NEWSನಮ್ಮಜಿಲ್ಲೆನಮ್ಮರಾಜ್ಯ

ಡಿ.7ರಂದು ಇಪಿಎಸ್ ಪಿಂಚಣಿದಾರರ 95ನೇ ಮಾಸಿಕ ಸಭೆ: ನಂಜುಂಡೇಗೌಡ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇಪಿಎಸ್-95 ಪಿಂಚಣಿದಾರರ 95ನೇ ಮಾಸಿಕ ಸಭೆ ಇದೇ ಡಿ.7ರ ಭಾನುವಾರ ಲಾಲ್‌ಬಾಗ್ ಆವರಣದಲ್ಲಿ ಜರುಗಲಿದೆ ಎಂದು ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ತಿಂಗಳು ನಗರದ ಇಪಿಎಫ್ಒ ಕಚೇರಿ ಆವರಣದಲ್ಲಿ ಇಪಿಎಸ್ ಪಿಂಚಣಿದಾರರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ಇಪಿಎಫ್ಒ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೂ ಬಿಸಿ ಮುಟ್ಟಿದ್ದು, ದೇಶಾದ್ಯಂತ ಇರುವ ಇಪಿಎಸ್ ನಿವೃತ್ತರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸಿದೆ.

ಇನ್ನು ಪಾರ್ಲಿಮೆಂಟ್ ಚಳಿಗಾಲದ ಅಧಿವೇಶನ ಡಿ.1ರಿಂದ ಪ್ರಾರಂಭವಾಗಿದ್ದು, ಮೊದಲ ದಿನದ ಕಲಾಪದಲ್ಲಿ ಭಾಗಿಯಾದ ನಮ್ಮ ರಾಜ್ಯದ ಕನ್ನಡತಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಸಂಸದ ಬಿ.ಎಂ. ಸುರೇಶ್ ಗೋಪಿನಾಥ ಮಂತ್ರೆ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇಪಿಎಸ್ ಪಿಂಚಣಿದಾರರ ಮಾಸಿಕ ಕನಿಷ್ಠ ಪಿಂಚಣಿ 1,000 ರೂ.ಗಳಿಂದ 7,500 ರೂ.ಗಳಿಗೆ ಹೆಚ್ಚು ಮಾಡುವ ಯಾವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ ಎಂದು.

ಇನ್ನು ಈ ಯೋಜನೆಯು ಕಾಂಟ್ರುಬ್ಯುಟರಿ ಪೆನ್ಷನ್ ಸ್ಕೀಮ್ ಆಗಿದ್ದು, ಉದ್ಯೋಗದಾತರು ಹಾಗೂ ನೌಕರರಿಂದ ಪಡೆದ ದೇಣಿಗೆಗೆ ಬಡ್ಡಿ ಸೇರಿಸಿ, ತಮ್ಮ ಕೊಡುಗೆಯೊಂದಿಗೆ ಸಂಪೂರ್ಣ ಮೊತ್ತವನ್ನು ನಿವೃತ್ತರಿಗೆ ಈಗಾಗಲೇ ನೀಡಿದ್ದು, ಬಾಕಿ ಮೊತ್ತ ಇಲ್ಲ ಎಂದು ಕಲಾಪದಲ್ಲಿ ಉತ್ತರಿಸಿದ್ದಾರೆ.

ಸಚಿವೆ ಶೋಭಾ ಕರಂದ್ಲಾಜೆ ಅವರ ಈ ರೀತಿಯ ಪ್ರತಿಕ್ರಿಯೆಯನ್ನು ಯಾರು ನಿರೀಕ್ಷಿಸಿರಲಿಲ್ಲ. ಕಲಾಪ ಡಿಸೆಂಬರ್ 19, 2025 ರವರೆಗೆ ನಡೆಯಲಿದ್ದು, ಕೇರಳದ ಕೊಲ್ಲಮ್ ಸಂಸದರಾದ ಎನ್.ಕೆ.ಪ್ರೇಮ ಚಂದ್ರನ್ ಹಾಗೂ ಇನ್ನೂ ಹಲವಾರು ಸಂಸದರ ಪ್ರಶ್ನೋತ್ತರ ಕಲಾಪ ಬಾಕಿ ಇದ್ದು, ನಮ್ಮ ಪ್ರಯತ್ನ ಮುಂದುವರಿಸೋಣ ಎಂದು ತಿಳಿಸಿದ್ದಾರೆ.

