ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಹೊಸ ವರ್ಷ ಸ್ವಾಗತಿಸಲು ಪೊಲೀಸರು ತೋರಿದ ಶಿಸ್ತು ಶ್ಲಾಘನೀಯ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ, ಸುರಕ್ಷಿತವಾಗಿ ಹಾಗೂ ಅಷ್ಟೇ ಅದ್ದೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ನಮ್ಮ ಕರ್ನಾಟಕ ಪೊಲೀಸರು ತೋರಿದ ಶಿಸ್ತು, ಸಮರ್ಪಣೆ ಮತ್ತು ಅವಿಶ್ರಾಂತ ಪ್ರಯತ್ನಗಳು ಎಂದು ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೊಲೀಸರ ವೃತ್ತಿಪರತೆ ಮತ್ತು ಸಾರ್ವಜನಿಕರ ಸುರಕ್ಷತೆಯೆಡೆಗಿನ ಬದ್ಧತೆಯು ನೈಜ ಸೇವಾ ಮನೋಭಾವದ ದ್ಯೋತಕ. ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದರು.
ಹೊಸವರ್ಷವು ಎಲ್ಲ ಕನ್ನಡಿಗರಿಗೂ ಸುಖ, ಸಂತಸ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ. ಇನ್ನು ಬದಲಾವಣೆಯ ವರ್ಷದಿಂದ ಭರವಸೆಯ ವರ್ಷಕ್ಕೆ ಕಾಲಿಡುತ್ತಿರುವ ನನ್ನ ಪ್ರೀತಿಯ ನಾಡ ಬಾಂಧವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಈ ವರ್ಷ ಉತ್ತಮ ಮಳೆ – ಬೆಳೆಯಾಗಿ ರಾಜ್ಯ ಸಮೃದ್ಧಿಯಾಗಲಿ, ಸಮಾಜದಲ್ಲಿ ದ್ವೇಷ, ಅಸೂಯೆ ಅಳಿದು ಪ್ರೀತಿ – ಶಾಂತಿ – ಸೌಹಾರ್ದತೆ ನೆಲೆಸಲಿ, ಶಿಕ್ಷಣ, ಉದ್ಯೋಗ ಹೀಗೆ ವಿವಿಧ ವಲಯಗಳಲ್ಲಿ ತೊಡಗಿರುವ ನಾಡಿನ ಪ್ರತಿಯೊಬ್ಬರ ಬದುಕು ಉನ್ನತಿಯೆಡೆಗೆ ಸಾಗಲಿ ಎಂದು ಮನದುಂಬಿ ಹಾರೈಸುತ್ತೇನೆ ಎಂದರು.
ನಾವೆಲ್ಲರೂ ಕೂಡಿ ಹೊಸ ವರ್ಷವನ್ನು ಹೊಸ ಚಿಂತನೆ, ಹೊಸ ಉತ್ಸಾಹ, ಹೊಸ ಭರವಸೆಗಳೊಂದಿಗೆ ಬರಮಾಡಿಕೊಳ್ಳೋಣ. ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Related









