NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಕಾನೂನು ಕೇಂದ್ರ ತೆರೆಯಲು ಇಚ್ಚೆಯುಳ್ಳ ಸಂಘಟನೆಗೆ 2 ಲಕ್ಷ ರೂ. ದೇಣಿಗೆ, ಪೀಠೋಪಕರಣಗಳ ಕೊಡುಗೆ ಜತೆಗೆ 243 ವಕೀಲರಿಂದ ನೆರವು: ಲಾಯರ್‌ ಶಿವರಾಜು ಕರೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಕಾನೂನು ಕೇಂದ್ರ ತೆರೆಯಲು ಯಾವುದೇ ನೌಕರರ ಸಂಘಟನೆಗಳು ಮುಂದೆ ಬಂದರೆ ಆ ಸಂಘಟನೆಗೆ 2 ಲಕ್ಷ ರೂಪಾಯಿ ಜತೆಗೆ ಕೇಂದ್ರಕ್ಕೆ ಬೇಕಾಗುವ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡುವ  ಜತೆಗೆ ರಾಜ್ಯಾದ್ಯಂತ 243 ವಕೀಲರಿಂದ ನೆರವಿನ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಸುಪ್ರೀಂಕೋರ್ಟ್‌ ಹಾಗೂ ಹೈ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು ತಿಳಿಸಿದ್ದಾರೆ.

ಇತ್ತೀಚೆಗೆ ಚಾಲನಾ ಸಿಬ್ಬಂದಿಗಳ ಮೇಲೆ ಕೆಲ ಕಿಡಿಗೇಡಿ ಪ್ರಯಾಣಿಕರು ನಡೆಸುತ್ತಿರುವ ಹಲ್ಲೆ ಪ್ರಕರಣಗಳು ಹಾಗೂ ಅಪಘಾತದ ವೇಳೆ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಹಾಗೂ ಕಾನೂನಾತ್ಮಕವಾಗಿ ಅವರಿಗೆ ರಕ್ಷಣೆಕೊಡುವ ನಿಟ್ಟಿನಲ್ಲಿ ಈ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕಾನೂನು ಕೇಂದ್ರ ಕರ್ತವ್ಯ ನಿರ್ವಹಿಸಲಿದ್ದು, ಇದರ ಸಾಧಕ ಬಾಧಕಗಳನ್ನು ನೋಡಿಕೊಂಡು ಮುನ್ನಡೆಸಲು ಇಚ್ಚೆ ಇರುವ ನೌಕರರ ಸಂಘಟನೆಗಳು ಮುಂದೆ ಬಂದರೆ ಅಂಥ ಸಂಘಟನೆಗೆ ನಾವು ಈ ಸೌಲಭ್ಯವನ್ನು ಕೊಡಲಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಈ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕಾನೂನು ಕೇಂದ್ರವನ್ನು ಬೆಂಗಳೂರಿನಲ್ಲಿ ತೆರೆಯಬೇಕು. ಜತೆಗೆ ಇದನ್ನು ಯಾವುದೇ ಲೋಪವಾಗದಂತೆ ನೋಡಿಕೊಂಡು ಅಪಘಾತವಾದ ಸಮಯದಲ್ಲಿ ಯಾವ ಸ್ಥಳದಲ್ಲಿ ಘಟನೆ ಸಂಭವಿಸುತ್ತದೋ ಆ ವ್ಯಾಪ್ತಿಯಲ್ಲಿರುವ ವಕೀಲರನ್ನು ಈ ಕೇಂದ್ರದಲ್ಲಿರುವವರು ಸಂಪರ್ಕಿಸಿ ಮಾಹಿತಿ ನೀಡುವ ಜತೆಗೆ ನೌಕರರಿಗೆ ಕಾನೂನು ಬಲ ನೀಡಬೇಕು.

ಅಲ್ಲದೆ ಈ ಕೇಂದ್ರದಲ್ಲಿ ನಾವು ಭಾಗಿಯಾಗುವುದಿಲ್ಲ. ಕಾರಣ ನಾನು ಈಗಾಗಲೇ ಖಾಸಗಿ ಕಂಪನಿಯೊಂದರಲ್ಲಿ ವಕೀಲರಾಗಿರುವುದರಿಂದ ಅಲ್ಲಿನ ಕೇಸ್‌ಗಳನ್ನು ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಹೀಗಾಗಿ ನಾನು ಈ ಕೇಂದ್ರಕ್ಕೆ ಬರುವುದಿಲ್ಲ ಆದರೆ, ಈಗಾಗಲೇ ಆಯ್ಕೆ ಮಾಡಿಕೊಂಡಿರುವ ಅನುಭವವುಳ್ಳ 243 ಮಂದಿ ವಕೀಲರ ಪೂರ್ಣ ಮಾಹಿತಿಯನ್ನು ಕೇಂದ್ರ ನಡೆಸಲು ಮುಂದೆ ಬರುವ ಸಂಘಟನೆಗೆ ಕೊಡುವ ಮೂಲಕ ನೌಕರರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ನೌಕರರ ಬಗ್ಗೆ ಕಾಳಜಿ ಇರುವ ಸಂಘಟನೆಗಳು ಈ ಸಂಬಂಧ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಈ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕಾನೂನು ಕೇಂದ್ರ ತೆರೆಯುವುದಕ್ಕೆ ಇಚ್ಚೆ ಇದ್ದರೆ ತಮ್ಮ ಎಲ್ಲ ಅನುಭವವನ್ನು ಪೂರ್ಣ ಪ್ರಮಾಣದಲ್ಲಿ ವಿವರಿಸಿ ನಮಗೆ ಮನವಿ ಅರ್ಜಿ ನೀಡಿದ್ದಲ್ಲಿ ಅದನ್ನು ಪರಿಶೀಲಿಸಿ ಸೂಕ್ತ ಸಂಘಟನೆ ಯಾವುದು ಅನಿಸುತ್ತದೆಯೋ ಅದಕ್ಕೆ ಕೇಂದ್ರ ತೆರೆಯಲು ಬೇಕಾದ ಸವಲತ್ತುಗಳನ್ನು ಒಂದು ಬಾರಿಗೆ ಒದಗಿಸಿಕೊಡಲಾಗುವುದು.

ಈ ಉದ್ದೇಶ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಕಾನೂನಾತ್ಮಕವಾಗಿ ತಡೆಯುವುದೇ ಆಗಿದೆ. ಹೀಗಾಗಿ  ನೌಕರರ ಬಗ್ಗೆ ಕಾಳಜಿ ಇರು ಸಂಘಟನೆಗಳು ಮುಂದೆ ಬರುವ ಮೂಲಕ ಈ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

Megha
the authorMegha

Leave a Reply

error: Content is protected !!