ನ.27ರಂದು ಇಪಿಎಸ್ ಪಿಂಚಣಿದಾರರ 33ನೇ ಪ್ರತಿಭಟನೆ: BMTC & KSRTC ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ

ಬೆಂಗಳೂರು: ಇಪಿಎಸ್-95 ನಿವೃತ್ತರ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿ, ಇಪಿಎಸ್ ನಿವೃತ್ತರ 33 ನೇ ಪ್ರತಿಭಟನಾ ಕಾರ್ಯಕ್ರಮವನ್ನು ಪಿಎಫ್ ಅಧಿಕಾರಿಗಳ ಕಚೇರಿ ಆವರಣದಲ್ಲಿ ನವೆಂಬರ್ 27 ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂದು ಬೆಳಗ್ಗೆ 10:30ರಿಂದ ಪ್ರತಿಭಟನೆಯನ್ನು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ನಮ್ಮ ಹೋರಾಟ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಹೈಯರ್ ಪಿಂಚಣಿ (ನ್ಯಾಯಾಲಯದ ತೀರ್ಪಿನ ಪ್ರಕಾರ) ಎರಡೂ ಅಂಶಗಳು ಈಡೇರುವವರೆಗೂ ಈ ಹೋರಾಟ ನಿಲ್ಲದು. ಈ ದೆಶೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಸಂಘಟಿತರಾಗಿ ಹೋರಾಟವನ್ನು ತೀವ್ರಗೊಳಿಸುವುದು ಅವಶ್ಯಕವಾಗಿರುತ್ತದೆ. ಈ ಹೋರಾಟದ ಸಂದೇಶ ನವದೆಹಲಿ ತಲುಪಬೇಕು, ಮಾಧ್ಯಮಗಳಲ್ಲಿ ವರದಿಯಾಗಬೇಕು. ಈ ದೃಷ್ಟಿಯಿಂದ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಇಪಿಎಸ್ ನಿವೃತ್ತರು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
ಇತ್ತೀಚೆಗೆ ಮಧುರೈ ಹಾಗೂ ಕೋಲ್ಕತ್ತಾ ಉಚ್ಚ ನ್ಯಾಯಾಲಯಗಳು ಇಪಿಎಸ್ ನಿವೃತ್ತರ ಪರ ತನ್ನ ತೀರ್ಪು ನೀಡಿದ್ದು, ವಿನಾಯ್ತಿ ಅಥವಾ ವಿನಾಯ್ತಿಯೇತರ ಸಂಸ್ಥೆಗಳ ಎಲ್ಲ ನೌಕರರು ಜಂಟಿ ಆಯ್ಕೆ ಪತ್ರ ಸಲ್ಲಿಸಿದ್ದಲ್ಲಿ, ಅಂತಹ ನೌಕರರಿಗೆ ಅಧಿಕ ಪಿಂಚಣಿ ನೀಡಲೇಬೇಕು ಎಂದು ಆದೇಶ ನೀಡಿರುವುದು ಹಾಗೂ ಜಮ್ಶೆಟ್ಪುರ ಇಪಿಎಫ್ಒ ಅಧಿಕಾರಿಗಳು ಟಾಟಾ ಸ್ಟೀಲ್ ಕಂಪನಿಯ ಇಪಿಎಸ್ ನಿವೃತ್ತರಿಗೆ ಟ್ರಸ್ಟ್ ರೂಲ್ಸ್ ಅನ್ವಯ ಅಧಿಕ ಪಿಂಚಣಿ ನೀಡಲು ಆದೇಶಿಸಿದ್ದು, ಇವೆಲ್ಲವೂ ಇಪಿಎಸ್ ನಿವೃತ್ತರಲ್ಲಿ ಭರವಸೆ ಮೂಡಿಸಿದೆ.
ಹೀಗಾಗಿ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾಹುತ್ ಅವರು ಈಗಾಗಲೇ ದೆಹಲಿಯ ಕೇಂದ್ರೀಯ ಭವಿಷ್ಯ ನಿಧಿ ಪ್ರಾಧಿಕಾರಸ್ತರಿಗೆ ನೋಟಿಸ್ ನೀಡಿದ್ದು, ನವೆಂಬರ್ 30ರ ಒಳಗೆ ಇಪಿಎಸ್ ನಿವೃತ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ಸ್ಪಂದಿಸದೆ ಹೋದಲ್ಲಿ, ಡಿಸೆಂಬರ್ 3 ಮತ್ತು 4ರಂದು ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದು, ದೇಶಾದ್ಯಂತ ಇರುವ ಎಲ್ಲ ಇಪಿಎಸ್ ನಿವೃತ್ತರು ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದ್ದಾರೆ.
