ಬೆಂಗಳೂರು: ದೀಪಾವಳಿ ಹಬ್ಬ ಎಂದರೆ ಎಲ್ಲರಲ್ಲೂಸಂಭ್ರಮ ಬೆಳಕಿನ ಜತೆಗೆ ಮನರಂಜನೆಯ ಹಬ್ಬ ಎಂದು ಖುಷಿಪಡುವುದೇ ಹೆಚ್ಚು, ಈ ಮಧ್ಯೆ ಈ ಬೆಳಕಿನ ಹಬ್ಬ ಕೆಲವರ ಪಾಲಿಗೆ ಕತ್ತಲೆಯಾಗಿಯೂ ಪರಿಣಮಿಸುವುದು ವರ್ಷವರ್ಷ ಕೇಳುತ್ತಲೇ ಇರುತ್ತೇವೆ. ಆದರೂ ಎಚ್ಚೆತ್ತುಕೊಳ್ಳದೆ ದುರಂತಕ್ಕೆ ಕೆಲವರು ಸಿಲುತ್ತಿರುತ್ತಾರೆ.
ಅದೇ ರೀತಿ ವರ್ಷವೂ ಕೂಡ ಬೆಳಕಿನ ಹಬ್ಬವನ್ನು ಆಚರಣೆ ಮಾಡುವ ವೇಳೆ ಪಟಾಕಿ ಸಿಡಿಸಲು ಹೋಗಿ ಅಥವಾ ಯಾರೋ ಹಚ್ಚಿನ ಪಟಾಕಿಗೆ ಇನ್ನಾರೂ ನೋವು ಅನುಭವಿಸುವುದನ್ನು ಕಾಣುತ್ತಿದ್ದೇವೆ. ನಿನ್ನೆ ದೀಪಾವಳಿ ಹಬ್ಬದ ಹಿನ್ನೆಲೆ 10 ವರ್ಷದ ಬಾಲಕನೊಬ್ಬನ ಜೆ.ಪಿ.ನಗರದಲ್ಲಿ ಪಟಾಕಿ ಸಿಡಿಸುವಾಗ ರಾಕೆಟ್ ಸ್ಫೋಟಗೊಂಡು ಸಂಪೂರ್ಣವಾಗಿ ಮುಖ ಸುಟ್ಟುಕೊಂಡಿದ್ದಾನೆ.
ಅದರಿಂದ ಕಣ್ಣಿಗೂ ಹಾನಿಯಾಗಿದ್ದು, ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದೇ ರೀತಿ ಬೆಂಗಳೂರಿನ ವಿವಿಧೆಡೆ ಸೋಮವಾರ ಅವಘಟಗಳು ಸಂಭವಿಸಿವೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನಗರದಲ್ಲಿ ಸಿಡಿಸಿದ ಪಟಾಕಿಯಿಂದ ಮಕ್ಕಳು ಸೇರಿ 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಪಟಾಕಿ ಹಚ್ಚುವ ವೇಳೆ ಕಣ್ಣಿಗೆ ಹಾನಿಯಾಗಿರುವವರು ಮಿಂಟೋ ಕಣ್ಣಿನ ಆಸ್ಪತ್ರೆ ಹಾಗೂ ನಾರಾಯಣ ನೇತ್ರಾಲಯದಲ್ಲಿ ತಲಾ ಇಬ್ಬರಂತೆ ನಾಲ್ವರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನು ಹಬ್ಬಕ್ಕೂ ಮುನ್ನಾದಿನ ಭಾನುವಾರ ಮೂವರು ಗಾಯಗೊಂಡಿದ್ದರು. ಅವರಲ್ಲಿ ಇಬ್ಬರು ಮಿಂಟೋದಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಕ್ಲೀನಿಕ್‌ಗಳಿಗೆ ಹೋಗಿ ಚಿಕಿತ್ಸೆ ಪಡೆದವರ ಬಗ್ಗೆ ವರದಿ ಸಿಕ್ಕಿಲ್ಲ.
ಆಂಧ್ರಪ್ರದೇಶದ ಅನಂತಪುರ ಮೂಲದ 20 ವರ್ಷದ ಯುವಕ ದಾರಿಯಲ್ಲಿ ಹೋಗುತ್ತಿದ್ದ ವೇಳೆ ಯಾರೋ ಸಿಡಿಸಿದ ಪಟಾಕಿಯಿಂದ ಹೊರಹೊಮ್ಮಿದ ಬೆಂಕಿಯ ಕಿಡಿ ಕಣ್ಣಿಗೆ ತಾಗಿ ಗಂಭೀರವಾಗಿ ಹಾನಿಯಾಗಿದೆ. ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರೇರೇಜರ್‌ಟೌನ್‌ನಲ್ಲಿ 7 ವರ್ಷದ ಬಾಲಕ ಆಟಂಬಾಂಬ್ ಸಿಡಿಸುವ ವೇಳೆ ಅದರ ಕಿಡಿ ಕಣ್ಣಿಗೆ ಹಾರಿದೆ. ಶ್ರೀನಗರದ 18 ವರ್ಷದ ಯುವಕ ನೆರೆಯವರು ಹಚ್ಚುತ್ತಿದ್ದ ಪಟಾಕಿ ನೋಡುತ್ತಿದ್ದ ವೇಳೆ ಕಿಡಿ ಕಣ್ಣಿಗೆ ಹಾರಿ ಗಾಯಗೊಂಡು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.
ಇನ್ನು ಜೆ.ಪಿ.ನಗರದ 10 ವರ್ಷದ ಬಾಲಕನ ಮುಖ ಸಂಪೂರ್ಣ ಸುಟ್ಟುಹೋಗಿದ್ದು, ಕಣ್ಣಿಗೂ ಹಾನಿಯಾಗಿದೆ. ಬಾಲಕನಿಗೆ ವಿಕ್ಟೋರಿಯಾದ ಸುಟ್ಟಗಾಯಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.