ಮಧುರೈ ಹಾಗೂ ಕೊಲ್ಕತ್ತಾ ಉಚ್ಚ ನ್ಯಾಯಾಲಯಗಳು ಅಧಿಕ ಪಿಂಚಣಿಗೆ ಸಂಬಂಧಪಟ್ಟಂತೆ ಟ್ರಸ್ಟ್ ರೂಲ್ಸ್ ಬದಿಗಿಟ್ಟು, ಮಹತ್ವದ ತೀರ್ಪು ನೀಡಿದ್ದು, ಎಲ್ಲ ರಾಜ್ಯಗಳಿಂದಲೂ ದಾಖಲಾಗಿರುವ ಇಪಿಎಸ್ ಪ್ರಕರಣಗಳಲ್ಲಿ ಇದೇ ರೀತಿಯ ತೀರ್ಪುಗಳು ಹೊರಬರಲಿದ್ದು, ಇಪಿಎಸ್ ನಿವೃತ್ತ ರಲ್ಲಿ ಆಶಾಭಾವನೆ ಮೂಡಿಸಿದೆ. ಏನೇ ಆಗಲಿ ನಾವೆಲ್ಲರೂ ಸಕಾರಾತ್ಮಕವಾಗಿ ಮುನ್ನಡೆಯೋಣ. ಈ ಎಲ್ಲ ಸಂಗತಿಗಳನ್ನು 95 ನೇ ಮಾಸಿಕ ಸಭೆಯಲ್ಲಿ ಚರ್ಚಿಸಲಾಗುವುದು.
ಹಾಗಾಗಿ ಅದರಲ್ಲೂ ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ನಿವೃತ್ತರು, ಇತರೆ ಎಲ್ಲ ಕಂಪನಿ ಹಾಗೂ ಕಾರ್ಖಾನೆಗಳ ನಿವೃತ್ತರು ಭಾಗವಹಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

ನಾಲ್ಕು ತಿಂಗಳ ಕೆಳಗೆ ರಾಜ್ಯ ಸಂಸದರು ಹಾಗೂ ಪಾರ್ಲಿಮೆಂಟರಿ ಕಮಿಟಿ ಅಧ್ಯಕ್ಷರು ಆದ ಬಸವರಾಜ ಬೊಮ್ಮಾಯಿ ಅವರು ಇಪಿಎಸ್ ನಿವೃತ್ತರ ಪರ ಕೇಂದ್ರ ಸರ್ಕಾರಕ್ಕೆ ವರದಿಯೊಂದನ್ನು ನೀಡಿದ್ದು, ಕಳೆದ 11 ವರ್ಷಗಳಿಂದ ಇಪಿಎಸ್ ನಿವೃತ್ತರೆಗೆ ಕನಿಷ್ಠ ಪಿಂಚಣಿ 1,000 ರೂ. ಮಾತ್ರ ನೀಡುತ್ತಿದ್ದು, ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ನಿವೃತ್ತರ ಕನಿಷ್ಠ ಮಾಸಿಕ ಪಿಂಚಣಿ ಈಗ 7,500 ರೂ.ಗಳಿಗೆ ನಿಗದಿಪಡಿಸುವುದು ಸೂಕ್ತ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿ, ಡಿಸೆಂಬರ್ 2025ರ ಒಳಗೆ ನಿಗದಿಪಡಿಸಿ, ನೀಡಬೇಕೆಂದು ಶಿಫಾರಸು ಮಾಡಿರುತ್ತಾರೆ. ಈ ವರದಿ ಇನ್ನೂ ಬಾಕಿ ಇದೆ.

ಭರವಸೆ ಎಂಬುದು ಬದುಕಿನ ಜೀವ ಜಲ, ಅದನ್ನು ಎಂದಿಗೂ ಬತ್ತಲು ಬಿಡಬಾರದು. ಸಂಘರ್ಷವಿಲ್ಲದೆ ಏನನ್ನು ಪಡೆಯಲು ಸಾಧ್ಯವಿಲ್ಲ ಎಂಬುದು ತಮಗೂ ತಿಳಿದಿದೆ. ಏನೇ ಆಗಲಿ ಹೋರಾಟ ಮುಂದುವರಿಯಲಿದೆ.

