NEWSಬೆಂಗಳೂರುರಾಜಕೀಯ

ಮುಂಬರುವ ಜಿಬಿಎ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸುವ ಆಕಾಂಕ್ಷಿಗಳಿಂದ ಆನ್ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದ ಎಎಪಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜಿಬಿಎ ವ್ಯಾಪ್ತಿಯ ಬೆಂಗಳೂರಿನ ಐದು ನಗರ ಪಾಲಿಕೆಗಳ ಮುಂಬರುವ ಚುನಾವಣೆಗಾಗಿ ಆಮ್ ಆದ್ಮಿ ಪಕ್ಷವು ಆನ್ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.

ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ ‘ಇದುವರೆಗೂ ಬೆಂಗಳೂರಿನ ಜನತೆ ತಾವು ತೆರಿಗೆ ಕಟ್ಟುವ ಹಣಕ್ಕೆ ಸರಿಯಾಗಿ ಯಾವುದೇ ಮೂಲ ಸೌಕರ್ಯಗಳನ್ನು ಹೊಂದದೆ ಕಳಪೆ ಗುಣಮಟ್ಟದ ಜೀವನವನ್ನು ನಡೆಸುತ್ತಿರುವುದು ಕಟು ವಾಸ್ತವ ಎಂದು ತಿಳಿಸಿದರು.

ಅಲ್ಲದೆ ಇದುವರೆಗೂ ಆಳಿಕೊಂಡು ಬಂದ ಮೂರು ಪಕ್ಷಗಳು ಬೆಂಗಳೂರಿನ ಅಭಿವೃದ್ಧಿಗಾಗಿ ಮಾಡಿರುವ ಎಲ್ಲ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದ್ದು, ಲಕ್ಷಾಂತರ ಕೋಟಿ ರೂಪಾಯಿಗಳು ಭ್ರಷ್ಟರ ಪಾಲಾಗುತ್ತಿದೆ ಎಂದು ಕಿಡಿಕಾರಿದರು.

ಇನ್ನು ಅತ್ಯುತ್ತಮ ಶೈಕ್ಷಣಿಕ – ಆರೋಗ್ಯ ಸೌಲಭ್ಯಗಳ ಕೊರತೆ, ಕೆಟ್ಟ ಸಂಚಾರ ಸಮಸ್ಯೆ, ವಾಯು ಮಾಲಿನ್ಯ, ಮನಸೋ ಇಚ್ಛೆ ತೆರಿಗೆಗಳು, ಸಂಪೂರ್ಣ ಭ್ರಷ್ಟ ಆಡಳಿತ ವ್ಯವಸ್ಥೆಯಿಂದಾಗಿ ಬೆಂಗಳೂರು ವಾಸಿಗಳು ಒಂದು ಸುಂದರವಾದ ಬದುಕನ್ನು ಕಟ್ಟಿಕೊಳ್ಳಲಾಗದಂತಹ ಕೆಟ್ಟ ಪರಿಸ್ಥಿತಿಯಲ್ಲಿ ಇರುವುದು ವಾಸ್ತವ ಸಂಗತಿ ಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ಚುನಾವಣೆ ನಡೆಸದೆ ಸರ್ಕಾರಗಳು ಸಂವಿಧಾನವನ್ನು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಎಲ್ಲವುದಕ್ಕೂ ಇತಿಶ್ರೀ ಹಾಕುವ ಸಂದರ್ಭ ಇದೀಗ ಬಂದಿದೆ ಎಂದ ಅವರು, ಆಮ್ ಆದ್ಮಿ ಪಕ್ಷವು ಬೆಂಗಳೂರಿನ ಎಲ್ಲ ಐದು ನಗರ ಪಾಲಿಕೆಗಳಲ್ಲಿಯೂ ಸ್ಪರ್ಧಿಸಿ ಜಯಶೀಲರಾಗಿ ಆಡಳಿತ ನಡೆಸಲು ಸಂಪೂರ್ಣ ಸಜ್ಜಾಗಿದೆ ಎಂದು ಹೇಳಿದರು.

