CRIMENEWSನಮ್ಮಜಿಲ್ಲೆ

KKRTC ದೇವದುರ್ಗ: ಬಸ್‌ ಪಲ್ಟಿ ನಿರ್ವಾಹಕ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ವಿಜಯಪಥ ಸಮಗ್ರ ಸುದ್ದಿ

ರಾಯಚೂರು: ಅಂಜುಳ ಗ್ರಾಮದಿಂದ ದೇವದುರ್ಗಕ್ಕೆ ಮರಳುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆನಾಲ್ ಸೇತುವೆ ದಾಟುವಾಗ ಪಲ್ಟಿಯಾಗಿ ಕಂಡಕ್ಟರ್ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಅಂಚೇಸುಗೂರು ಬಳಿ ಮಂಗಳವಾರ ಬೆಳಗ್ಗೆ ಈ ಭಯಾನಕ ಬಸ್ ಘಟನೆ ನಡೆದಿದ್ದು, ಗಾಯಾಳುಗಳನ್ನು ತಕ್ಷಣ ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಕಂಡಕ್ಟರ್‌ ಅಸುನೀಗಿದ್ದಾರೆ.

ದೇವದುರ್ಗ ಘಟಕದ ಬಸ್‌ ಇದಾಗಿದ್ದು ಇಂದು ಬೆಳಗ್ಗೆ ಈ ಬಸ್‌ನಲ್ಲಿ ಕಂಡಕ್ಟರ್‌ ಡ್ಯೂಟಿ ಮಾಡುತ್ತಿದ್ದ ಲಿಂಗಸುಗೂರು ತಾಲೂಕಿನ ಬಸವರಾಜ್ (36) ಅವರು ಮೃತಪಟ್ಟಿದ್ದಾರೆ.

ಅಂಜಳ ಗ್ರಾಮದಿಂದ ಅಂಚೇಸುಗೂರಿನ ಕೆನಾಲ್ ಸೇತುವೆ ದಾಟುವ ವೇಳೆ ಬಸ್ ಪಲ್ಟಿಯಾಗಿದೆ. ಬಸ್‌ನಲ್ಲಿ 39 ಜನ ಪ್ರಯಾಣಿಕರಿದ್ದರು. ಅವರಲ್ಲಿ 20 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಇತ್ತ ಬಸ್ ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ರಾಯಚೂರಿನ ರಿಮ್ಸ್‌ ಗೆ ರವಾನೆ ಮಾಡಲಾಗಿದೆ. ಬಸ್ ಪಲ್ಟಿಯಾಗಿ ಕೆಲ ಹೊತ್ತಾದರೂ ಆಂಬುಲೆನ್ಸ್ ಬಾರದ ಕಾರಣ ಟಂಟಂ, ಬೈಕ್‌ಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಘಟನೆ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ನಿರ್ವಾಹಕ ಮೃತ: ಈ ದುರ್ಘಟನೆಯಲ್ಲಿ ಬಸ್‌ನ ನಿರ್ವಾಹಕ ಬಸವರಾಜು ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿತ್ತು. ತಕ್ಷಣ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ನಂತರ, ಗಂಭೀರವಾಗಿ ಗಾಯಗೊಂಡಿರುವ ನಿರ್ವಾಹಕ ಬಸವರಾಜು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಆದರೆ, ಚಿಕಿತ್ಸೆ ಫಲಿಸಲಿಲ್ಲ.

ಇನ್ನು ವಿದ್ಯಾರ್ಥಿಗಳು ಸೇರಿದಂತೆ ಉಳಿದ 20 ಜನ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಚಾಲಕನ ವಿರುದ್ಧ ಕೇಸ್: ಕೆಕೆಆರ್‌ಟಿಸಿ ಬಸ್‌ಗಳು ಹಳ್ಳಿಗಳಿಂದ ಪಟ್ಟಣ ಪ್ರದೇಶಗಳಿಗೆ ಪ್ರಯಾಣಿಸುವಾಗ ವೇಗದ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚಾಲಕರು ಜವಾಬ್ದಾರಿಯುತವಾಗಿ ಬಸ್ ಚಾಲನೆ ಮಾಡಬೇಕು. ಬಸ್‌ಗಳ ನಿರ್ವಹಣೆ ಸರಿಯಾಗಿರಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇನ್ನು ಚಾಲಕನ ಅತಿ ವೇಗದ ಚಾಲನೆಯಿಂದಲೇ ಈ ಅಪಘಾತ ಸಂಭವಿಸಿದ್ದು, ಚಾಲಕನ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Megha
the authorMegha

Leave a Reply

error: Content is protected !!