಪಠ್ಯಕ್ರಮವನ್ನು ಜಾರಿಗೊಳಿಸಿ ವಿದ್ಯಾರ್ಥಿಗಳಿಗೆ ಜ್ಞಾನ ವಿಸ್ತರಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಿಚಾರಧಾರೆಗಳನ್ನು ತಿಳಿಸಿಕೊಡುವಂತೆ ಸೂಚಿಸಿದರು.

ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬೋಧನೆ ಮಾಡುವುದರಿಂದ ಭಾಷಾ ಬೆಳವಣಿಗೆಯ ಜೊತೆಗೆ ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಯು ಹೆಚ್ಚಲಿದ್ದು, ಭಾಷಾಭಿಮಾನ ಬೆಳೆಯಲಿದೆ. ಎಲ್ಲಾ ವೃತ್ತಿ ಶಿಕ್ಷಣ ವಿಶ್ವವಿದ್ಯಾಲಯಗಳಲ್ಲಿ  ಎರಡು ಸೆಮಿಸ್ಟರ್ ನಲ್ಲಿ ಕನ್ನಡ ಬೋಧನೆಯನ್ನು ಕಡ್ಡಾಯವಾಗಿ ಮಾಡಲೇಬೇಕು. ಈ ಬಗ್ಗೆ ಮಾರ್ಚ್ ನಲ್ಲಿ ತಮಗೆ ಪತ್ರಮುಖೇನ ತಿಳಿಸಿದ್ದರೂ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ ವಿಶ್ವವಿದ್ಯಾಲಯದ ಜಾಲತಾಣದಲ್ಲಿಯೂ ಕೂಡ ಆಂಗ್ಲ ಭಾಷೆಯನ್ನು ಯಥೇಚ್ಛವಾಗಿ ಬಳಸಲಾಗಿದೆ. ಈ ಎಲ್ಲ ಕ್ರಮಗಳು ರಾಜ್ಯ ಸರ್ಕಾರದ ಕನ್ನಡ ಭಾಷಾ ನೀತಿಗೆ ವಿರುದ್ಧವಾಗಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾದರಿ ಜಾಲತಾಣವನ್ನು ರೂಪಿಸಿದ್ದು ಸರ್ಕಾರ ಅದಕ್ಕೆ ಮಾನ್ಯತೆ ನೀಡಿದಂತೆ ಈಗಾಗಲೇ ೨೦೦ಕ್ಕೂ ಅಧಿಕ ಇಲಾಖೆಗಳು ಅದನ್ನು ಅಳವಡಿಸಿಕೊಂಡಿವೆ. ಅದರನ್ವಯ ವಿಶ್ವವಿದ್ಯಾಲಯವೂ ಕೂಡ ಕ್ರಮವಹಿಸಲಿ ಎಂದು ತಿಳಿಸಿದರು ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹೊಸ ಹೊಸ ಕನ್ನಡದ ಆಪ್ ಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆಗಳನ್ನು (ಪ್ರಾಜೆಕ್ಟ್) ನೀಡುವಂತೆ ಕುಲಪತಿಗಳಿಗೆ ಸಲಹೆ ನೀಡಿದರು. ಈ ಮೂಲಕ ಕನ್ನಡ ತಂತ್ರಜ್ಞಾನದ ಮಟ್ಟಕ್ಕೆ ಅಭಿವೃದ್ಧಿ ಹೊಂದುವಂತಾಗಲಿ ಎಂದು ಹಾರೈಸಿದರು.

ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ನಮ್ಮ ಸಾಹಿತ್ಯ-ಸಂಸ್ಕೃತಿಯನ್ನು ಸರಳ ರೀತಿಯಲ್ಲಿ ತಿಳಿಸಿಕೊಡುವ ಹಾಗೆ ಪಠ್ಯಕ್ರಮ ರಚನೆಯಾಗಬೇಕಿದೆ. ಪ್ರಸ್ತುತ ಬೋಧಿಸಲಾಗುತ್ತಿರುವ ಕನ್ನಡದ ಪಠ್ಯಪುಸ್ತಕ ವೈಜ್ಞಾನಿಕ ಕ್ರಮದಲ್ಲಿ ರಚನೆಯಾಗಿಲ್ಲ. ಆದ್ದರಿಂದ ಕೂಡಲೇ ಉನ್ನತ ಮಟ್ಟದ ಸಮಿತಿಯಿಂದ ಪರಿಷ್ಕೃತಗೊಳಿಸಲಾಗಿರುವ ಪಠ್ಯಕ್ರಮವನ್ನು ತಮ್ಮ  ವಿಶ್ವವಿದ್ಯಾಲಯವು ಒಳಗೊಂಡಂತೆ   ಡೀಮ್ಡ್ ಇನ್ ವಿಶ್ವವಿದ್ಯಾಲಯ, ಸ್ವಾಯತ್ತ ವಿಶ್ವವಿದ್ಯಾಲಯ, ಖಾಸಗಿ ವಿಶ್ವವಿದ್ಯಾಲಯ ಹಾಗೂ ಅದರ ಅಧೀನ ವಿದ್ಯಾಲಯಗಳಲ್ಲಿ   ಬೋಧಿಸುವಂತೆ ಸುತ್ತೋಲೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳ ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ, ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ. ಬೋರಲಿಂಗಯ್ಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕರಿಸಿದ್ದಪ್ಪ, ಕುಲಸಚಿವರಾದ ದೇಶಪಾಂಡೆ, ಮೌಲ್ಯಮಾಪನ ಕುಲಸಚಿವರಾದ ಸತೀಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ. ಮುರಳಿಧರ, ವೆಬ್ ಪೋರ್ಟಲ್  ಯೋಜನಾಧಿಕಾರಿ ಸತೀಶ್, ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು