ಡಿ.29ರಂದು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ EPS-95 ಬಿಎಂಟಿಸಿ-ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಬೃಹತ್ ಪ್ರತಿಭಟನೆ
ಲಾಲ್ ಬಾಗ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ ಇಪಿಎಸ್ ನಿವೃತ್ತರು.ಬೆಂಗಳೂರು: ನಿಧಿ ಆಪ್ಕೆ ನಿಕಟ್” ಇಪಿಎಸ್ ಪಿಂಚಣಿದಾರರ 35ನೇ ಪ್ರತಿಭಟನಾ ಸಭೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪಿಎಫ್ ಕಚೇರಿ ಆವರಣದಲ್ಲಿ ಇದೇ ಡಿಸೆಂಬರ್ 29 ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಪಿಎಸ್ ನಿವೃತ್ತರ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಡಿ.29ರ ಸೋಮವಾರ ಬೆಳಗ್ಗೆ 10:30ಕ್ಕೆ ಪ್ರತಿಭಟನೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗಲಿದ್ದು ಎಲ್ಲ ನಿವೃತ್ತರು ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ.
ಸಂಸತ್ ಚಳಿಗಾಲದ ಅಧಿವೇಶನದಲ್ಲಿ ನಿರಾಸೆ: ಇನ್ನು ಇದೇ ಡಿಸೆಂಬರ್‌ನಲ್ಲಿ ಜರುಗಿದ ಪಾರ್ಲಿಮೆಂಟ್ ಚಳಿಗಾಲದ ಅಧಿವೇಶನ ನಿವೃತ್ತರ ಪಾಲಿಗೆ ಅತ್ಯಂತ ನಿರಾಶದಾಯಕವಾಗಿತ್ತು. ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಅದೇ ಹಾಡು ಅದೇ ರಾಗ”ದ ಈ ರೀತಿಯ ಉತ್ತರವನ್ನು ನಾವ್ಯಾರೂ ನಿರೀಕ್ಷಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನಸೇವೆಯೇ ಜನಾರ್ದನ ಸೇವೆ” ಎಂದು ತಿಳಿದ ಸಾರಿಗೆ ಸಂಸ್ಥೆಯ ನೌಕರರನ್ನು ಪಿಂಚಣಿ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂ ಅಧಿಕಾರಿಗಳು ಈ ರೀತಿ ವಂಚಿಸುತ್ತಾರೆ ಎಂದು ಯಾರೂ ತಿಳಿದಿರಲಿಲ್ಲ. ಸಾರ್ವಜನಿಕ ಬದುಕಿನಲ್ಲಿ ಜೀವವನ್ನೆ ಪಣಕ್ಕಿಟ್ಟು ಸೇವೆ ಸಲ್ಲಿಸಿದ್ದ ನಮಗೆ ನಿವೃತ್ತಿಯ ನಂತರವು ನೆಮ್ಮದಿಯಿಲ್ಲ ಎಂತಹ ವಿಪರ್ಯಾಸ!!!.
ಅದರೂ, ದಂಡಿಗೆ ದಾಳಿಗೆ ಹೆದರದ “ನಾವು ••••• ಇವರಿಗೆ ಹೆದರುತ್ತೇವೆಯೇ?. ನಿಮ್ಮಂತೆ ನಮಗೂ ಪಿಂಚಣಿ ನೀಡಿ ಎಂದು ಕೇಳುವ ಹಕ್ಕು ಪ್ರತಿಯೊಬ್ಬ ಪಿಂಚಣಿಗಾರರಿಗೂ ಇದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸದೆ ಇನ್ನೂ ಎಷ್ಟು ವರ್ಷಗಳ ಕಾಲ, ಕಾಲಹರಣ ಮಾಡುತ್ತೀರಿ? ಮಾಡಿ ನಾವು ಕೂಡ ಈ ಪ್ರತಿಭಟನೆ ಶಕ್ತಿ ಪ್ರದರ್ಶನದ ಮೂಲಕ ನಿಮಗೆ ಸಾಕ್ಷಿಯಾಗಿ ಕೊಡುತ್ತಿರುತ್ತೇವೆ. ನ್ಯಾಯಕ್ಕಾಗಿ ನಮ್ಮ ಪ್ರತಿಭಟನೆ, ಏನೇ ಆಗಲಿ, ಗುರಿ ಮುಟ್ಟುವವರೆಗೂ ಹೋರಾಟ ನಿಲ್ಲದು ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಮಧುರೈ ಹಾಗೂ ಕಲ್ಕತ್ತಾ ಉಚ್ಚ ನ್ಯಾಯಾಲಯಗಳು ಇಪಿಎಸ್ ನಿವೃತ್ತರ ಪರ ತನ್ನ ತೀರ್ಪು ನೀಡಿದ್ದು, ವಿನಾಯ್ತಿ ಅಥವಾ ವಿನಾಯ್ತಿ ಏತರ ಸಂಸ್ಥೆಗಳ ಎಲ್ಲ ನೌಕರರು ಜಂಟಿ ಆಯ್ಕೆ ಪತ್ರ ಸಲ್ಲಿಸಿದ್ದಲ್ಲಿ, ಅಂತಹ ನೌಕರರಿಗೆ ಅಧಿಕ ಪಿಂಚಣಿ ನೀಡಲೇಬೇಕು ಎಂದು ಆದೇಶ ನೀಡಿದೆ ಹಾಗೂ ಜಮ್‌ಶೆಟ್‌ಪುರ ಇಪಿಎಫ್‌ಒ ಅಧಿಕಾರಿಗಳು ಟಾಟಾ ಸ್ಟೀಲ್ ಕಂಪನಿಯ ಇಪಿಎಸ್ ನಿವೃತ್ತರಿಗೆ ಟ್ರಸ್ಟ್ ರೂಲ್ಸ್ ಅನ್ವಯ ಅಧಿಕ ಪಿಂಚಣಿ ನೀಡಲು ಆದೇಶಿಸಿದ್ದು, ಇವೆಲ್ಲವೂ ಇಪಿಎಸ್ ನಿವೃತ್ತರಲ್ಲಿ ಭರವಸೆ ಮೂಡಿಸಿದೆ.
