ಬೆಳಗಾವಿ: ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ ಕನ್ನಡ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾಗಿದ್ದವರು. ಇವರ ಹಲವು ಪುಸ್ತಕಗಳು ಇಂಗ್ಲೀಷ್ ಸೇರಿದಂತೆ ಭಾರತದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇತ್ತೀಚೆಗೆ ಅಗಲಿದ ಬೈರಪ್ಪ ಅವರಿಗೆ ಇಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಆದರಂಭವಾದ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಂತಾಪ ಸೂಚಿಸಿದರು.
1931ರ ಆಗಸ್ಟ್ 20 ರಂದು ಹಾಸನ ಜಿಲ್ಲೆ ಸಂತೆಶಿವರ ಗ್ರಾಮದಲ್ಲಿ ಜನಿಸಿದ್ದ ಭೈರಪ್ಪನವರು, ಕಿತ್ತು ತಿನ್ನುವ ಬಡತನದ ನಡುವೆಯೂ ಅತಿ ಎತ್ತರಕ್ಕೆ ಬೆಳೆದ ವ್ಯಕ್ತಿತ್ವ ಎಂದು ನೆನೆದರು.
ಇನ್ನು ಹುಬ್ಬಳ್ಳಿಯ ಶ್ರೀ ಕಾಡಸಿದ್ಧೇಶ್ವರ ಕಾಲೇಜು, ಗುಜರಾತ್‌ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯ, ದೆಹಲಿಯ ಎನ್‌ಸಿಇಆರ್‌ಟಿ ಮತ್ತು ಮೈಸೂರಿನ ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ತರ್ಕ ಮತ್ತು ಮನೋವಿಜ್ಞಾನದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಇಂಗ್ಲಿಷ್‌ನಲ್ಲಿ ರಚಿಸಿದ “ಸತ್ಯ ಮತ್ತು ಸೌಂದರ್ಯ” ಎಂಬ ಮಹಾ ಪ್ರಬಂಧಕ್ಕೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಗಳಿಸಿದ್ದರು. ಹುಬ್ಬಳ್ಳಿ, ಗುಜರಾತ್, ದೆಹಲಿಯಲ್ಲಿ ಉಪನ್ಯಾಸಕ ವೃತ್ತಿ ಕೈಗೊಂಡಿದ್ದ ಭೈರಪ್ಪನವರು, ನಾಲ್ಕು ದಶಕಗಳಲ್ಲಿ 25 ಕಾದಂಬರಿಗಳನ್ನು ಬರೆದಿದ್ದಾರೆ.
1999ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಪರ್ವ, ಗೃಹಭಂಗ, ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಸೇರಿದಂತೆ ಹಲವು ಕಾದಂಬರಿಗಳು ಮರಾಠಿ ಓದುಗರ ಮೆಚ್ಚುಗೆಗೂ ಪಾತ್ರವಾಗಿವೆ.
ವಂಶವೃಕ್ಷಕ್ಕೆ 1966ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲಿಯೇ ‘ಪರ್ವ’ ಅತ್ಯಂತ ಜನಪ್ರಿಯ. 94 ವರ್ಷ ಪೂರೈಸಿದರೂ ಸಹ ಭೈರಪ್ಪನವರು ಜೀವನದ ಬಗೆಗಿನ ಉತ್ಸಾಹವನ್ನು ಹಾಗೆಯೇ ಉಳಿಸಿಕೊಂಡಿದ್ದರು.
ಪದ್ಮಶ್ರೀ, ಪದ್ಮಭೂಷಣ, ಸರಸ್ವತಿ ಸಮ್ಮಾನ್, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಎನ್.ಟಿ.ಆರ್ ರಾಷ್ಟ್ರೀಯ ಪ್ರಶಸ್ತಿ, ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಭೈರಪ್ಪನವರು ತಮ್ಮದೇ ಆದ ದೊಡ್ಡ ಓದುಗ ಬಳಗವನ್ನು ಸೃಷ್ಟಿಸಿಕೊಂಡಿದ್ದರು. ಅನನ್ಯ ಸಾಹಿತಿ, ಅತ್ಯಂತ ಸರಳ ವ್ಯಕ್ತಿತ್ವದ ಭೈರಪ್ಪ ಅವರ ನಿಧನದಿಂದ ಸಾಹಿತ್ಯ ಪ್ರೇಮಿಗಳಿಗೆ ದೊಡ್ಡ ನಷ್ಟವುಂಟಾಗಿದೆ ಎಂದು ಸಂತಾಪ ಸೂಚಿಸಿದರು.
Related










