NINCಗೆ OS ಪ್ರಕರಣ ದಾಖಲಿಸಿದ ತನಿಖಾ ಸಿಬ್ಬಂದಿ: ಪ್ರಕರಣ ಕೈಬಿಟ್ಟು ನಿರ್ವಾಹಕನಿಗೆ ನ್ಯಾಯ ಕೊಡಿ ಅಂತ ಪಟ್ಟುಹಿಡಿದ ಬಿಎಂಎಸ್

ಬೀದರ್: ನಿರ್ವಾಹಕ ಜಾನ್ಸನ್ (ಚಾಲಕ ಕಮ್ ನಿರ್ವಾಹಕ – 288) ಅವರ ವಿರುದ್ಧ ಹಾಕಿರುವ OS ಪ್ರಕರಣವನ್ನು ಕೈಬಿಟ್ಟು ನ್ಯಾಯ ಒದಗಿಸಬೇಕು ಎಂದು ಬೀದರ್ ವಿಭಾಗದ ಭಾರತೀಯ ಮಜ್ದೂರ ಸಂಘ ಆಗ್ರಹಿಸಿದೆ.

ಜಾನ್ಸನ್ ಅವರ ವಿರುದ್ಧ 11.09.2025 ರಂದು ಹೈದರಾಬಾದ್–ಬೀದರ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ (ಸಂಖ್ಯೆ KA-38 F-1279)ಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಾದ ಶರಣು ಮಾಲಗತ್ತಿ ಹಾಗೂ ಸಂಗಪ್ಪ ಅವರು ಜಹೀರಾಬಾದ್ ಬೈಪಾಸ್ ಬಳಿ ತನಿಖೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸದಾಶಿವಪೇಟ್‌ದಿಂದ ಜಹೀರಾಬಾದ್‌ಗೆ ಪ್ರಯಾಣಿಸಿದ ಒಬ್ಬ ಪ್ರಯಾಣಿಕರಿಗೆ ಟಿಕೆಟ್ ನೀಡಿಲ್ಲ ಎಂಬ ಆರೋಪ ದಾಖಲಿಸಲಾಗಿದ್ದು, ಈ ಪ್ರಕರಣದಲ್ಲಿ ಗಂಭೀರವಾದ ವಾಸ್ತವಾಂಶಗಳು ನಿರ್ವಾಹಕರ ಕೆಲಸಕ್ಕೆ ಸಂಚಕಾರವಾಗುವಂತೆ ಇರುವುದು ಭಾರಿ ಅಸಮಾಧಾನವುಂಟು ಮಾಡಿದೆ.
ಪ್ರಮುಖವಾಗಿ ಸಂಬಂಧಿತ ಪ್ರಯಾಣಿಕನು ಬಿಹಾರ ರಾಜ್ಯದವನಾಗಿದ್ದು, ಅವನಿಗೆ ಕನ್ನಡ ಹಾಗೂ ತೆಲುಗು ಭಾಷೆ ತಿಳಿಯದು, ಕೇವಲ ಹಿಂದಿ ಮಾತ್ರ ಬರುತದೆ. ಆ ವೇಳೆ ತನಿಖಾಧಿಕಾರಿಗಳು ಪ್ರಯಾಣಿಕನನ್ನು ಪ್ರಶ್ನಿಸಿದಾಗ, ಅವನು ತನ್ನ ಪ್ರಯಾಣದ ಗಮ್ಯಸ್ಥಾನವನ್ನು ಜಹೀರಾಬಾದ್ ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ಆದರೂ ಉದ್ದೇಶಪೂರ್ವಕವಾಗಿ ಪ್ರಯಾಣಿಕ ದಂಡ ರಶೀದಿಯಲ್ಲಿ ಸದಾಶಿವಪೇಟ್‌ದಿಂದ ಬೀದರ್ ಎಂದು ತಪ್ಪಾಗಿ ನಮೂದಿಸಲಾಗಿದೆ.
ಸದಾಶಿವಪೇಟ್–ಜಹೀರಾಬಾದ್ ಟಿಕೆಟ್ ದರ ₹80 ಆಗಿದ್ದು, ಸದಾಶಿವಪೇಟ್–ಬೀದರ್ ಟಿಕೆಟ್ ದರ ₹130 ಆಗಿರುತ್ತದೆ. ಈ ಮೂಲಕ ಸಣ್ಣ ಪ್ರಕರಣವನ್ನು ದೊಡ್ಡ OS ಪ್ರಕರಣವಾಗಿ ಪರಿವರ್ತಿಸಲಾಗಿದೆ.
ಅಷ್ಟೇ ಅಲ್ಲ ಸ್ವತಃ ಆ ಪ್ರಯಾಣಿಕನು ಬೀದರ್ ವಿಭಾಗೀಯ ಕಚೇರಿಗೆ ಹಾಜರಾಗಿ, ಸಂಚಾರ ಅಧಿಕಾರಿಗಳ ಮುಂದೆ ಲಿಖಿತ ಹಾಗೂ ಮೌಖಿಕ ಹೇಳಿಕೆ ನೀಡಿದ್ದು, ಈ ಪ್ರಯಾಣಿಕ ಹೊರ ರಾಜ್ಯದವನಾಗಿದ್ದರಿಂದ ಕನ್ನಡ ಭಾಷೆ ಅರ್ಥವಾಗಿಲ್ಲ. ತನಿಖಾ ಅಧಿಕಾರಿ ಇಲ್ಲಿಂದ ಎಲ್ಲಿಗೆ ಹೋಗಬೇಕು ಎಂದು ವಿಚಾರಿಸಿದಾಗ ಬಿಹಾರ್ ಎಂದು ಹೇಳಿದ್ದಾರೆ.
