NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರು ಮುಷ್ಕರ ಮಾಡುವ ಸ್ಥಿತಿಗೆ ತಂದಿರುವುದು ನೀವು-ಬಿಜೆಪಿಯವರು: ರಾಮಲಿಂಗಾರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸಂಬಂಧ ಮೊದಲ ಬಾರಿಗೆ ನೌಕರರು ಮುಷ್ಕರ ಮಾಡಿದ್ದು ಬಿಜೆಪಿ ಕಾಲದಲ್ಲಿಯೇ ಎಂಬುದನ್ನು ಮರೆತು ಬಿಟ್ಟರಾ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

ಸಾರಿಗೆ ನೌಕರರಿಗೆ ಶೇ.15ರಷ್ಟು ಹೆಚ್ಚಳದ ಹಿಂಬಾಕಿಯನ್ನು ನೀಡಿಲ್ಲ. 38 ತಿಂಗಳ ಹಿಂಬಾಕಿಯನ್ನು ನೀಡುವಂತೆ ಒತ್ತಾಯಿಸಿ ನಿವೃತ್ತ ನೌಕರರು ಪ್ರತಿಭಟಿಸುವ ಸ್ಥಿತಿಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಸೃಷ್ಟಿಸಿದೆ ಎಂದು ಬಿಜೆಪಿ ‘X’ನಲ್ಲಿ ಟೀಕಿಸಿತ್ತು. ಅದಕ್ಕೆ ರಾಮಲಿಂಗಾರೆಡ್ಡಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಅವಧಿಯಲ್ಲಿ ವೇತನಕ್ಕಾಗಿ 15 ದಿವಸಗಳ ಸುದೀರ್ಘ ಮುಷ್ಕರ ನಡೆದಿತ್ತು. ಮುಷ್ಕರದಲ್ಲಿ ಪಾಲ್ಗೊಂಡ 3,000 ನೌಕರರನ್ನು ವಜಾ, ಅಮಾನತು, ವರ್ಗಾವಣೆ ಮಾಡಿ, ಹಲವು ಸಿಬ್ಬಂದಿಯ ವಿರುದ್ಧ ಎಫ್‌ಐಆ‌ರ್ ದಾಖಲಿಸಿತ್ತು. ಇಂದಿಗೂ ಅವರು ಕೋರ್ಟ್ ಕಚೇರಿ ಅಲೆಯುತ್ತಿದ್ದಾರೆ. ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಿ 38 ತಿಂಗಳ ಬಾಕಿ ಹಣ ಪಾವತಿ ಮಾಡದೇ, ಅದಕ್ಕಾಗಿ ಯಾವುದೇ ಹಣ ಮೀಸಲಿರಿಸದೆ ಸಾರಿಗೆ ನೌಕರರನ್ನು ಬೀದಿಗೆ ತಂದು ಅವರು ಮುಷ್ಕರವನ್ನು ಮಾಡುವ ಹಂತಕ್ಕೆ ತಂದಿರುವುದನ್ನು ಮರೆತು ಬಿಟ್ಟರಾ ಎಂದು ಕೇಳಿದ್ದಾರೆ.

2023ರಲ್ಲಿ ವೇತನ ಹೆಚ್ಚಳ ಮಾಡಿ ನಿವೃತ್ತಿ ಹೊಂದಿದ ನೌಕರರಿಗೆ ಬಾಕಿ ನೀಡದೆ ಹೋಗಿದ್ದೀರಿ. ನಾವು ₹224 ಕೋಟಿ ಪಾವತಿ ಮಾಡಿದ್ದೇವೆ. ನಿಮ್ಮ ಕಾಲದಲ್ಲಿ ಶೂನ್ಯ ನೇಮಕಾತಿ, ಹೊಸ ಬಸ್ ಸೇರ್ಪಡೆ ಇಲ್ಲ. ನೌಕರರಿಗೆ ಅರ್ಧ ವೇತನ. ಈ ರೀತಿ ದುರಾಡಳಿತ ನೀಡಿದವರು ಈಗ ‘X’ ನಲ್ಲಿ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ನಮ್ಮ ಕಾಲದಲ್ಲಿ ಬರೋಬ್ಬರಿ 10,000 ಹುದ್ದೆಗಳಿಗೆ ನೇಮಕಾತಿ, 7,800 ಹೊಸ ಬಸ್ಸುಗಳು, ಸಾರಿಗೆ ನೌಕರರಿಗೆ ಪ್ರತಿ ತಿಂಗಳ ಒಂದನೇ ತಾರೀಖಿನಂದು ಪೂರ್ತಿ ಸಂಬಳ ಪಾವತಿ, ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಆಗಿದೆ. ನಿಮ್ಮ ಅಧಿಕಾರದ ಅವಧಿಯಲ್ಲಿ ಕಾಳಜಿ ವಹಿಸದೇ ಈಗ ಕಾಳಜಿಯ ನಾಟಕ ಮಾಡಲು ನಾಚಿಕೆಯಾಗುವುದಿಲ್ಲವೇ ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

Megha
the authorMegha

Leave a Reply

error: Content is protected !!