ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳು, ಇತ್ತೀಚಿನ ದಿನಗಳಲ್ಲಿ ನಿಗದಿತ ಪ್ರಯಾಣಿಕರ ಸಂಖ್ಯೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಭರ್ತಿಯಾಗಿ ಸಂಚರಿಸುತ್ತಿವೆ.

ಈ ರೀತಿ ಮೋಟಾರು ವಾಹನ ಕಾಯ್ದೆಯ ನಿಯಮ ಉಲ್ಲಂಘಿಸುತ್ತಿರುವ ಸಾರಿಗೆ ಸಂಸ್ಥೆಯ ಬಸ್‌ಗಳು, ಅವಘಡಕ್ಕೂ ದಾರಿ ಮಾಡಿಕೊಡುತ್ತಿವೆ. ಜತೆಗೆ ಹಲವು ಬಾರಿ ಇದರ ಪರಿಣಾಮವನ್ನು ಚಾಲಕರು ಮತ್ತು ನಿರ್ವಾಹಕರು ಅನುಭವಿಸಿದ್ದು, ದಂಡವನ್ನು ಕಟ್ಟಿದ್ದಾರೆ.
ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಜನರು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ಬಸ್‌ಗಳನ್ನು ಅವಲಂಬಿಸಿದ್ದಾರೆ. ಬಸ್‌ಗಳು ಇಲ್ಲದಿದ್ದಾಗ ಮಾತ್ರ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಯಾದ ನಂತರ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ, ನಿಗದಿಗಿಂತ ದುಪ್ಪಟ್ಟು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಈ ಅಸುರಕ್ಷಿತ ಪ್ರಯಾಣದಿಂದ ಅನಾಹುತ ಸಂಭವಿಸುವ ಆತಂಕ ಜನರಲ್ಲಿ ಹೆಚ್ಚಾಗಿದೆ.
ಮಹಿಳೆಯರ ಉಚಿತ ಪ್ರಯಾಣಕ್ಕೆ ರಾಜ್ಯ ಸರ್ಕಾರ ‘ಶಕ್ತಿ’ ಯೋಜನೆ ಜಾರಿಗೆ ತಂದಿದೆ. ಯೋಜನೆಯ ಲಾಭ ಪಡೆದಿರುವ ಮಹಿಳೆಯರು, ಉದ್ಯೋಗ, ಕೌಟುಂಬಿಕ ಕೆಲಸ, ಸಮಾರಂಭ ಸೇರಿ ಎಲ್ಲ ಕಡೆಗೂ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದೇ ಕಾರಣಕ್ಕೆ ನಿಲ್ದಾಣ ಹಾಗೂ ಬಸ್‌ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಒಂದೆಡೆ ಶಕ್ತಿ ಯೋಜನೆ ಜಾರಿ ಮಾಡಿರುವ ಸರ್ಕಾರ, ಇನ್ನೊಂದೆಡೆ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿಲ್ಲ. ಇರುವ ಬಸ್‌ಗಳಲ್ಲಿಯೇ ಸೇವೆ ನೀಡಲು ಸಾರಿಗೆ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಸ್‌ಗಳ ಕೊರತೆ ಇರುವ ಸಮಯದಲ್ಲಿ, ಪ್ರತಿ ಮಾರ್ಗದಲ್ಲೂ ಬಸ್‌ಗಳನ್ನು ಹೊಂದಾಣಿಕೆ ಮಾಡಲು ಅಧಿಕಾರಿಗಳು ಪರದಾಡುತ್ತಿದ್ದಾರೆ.
ಬಸ್‌ಗಳು ನಿಲ್ದಾಣಕ್ಕೆ ಬರುತ್ತಿದ್ದಂತೆ ಜನರು, ಮುಗಿಬಿದ್ದು ಬಸ್‌ನೊಳಗೆ ಹತ್ತುತ್ತಿದ್ದಾರೆ. ಸೀಟು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಬಸ್‌ನೊಳಗೆ ಹೋಗುತ್ತಿದ್ದಂತೆ ಸೀಟಿನ ವಿಚಾರವಾಗಿಯೇ ಜಗಳಗಳು ಹಾಗೂ ಪರಸ್ಪರ ಕೈ ಕೈ ಮಿಲಾಯಿಸುವ ಘಟನೆಗಳು ಹಾಗೂ ಬಿದ್ದು ಪೆಟ್ಟ ಮಾಡಿಕೊಂಡಿರುವುದು ಈಗಲೂ ಅಲ್ಲಲ್ಲಿ ವರದಿಯಾಗುತ್ತಲೇ ಇವೆ.
ಮೈಸೂರು-ಮಳವಳ್ಳಿ ರಸ್ತೆಯ ಬನ್ನೂರಿನಲ್ಲಿ ನಿತ್ಯವೂ ಬಸ್‌ನಲ್ಲಿ ಹೋಗುವುದಕ್ಕೆ ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಬಸ್ ಬರುವ ಹಾಗೂ ಹೋಗುವ ಸಮಯದಲ್ಲಿ, ಬಾಗಿಲು ಬಳಿ ನಿಲ್ಲಲು ಜಾಗವಿಲ್ಲದಷ್ಟು ಪ್ರಯಾಣಿಕರು ತುಂಬಿಕೊಳ್ಳುತ್ತಿದ್ದಾರೆ. ಬಾಗಿಲು ಬಳಿಯೇ ಜೋತು ಬಿದ್ದ ಸ್ಥಿತಿಯಲ್ಲಿಯೇ ಸಂಚರಿಸಿ, ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ.