ಡಿಸೆಂಬರ್ 1ರಿಂದ ಪಾರ್ಲಿಮೆಂಟ್ ಚಳಿಗಾಲದ ಸಂಸತ್ ಅಧಿವೇಶನ ದೆಹಲಿಯಲ್ಲಿ ಜರುಗುತ್ತಿದ್ದು, ಈ ಅಧಿವೇಶನದಲ್ಲಿಯಾದರು ಇಪಿಎಸ್ ನಿವೃತ್ತರ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿ, ಇಪಿಎಸ್ ನಿವೃತ್ತರ 33 ನೇ ಪ್ರತಿಭಟನಾ ಕಾರ್ಯಕ್ರಮವನ್ನು ಪಿಎಫ್ ಅಧಿಕಾರಿಗಳ ಕಚೇರಿ ಆವರಣದಲ್ಲಿ ನವೆಂಬರ್ 27, 2025 ರಂದು ಹಮ್ಮಿಕೊಳ್ಳಲಾಗಿದೆ.
ಬಿಎಂಟಿಸಿ & ಕೆಎಸ್ಆರ್ಟಿಸಿ ಹಾಗೂ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಚಿಕ್ಕಬಳ್ಳಾಪುರ ವತಿಯಿಂದ ಆಯೋಜಿಸಿರುವ, ಇಪಿಎಸ್ ನಿವೃತ್ತರ ಪ್ರತಿಭಟನೆಯ ನಮ್ಮ ಕೂಗು ದೆಹಲಿಗೆ ತಲುಪಬೇಕು, ಹಾಗಾಗಿ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಅಧಿಕ ಪಿಂಚಣಿ ಈ ಎರಡು ಅಂಶಗಳಿಗೆ ಸಂಬಂಧಿಸಿದಂತೆ ಶಾಂತಿಯುತ ಪ್ರತಿಭಟನೆ ಹಾಗೂ ಮನವಿಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೆ ಪ್ರತಿಭಟನೆಯಲ್ಲಿ ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಗಳ ಎಲ್ಲ ಇಪಿಎಸ್ ನಿವೃತ್ತರು, ಕಂಪನಿ ಹಾಗೂ ಕಾರ್ಖಾನೆಗಳ ನಿವೃತ್ತರು ಆಗಮಿಸಲಿದ್ದು, ಅಧಿಕಾರಿಗಳು ನಮ್ಮ ಮುಖಂಡರಿಗೆ ಲಿಖಿತ ರೂಪದಲ್ಲಿ ಕೊಟ್ಟ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸಲೇಬೇಕು. ತಪ್ಪಿದ್ದಲ್ಲಿ ಮುಂದಿನ ಆಗು ಹೋಗುಗಳಿಗೆ ಕೇಂದ್ರ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗುವುದು, ಹೀಗಾಗಿ ಈ ಪ್ರತಿಭಟನೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ಕಾರ್ಯಕಾರಿ ಸಮಿತಿ ಪರವಾಗಿ ವಿನಂತಿಸಿಕೊಂಡಿದ್ದಾರೆ.
ಇಪಿಎಸ್-95, ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘ ಕಳೆದ ಏಳೆಂಟು ವರ್ಷಗಳಿಂದ ಇಪಿಎಸ್ ನಿವೃತ್ತರ ಪರ ನ್ಯಾಯಕ್ಕಾಗಿ ಹೋರಾಟಕ್ಕಿಳಿದು, ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಮೂಲಕ ತನ್ನ ಅಸ್ಮಿತೆಯನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆ.
ಸಂಘವು ತನ್ನ ಶಕ್ತಿ ಪ್ರದರ್ಶನದ ಮೂಲಕ ಪಿಎಫ್ ಕಚೇರಿ ಆವರಣದಲ್ಲಿ ನಡೆಸಿದ ಪ್ರತಿಭಟನೆ, ಸಲ್ಲಿಸಿರುವ ಮನವಿ ಪತ್ರಗಳು, ನ್ಯಾಯಾಲಯಗಳು ನೀಡಿರುವ ತೀರ್ಪನ್ನು ಸರಳ ಭಾಷೆಯಲ್ಲಿ ಅರ್ಥೈಸಿರುವುದು, ಇವೆಲ್ಲವೂ ಮಾಧ್ಯಮಗಳಲ್ಲಿ ಪ್ರಸಾರವಾಗುವ ಮೂಲಕ ದೇಶದ ಎಲ್ಲ ಜನರ ಗಮನ ಸೆಳೆದಿದೆ, ಮಾತ್ರವಲ್ಲದೆ ಇಪಿಎಸ್ ನಿವೃತ್ತರಲ್ಲಿ ಸಾಕಷ್ಟು ಹರಿವು ಮತ್ತು ಜಾಗೃತಿ ಮೂಡಿಸಿದೆ ಎಂದರೆ ತಪ್ಪಾಗಲಾರದು ಎಂದು ಹೇಳಿದ್ದಾರೆ.
Related