78 ಲಕ್ಷ ಇಪಿಎಸ್ ನಿವೃತ್ತರ ಬದುಕು ಇಂದಿಗೂ ಅತಂತ್ರ ಸ್ಥಿತಿಯಲ್ಲಿದ್ದು, ಇದಕ್ಕೆ ಯಾರು ಕಾರಣ ಎಂದು ಹೇಳಬೇಕಾಗಿಲ್ಲ, ಇಪಿಎಫ್ಒ ಅಧಿಕಾರಿಗಳ ಧೋರಣೆ, ಅಸಹಕಾರ, ನಿರ್ಲಜ್ಜ ನಡೆ, ಇಪಿಎಸ್ ನಿವೃತ್ತರನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಏನೇ ಆಗಲಿ ನಾವೆಲ್ಲರೂ ಒಂದೇ, ಒಗ್ಗಟ್ಟಾಗಿ ನಮ್ಮ ಗುರಿ ಮುಟ್ಟಲು ಪ್ರಯತ್ನಿಸೋಣ ಎಂದು ನಂಜುಂಡೇಗೌಡ ಸಲಹೆ ನೀಡಿದ್ದಾರೆ.

ಇನ್ನು 95ನೇ ಮಾಸಿಕ ಸಭೆಗೆ ರಂಗಭೂಮಿ ಕಲಾವಿದರು, ಉತ್ತಮ ವಾಗ್ಮಿಯು ಆಗಿರುವ ಬಿಎಂಟಿಸಿ ನಿರ್ವಾಹಕಿ, ಉಮಾ ಪಿ. ಅವರು ಕಳೆದ 25 ವರ್ಷಗಳಿಂದ ಸರ್ಕಾರಿ ಹಾಗೂ ಸಂಸ್ಥೆಯ ಸಭೆ ಸಮಾರಂಭಗಳಲ್ಲಿ ನಿರೂಪಕಿಯಾಗಿಯೂ ಸೇವೆ ಸಲ್ಲಿಸುವ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದಾರೆ. ನಮ್ಮ ಸಂಘದ ಎಲ್ಲ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟಿನ ಪದಾಧಿಕಾರಿಗಳು, ಸದಸ್ಯರು, ಸಂಸ್ಥೆಯ ಸೇವೆಯಿಂದ ನಿವೃತ್ತರಾದ ಹಲವಾರು ಕಾರ್ಮಿಕ ಮುಖಂಡರು ಹಾಗೂ ಇತರೆ ಕಾರ್ಖಾನೆ ಹಾಗೂ ಕಂಪನಿಗಳ ನಿವೃತ್ತರು, ಸಭೆಯಲ್ಲಿ ಭಾಗವಹಿಸಲಿದ್ದು, ಮುಖಂಡರು ಇತ್ತೀಚಿನ ಎಲ್ಲ ಬೆಳವಣಿಗೆಗಳು ಹಾಗೂ ನಮ್ಮ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮಾತನಾಡಲಿದ್ದಾರೆ.

ಹೀಗಾಗಿ ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್‌ಬಾಗ್ ಹೂದೋಟದಲ್ಲಿ ವಾಯು ವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಭೇಟಿ, ವಿಚಾರ ವಿನಿಮಯ ಹಾಗೂ ಈ ಮೇಲ್ಕಂಡ ಎಲ್ಲ ಅಂಶಗಳ ಬಗ್ಗೆ ಚರ್ಚಿಸೋಣ. ಎಲ್ಲ ನಿವೃತ್ತ ನೌಕರರು ಡಿ.7ರ ಭಾನುವಾರ ಬೆಳಗ್ಗೆ 8 ಗಂಟೆಗೆ ಹಾಜರಾಗಿ ಎಂದು ಕಾರ್ಯಕಾರಿ ಸಮಿತಿ ಪರವಾಗಿ ವಿನಂತಿಸಿಕೊಂಡಿದ್ದಾರೆ.

Megha
the authorMegha

Leave a Reply

error: Content is protected !!