ಇನ್ನು ಬೆಂಗಳೂರಿಗರು ಸಹ ಈ ಕೆಟ್ಟ ವ್ಯವಸ್ಥೆಯನ್ನು ತೊಲಗಿಸುವ ಮಹದಾಸೆಯನ್ನು ಹೊಂದಿದ್ದಾರೆ. ಸಮಾಜದ ನಿಸ್ವಾರ್ಥ ಸಮಾಜ ಸೇವಕರು, ಪ್ರಾಮಾಣಿಕರೆಲ್ಲರೂ ಆಮ್ ಆದ್ಮಿ ಪಕ್ಷದ ವೇದಿಕೆಯಲ್ಲಿ ಒಂದಾಗಿ ಮೂರು ಪಕ್ಷಗಳ ಭ್ರಷ್ಟರನ್ನು ತೊಲಗಿಸಲು ಶುಭಗಳಿಗೆ ಚುನಾವಣೆಗಳ ಮೂಲಕ ಬರುತ್ತಿವೆ.

ಚುನಾವಣೆಗೆ ಸ್ಪರ್ಧಿಸ ಬಯಸುವ ಸಮಾಜದ ಎಲ್ಲ ಸ್ಥರಗಳ ಪ್ರಾಮಾಣಿಕ ಹೋರಾಟಗಾರರು ಸ್ಪರ್ಧಿಗಳಿಂದ ಪಕ್ಷವು ಅರ್ಜಿಯನ್ನು ಆಹ್ವಾನಿಸುತ್ತಿದೆ. ಎಲ್ಲರೂ ಒಂದಾಗಿ ಚುನಾವಣಾ ರಾಜಕಾರಣದ ಮೂಲಕ ಆಡಳಿತ ಪಡೆದು ಸುಂದರ ಬೆಂಗಳೂರನ್ನು ಶೀಘ್ರದಲ್ಲಿಯೇ ಕಟ್ಟೋಣ ಎಂದು ಸೀತಾರಾಮ್ ಗುಂಡಪ್ಪ ಕರೆ ನೀಡಿದರು.

ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಲಕ್ಷ್ಮೀಕಾಂತ ರಾವ್ ಮಾತನಾಡಿ, ಆನ್ಲೈನ್‌ನಲ್ಲಿ ಅರ್ಜಿಗಳನ್ನು ಇಂದಿನಿಂದ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಅನೇಕ ಸ್ಥಳೀಯ ನಾಯಕರು ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ. ಇದಲ್ಲದೆ ಮೂರು ಪಕ್ಷಗಳ ಪ್ರಾಮಾಣಿಕ ಅಭ್ಯರ್ಥಿಗಳು ಸಹ ಪಕ್ಷದೊಂದಿಗೆ ಕೈಜೋಡಿಸಿ ಗೆಲ್ಲುವ ವಿಶ್ವಾಸದಲ್ಲಿ ಇದ್ದಾರೆ. ಎಲ್ಲರೂ ಆನ್ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಶ್ಚಿಮ ಪಾಲಿಕೆಯ ಅಧ್ಯಕ್ಷ ಶಶಿಧರ್ ಆರಾಧ್ಯ, ಪಕ್ಷದ ಮುಖಂಡರುಗಳಾದ ಡಾ.ದಿನೇಶ್ ಕುಮಾರ್, ಉಮೇಶ್ ಯಾದವ್, ದೇವರಸಂ, ಪುಷ್ಪ , ಭಾನುಪ್ರಿಯಾ, ಶಿವಕುಮಾರ್ ಅನೇಕ ಆಕಾಂಕ್ಷಿಗಳು ಭಾಗವಹಿಸಿದ್ದರು.

Megha
the authorMegha

Leave a Reply

error: Content is protected !!