ಹಲವೆಡೆ ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿವೆ. ಅದರಂತೆ ಇತ್ತೀಚೆಗೆ ಹಾವೇರಿ ಬಸ್‌ನಲ್ಲಿ ಜಾಗವಿಲ್ಲದಿದ್ದರಿಂದ, ಬಾಗಿಲು ಬಳಿ ನಿಂತುಕೊಂಡು ಪ್ರಯಾಣಿಸುತ್ತಿದ್ದ ವೃದ್ಧೆಯೊಬ್ಬರು ರಸ್ತೆಗೆ ಬಿದ್ದು ಗಾಯಗೊಂಡು ಮೃತಪಟ್ಟಿದ್ದಾರೆ. ಈ ಘಟನೆ ಬಳಿಕವೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಜನರು ಸಹ ಜಾಗೃತರಾಗಿಲ್ಲ. ಅಷ್ಟಾದರೂ ಆರ್‌ಟಿಒ ಹಾಗೂ ಪೊಲೀಸರು, ಸಾರಿಗೆ ಸಂಸ್ಥೆಗಳ ಬಸ್‌ಗಳ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ.
ಕರ್ನೂಲು ಬಳಿ ಖಾಸಗಿ ಬಸ್ ಬೆಂಕಿಗಾಹುತಿಯಾದ ಬಳಿಕ, ರಾಜ್ಯದಾದ್ಯಂತ ಖಾಸಗಿ ಬಸ್‌ಗಳ ಸುರಕ್ಷತಾ ಕ್ರಮಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆದರೆ, ಸಾರಿಗೆ ಸಂಸ್ಥೆಯ ಬಸ್‌ಗಳ ಅಸುರಕ್ಷಿತ ಸ್ಥಿತಿಯನ್ನು ಪರಿಶೀಲಿಸುತ್ತಿಲ್ಲವೆಂಬ ಆರೋಪವಿದೆ. ರಾಜ್ಯದಲ್ಲಿ ಎಲ್ಲ ವಾಹನಗಳ ಮಾಲೀಕರು ಹಾಗೂ ಚಾಲಕರು, ನಿಯಮ ಪಾಲಿಸಬೇಕು. ಆದರೆ, ಖಾಸಗಿ ವಾಹನಗಳಿಗಷ್ಟೇ ನಿಯಮ ಎಂಬ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಬಸ್‌ನವರು ನಿಯಮ ಉಲ್ಲಂಘನೆ ಮಾಡಿದರೂ ಸರ್ಕಾರ ಮಾತ್ರ ಮೌನವಾಗಿದೆ. ಕಾರಣ ಇದು ತನ್ನದೆ ತಪ್ಪು ಎಂಬುವುದು ಗೊತ್ತಿದೆ ಅದಕ್ಕೆ.
ಚಾಲಕ ನಿರ್ವಾಹಕರು ಹೈರಾಣ: ಪ್ರತಿ ಬಸ್‌ನಲ್ಲಿ 55 ರಿಂದ 65 ಮಂದಿ ಪ್ರಯಾಣಿಕರಿದ್ದಾಗ ಬಹುತೇಕರು ಸೀಟುಗಳ ಮೇಲೆ ಕುಳಿತು ಪ್ರಯಾಣಿಸುತ್ತಾರೆ. ಆದರೆ 70ಕ್ಕಿಂತ ಹೆಚ್ಚು ಪ್ರಯಾಣಿಕರು ಇದ್ದಾಗ ನಿಂತು ಪ್ರಯಾಣಿಸುವುದು ಅನಿವಾರ್ಯ. ಇಂಥ ಸಂದಣಿಯಲ್ಲಿ ಟಿಕೆಟ್ ನೀಡುವಾಗಲೂ ನಿರ್ವಾಹಕರು ಹೈರಾಣಾಗುತ್ತಾರೆ.
ಬಸ್‌ನಲ್ಲಿ ಹೆಚ್ಚು ಜನರು ಇರುವುದರಿಂದ ಚಾಲಕ ಸಹ ಆತಂಕದಲ್ಲಿ ಚಾಲನೆ ಮಾಡುವ ಸ್ಥಿತಿ ಇದೆ. ಸೀಟುಗಳಿಗೆ ತಕ್ಕಂತೆ ಪ್ರಯಾಣಿಕರು ಇದ್ದರೆ ಬಸ್ ನಿಯಂತ್ರಿಸಬಹುದು. ಆದರೆ 70ಕ್ಕಿಂತ ಹೆಚ್ಚು ಪ್ರಯಾಣಿಕರಿದ್ದರೆ ಹದಗೆಟ್ಟ ರಸ್ತೆ ನದಿ ದಡ ತಿರುವು ಘಟ್ಟ ಪ್ರದೇಶಗಳಲ್ಲಿ ಬಸ್‌ಗಳನ್ನು ನಿಯಂತ್ರಿಸುವುದು ಕಷ್ಟ ಎಂದು ಬಹುತೇಕ ಚಾಲಕರು ಸಂಸ್ಥೆಯ ಅಧಿಕಾರಿಗಳಿಗೆ ಹೇಳಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಚಾಲಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.
Related










