NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ಸಿಎಂ ಸ್ವರ್ಣ-ಬೆಳ್ಳಿ ಪದಕ ಪಡೆದ ಚಾಲಕರ ಮಾಸಿಕ ಪ್ರೋತ್ಸಾಹ ಭತ್ಯೆ ಹೆಚ್ಚಿಸಿ ಎಂಡಿ ಆದೇಶ -ಡಿಸೆಂಬರ್‌ನಿಂದಲೇ ಜಾರಿ

ವಿಜಯಪಥ ಸಮಗ್ರ ಸುದ್ದಿ
  • ಯಾವುದೇ ದೂರು, ಪ್ರಕರಣಗಳಿಲ್ಲದೆ ಉತ್ತಮ ಸೇವೆ ಸಲ್ಲಿಸುತ್ತಿರುವ  ನಮಗೂ ಸಿಎಂ ಸ್ವರ್ಣ-ಬೆಳ್ಳಿ ಪದಕ ನೀಡಿ ಗೌರವಿಸಿ ಮಾಸಿಕ ಪ್ರೋತ್ಸಾಹ ಭತ್ಯೆ ನೀಡಿ- ನಿರ್ವಾಹಕರ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯಮಂತ್ರಿಗಳ ಸ್ವರ್ಣ ಪದಕ ಹಾಗೂ ಬೆಳ್ಳಿ ಪದಕ ಪಡೆದ ಚಾಲಕರ ಮಾಸಿಕ ಪ್ರೋತ್ಸಾಹ ಭತ್ಯೆಯನ್ನು 500 ರೂ.ಗಳಿಂದ 1000ಕ್ಕೆ ಹಾಗೂ 250 ರೂ.ನಿಂದ 500ಕ್ಕೆ ಪರಿಷ್ಕರಿಸಿದ್ದು, ಈ ಪರಿಷ್ಕೃತ ಪ್ರೋತ್ಸಾಹ ಭತ್ಯೆ ಇದೇ ಡಿಸೆಂಬರ್‌ ಜಾರಿ ಮಾಡಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಸುಶೀಲ ಅದೇಶ ಹೊರಡಿಸಿದ್ದಾರೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಾರ್ವಜನಿಕ ಪ್ರಯಾಣಿಕರ ಸಂಚಾರ ಜೀವನಾಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸುವುದರ ಜತೆಗೆ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಹಲವಾರು ಯೋಜನೆ/ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದರಲ್ಲಿ ಮುಖ್ಯವಾಗಿ ನಿಗಮದ ಚಾಲಕರಿಗೆ ಅಪಘಾತ ರಹಿತ ಸೇವೆಗಾಗಿ ಅವರನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಉದ್ದೇಶದಿಂದ ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಹಾಗೂ ಬೆಳ್ಳಿ ಪದಕಗಳನ್ನು ನೀಡಿ ಗೌರವಿಸಲಾಗುತ್ತಿದೆ.

ಅಪಘಾತ ರಹಿತ ಸೇವೆ ಸಲ್ಲಿಸಿ ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತು ಬೆಳ್ಳಿ ಪದಕ ಪಡೆದ ಅರ್ಹ ಚಾಲಕರಿಗೆ ಪ್ರಸ್ತುತ ವಾವತಿಸುತ್ತಿರುವ ಮಾಸಿಕ ಪ್ರೋತ್ಸಾಹ ಭತ್ಯೆಯನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರೋತ್ಸಾಹ ಭತ್ಯೆ ಪರಿಷ್ಕರಣೆ: 1) ಮುಖ್ಯ ಮಂತ್ರಿಗಳ ಸ್ವರ್ಣ ಪದಕಕ್ಕೆ ಅರ್ಹರಾಗುವ ಮತ್ತು ಪದಕ ಪಡೆದ ಚಾಲಕರಿಗೆ ಮಾಹೆಯಾನ ನೀಡುವ ಪ್ರೋತ್ಸಾಹ ಭತ್ಯೆಯನ್ನು 500 ರೂ.ಗಳಿಂದ 1000 ರೂ.ಗಳಿಗೆ ಹೆಚ್ಚಿಸಲಾಗಿದೆ.