ಆದರೆ ತನಿಖಾ ಅಧಿಕಾರಿ ಅದಕ್ಕೆ ಬೀದರ್ ಎಂದು ತಪ್ಪು ಆಪಾದನ ಪತ್ರ ನೀಡಿರುವುದು ಎಷ್ಟು ಸರಿ? ಮುಂದೆ ನಮ್ಮ ತನಿಖಾ ಅಧಿಕಾರಿ ಮೊದಲು ಪ್ರಯಾಣಿಕನ ಹತ್ತಿರ ಭಾಷೆ ಚೆನ್ನಾಗಿ ಅರ್ಥ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ನನಗೆ ಕನ್ನಡ, ತೆಲುಗು ಬರಲ್ಲ. ಕಂಡಕ್ಟರ್ ನನ್ನ ಬಳಿ ಬರಲೇ ಇಲ್ಲ. ನಾನು ಹಣವೂ ಕೊಟ್ಟಿಲ್ಲ. ನಾನು ಹತ್ತಿದ ಸ್ಥಳ ಸದಾಶಿವಪೇಟ್ ಬೈಪಾಸ್ ಮತ್ತು ಇಳಿದ ಸ್ಥಳ ಜಹೀರಾಬಾದ್ ಬಸ್ ಸ್ಟ್ಯಾಂಡ್ ಎಂದು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ. ಪ್ರಯಾಣಿಕ ನೀಡಿದ ಹೇಳಿಕೆಯ ವಿಡಿಯೋ ದಾಖಲೆ ಕೂಡ ಲಭ್ಯವಿದೆ.
ಪ್ರಯಾಣಿಕನೇ ಸ್ಪಷ್ಟವಾಗಿ ನಿರ್ವಾಹಕರ ಯಾವುದೇ ತಪ್ಪಿಲ್ಲ ಎಂದು ಒಪ್ಪಿಕೊಂಡಿರುವ ಸಂದರ್ಭದಲ್ಲಿ, ನಿರ್ವಾಹಕರ ಮೇಲೆ OS ಪ್ರಕರಣ ದಾಖಲಿಸುವುದು ಸಂಪೂರ್ಣ ಅನ್ಯಾಯವಾಗಿದೆ. ಈ ಬಗ್ಗೆ ನ್ಯಾಯ ಕೊಡಲೇಬೇಕು ಎಂದು ಬಿಎಂಎಸ್ ಪದಾಧಿಕಾರಿಗಳು ಪಟ್ಟುಹಿಡಿದಿದ್ದಾರೆ.
ಈ ಎಲ್ಲ ವಾಸ್ತವಾಂಶಗಳಿಂದ ಸ್ಪಷ್ಟವಾಗುವಂತೆ, ನಿರ್ವಾಹಕ ಜಾನ್ಸನ್ (288) ಅವರಿಂದ ಯಾವುದೇ ಉದ್ದೇಶಪೂರ್ವಕ ತಪ್ಪು ನಡೆದಿಲ್ಲ. ಪ್ರಕರಣವು ತಪ್ಪು ಮಾಹಿತಿಯ ಆಧಾರದಲ್ಲಿ ದಾಖಲಿಸಲ್ಪಟ್ಟಿದೆ. ಇದರಿಂದ ನಿರ್ವಾಹಕರಿಗೆ ಮಾನಸಿಕ ಹಿಂಸೆ ಮತ್ತು ವೃತ್ತಿಪರ ಅನ್ಯಾಯ ಸಂಭವಿಸಿದೆ. ಅದರಿಂದ ಈ ಎಲ್ಲ ದಾಖಲೆಗಳು, ಪ್ರಯಾಣಿಕನ ಸ್ವತಃ ನೀಡಿದ ಹೇಳಿಕೆ ಹಾಗೂ ವಿಡಿಯೋ ಸಾಕ್ಷ್ಯದ ಆಧಾರದಲ್ಲಿವೆ.
ಹೀಗಾಗಿ ಈ OS ಪ್ರಕರಣವನ್ನು ತಕ್ಷಣವೇ ಕೈಬಿಡಬೇಕು ಮತ್ತು ನಿರ್ವಾಹಕ ಜಾನ್ಸನ್ (288) ಅವರಿಗೆ ನ್ಯಾಯ ಒದಗಿಸಬೇಕು. ಅಲ್ಲದೆ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಸಂಬಂಧಿತ ತನಿಖಾಧಿಕಾರಿಗಳ ಕಾರ್ಯ ವೈಖರಿಯ ಮೇಲೂ ಸೂಕ್ತ ಪರಿಶೀಲನೆ ನಡೆಸಬೇಕೆಂದು ಎಂಡಿ ಹಾಗೂ ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
Related