ಇಪಿಎಸ್ ನಿವೃತ್ತರ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿ, ರಾಷ್ಟ್ರೀಯ ಸಂಘರ್ಷ ಸಮಿತಿ, ಭಾರತೀಯ ಮಜ್ಡೂರ್ ಸಂಘ, ರಾಷ್ಟ್ರೀಯ ಸಮನ್ವಯ ಸಮಿತಿ ಹೀಗೆ ಇನ್ನು ಹಲವಾರು ರಾಷ್ಟ್ರೀಯ ಸಂಘಟನೆಗಳು ಹೋರಾಟ ಮಾಡುತ್ತಿದ್ದು, ಸರ್ವರೂ ಸಮಾನರು, ನಾವೆಲ್ಲರೂ ಇಪಿಎಸ್ ಪಿಂಚಣಿದಾರರು, ನಮಗೆ ಬದುಕು ಮುಖ್ಯ !!!. ಯಾರಾದರು ಆಗಲಿ, ನ್ಯಾಯ ಕೋಡಿಸಿ, ಅದಕ್ಕಾಗಿ ಇಪಿಎಸ್ ನಿವೃತ್ತರ 35 ನೇ ಪ್ರತಿಭಟನೆಯನ್ನು ಪಿಎಫ್ ಅಧಿಕಾರಿಗಳ ಕಚೇರಿ ಆವರಣದಲ್ಲಿ ಡಿ.29 ರಂದು ಹಮ್ಮಿಕೊಳ್ಳಲಾಗಿದೆ. ಈ ಬಾರಿ 2020ರ ನಂತರ ನಿವೃತ್ತರಾದ ಸಂಸ್ಥೆಯ ನೌಕರರೂ ಹಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಚಿಕ್ಕಬಳ್ಳಾಪುರ ವತಿಯಿಂದ ಆಯೋಜಿಸುತ್ತಿರುವ ಈ ಇಪಿಎಸ್ ನಿವೃತ್ತರ ಪ್ರತಿಭಟನೆಯ ನಮ್ಮ ಕೂಗು ದೆಹಲಿಗೆ ತಲುಪಬೇಕು. ಹಾಗಾಗಿ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಅಧಿಕ ಪಿಂಚಣಿ ಈ ಎರಡು ಅಂಶಗಳಿಗೆ ಸಂಬಂಧಿಸಿದ ಈ ಪ್ರತಿಭಟನೆಗೆ ಪ್ರತಿಯೊಬ್ಬರು ಬರಬೇಕು ಎಂದು ನಂಜುಂಡೇಗೌಡ ಕರೆ ನೀಡಿದ್ದಾರೆ.
ಸಂಘದ ಎಲ್ಲ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಗಳ ಎಲ್ಲ ಇಪಿಎಸ್ ನಿವೃತ್ತರು, ಕಂಪನಿ ಹಾಗೂ ಕಾರ್ಖಾನೆಗಳ ನಿವೃತ್ತರು ಆಗಮಿಸಲಿದ್ದು, ಅಧಿಕಾರಿಗಳು ನಮ್ಮ ಮುಖಂಡರಿಗೆ ಲಿಖಿತ ರೂಪದಲ್ಲಿ ಕೊಟ್ಟ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸಲೇಬೇಕು? ತಪ್ಪಿದಲ್ಲಿ ಮುಂದಿನ ಆಗುಹೋಗುಗಳಿಗೆ ಕೇಂದ್ರ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಲು ನಮ್ಮೊಂದಿಗೆ ಎಲ್ಲರೂ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.
Related