2) ಅದರಂತೆ ಬೆಳ್ಳಿ ಪದಕಕ್ಕೆ ಅರ್ಹರಾಗುವ ಮತ್ತು ಪದಕ ಪಡೆದ ಚಾಲಕರಿಗೆ ಮಾಹೆಯಾನ ನೀಡುವ ಪ್ರೋತ್ಸಾಹ ಭತ್ಯೆಯನ್ನು250 ರೂ.ಗಳಿಂದ 500 ರೂ.ಗಳಿಗೆ ಹೆಚ್ಚಿಸಲಾಗಿದೆ.

3) ಇನ್ನು ಈ ಪರಿಷ್ಕೃತ ಪ್ರೋತ್ಸಾಹ ಭತ್ಯೆಯನ್ನು ಡಿಸೆಂಬರ್-2025 ರಿಂದ ಜಾರಿಗೆ ಬರುವಂತೆ ನೀಡಲಾಗುವುದು.

4. ಈ ಪರಿಷ್ಕೃತ ಪ್ರೋತ್ಸಾಹ ಭತ್ಯೆಯು ಈಗಾಗಲೇ ಪದಕಕ್ಕೆ ಅರ್ಹರಾಗಿ ಪದಕ ಸ್ವೀಕರಿಸಿದ ಹಾಗೂ ಪದಕಕ್ಕೆ ಅರ್ಹರಾಗಿರುವ ಮತ್ತು ಮುಂದೆ ಅರ್ಹರಾಗುವ ಸೇವೆಯಲ್ಲಿರುವ ಎಲ್ಲ ಚಾಲಕ (ಚಾಲಕ-ಕಂ-ನಿರ್ವಾಹಕರು ಸೇರಿದಂತೆ)ರಿಗೆ ಅನ್ವಯಿಸುತ್ತದೆ.

5. ಮುಂದೆ ಪದಕಕ್ಕೆ ಅರ್ಹರಾಗುವ ಚಾಲಕರಿಗೆ ಅರ್ಹರಾದ ವರ್ಷದ ಮುಂದಿನ ವರ್ಷದ ಜನವರಿ ಮಾಹೆಯಿಂದ ಪ್ರೋತ್ಸಾಹ ಭತ್ಯೆ ಅನ್ವಯಿಸುತ್ತದೆ (ಉದಾಹರಣೆ: 2025ರ ವರ್ಷದಲ್ಲಿ ಪದಕಕ್ಕೆ ಅರ್ಹರಾದವರಿಗೆ ಜನವರಿ-2026 ರಿಂದ ಪ್ರೋತ್ಸಾಹ ಭತ್ಯೆ ನೀಡುವುದು.) ಎಂದು ವ್ಯವಸ್ಥಾಪಕ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.

ಉತ್ತಮ ಸೇವೆ ಸಲ್ಲಿಸುತ್ತಿರುವ ನಿರ್ವಾಹಕರಿಗೂ ಪ್ರೋತ್ಸಾಹ ಭತ್ಯೆ ಕೊಡಿ: ಅಪಘಾತ ರಚಿತ ಚಾಲಕರಿಗೆ ಹೇಗೆ ಪ್ರೋತ್ಸಾಹ ಭತ್ಯೆ ನೀಡುತ್ತಿದ್ದೀರೋ ಅದರಂತೆ ಯಾವುದೇ ದೂರು ಪ್ರಕರಣಗಳಿಲ್ಲದೆ ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ನಿರ್ವಾಹಕರಿಗೂ ಕೂಡ ಮುಖ್ಯಮಂತ್ರಿಗಳ ಸ್ವರ್ಣ ಪದಕ ಹಾಗೂ ಬೆಳ್ಳಿ ಪದಕ ನೀಡಿ ಗೌರವಿಸುವ ಮೂಲಕ ಪ್ರೋತ್ಸಾಹ ಭತ್ಯೆ ನೀಡಬೇಕು ಎಂದು ನಿರ್ವಾಹಕರು ಕೂಡ ಈ ಹಿಂದಿನಿಂದಲೂ ಮನವಿ ಮಾಡುತ್ತಿದ್ದೇವೆ ಆದರೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ನಿರ್ವಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

Megha
the authorMegha

Leave a Reply

error: Content is protected !!