ನ್ಯೂಡೆಲ್ಲಿ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿರುವ ಯುವತಿ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಇಡೀ ದೇಶಾದ್ಯಂತ ಆಕ್ರೋಶಕ್ಕೆ ಗುರಿಯಾಗಿರುವಂತೆಯೇ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ ನಿಯೋಗ ಇಂದು ( ಶನಿವಾರ) ಸಂತ್ರಸ್ಥೆಯ ಕುಟುಂಬವನ್ನು ಭೇಟಿ ಮಾಡಲಿದೆ.
ಪಕ್ಷದ ಸಂಸದರೊಂದಿಗೆ ರಾಹುಲ್ ಗಾಂಧಿ ಮಧ್ಯಾಹ್ನ ಹತ್ರಾಸ್‌ಗೆ ಭೇಟಿ ನೀಡಲಿದ್ದು, ಅಮಾನುಷ ರೀತಿಯಲ್ಲಿ ಹಲ್ಲೆಗೊಳಗಾಗಿ ಮೃತಪಟ್ಟಿರುವ 19 ವರ್ಷದ ಹೆಣ್ಣುಮಗಳ ಕುಟುಂಬ ಸದಸ್ಯರನ್ನು ಭೇಟಿ ಮಾಡುವುದಾಗಿ ಕಾಂಗ್ರೆಸ್ ಮುಖಂಡ ಕೆ. ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಈ ಮಧ್ಯೆ ಹತ್ರಾಸ್ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಗ್ರಾಮವನ್ನು ಬ್ಲಾಕ್ ಮಾಡಿರುವ ಪೊಲೀಸರು, ಮಾಧ್ಯಮಗಳಿಗೂ ಅವಕಾಶ ನೀಡುತ್ತಿಲ್ಲ.ಆದಾಗ್ಯೂ, ಖಾಸಗಿ ಚಾನೆಲ್ ವೊಂದು ಸಂತ್ರಸ್ತೆಯ ಕುಟುಂಬ ಸದಸ್ಯರೊಬ್ಬರನ್ನು ಭೇಟಿ ಮಾಡಿದ್ದು, ತಮ್ಮನ್ನು ಭಾರಿ ಪೊಲೀಸ್ ಭದ್ರತೆಯಲ್ಲಿ ಇಡಲಾಗಿದೆ. ಅಧಿಕ ಒತ್ತಡ ಹಾಗೂ ಭಯದಲ್ಲಿ ಬದುಕುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಅತ್ಯಾಚಾರಿಗಳ ಬೆನ್ನಿಗೆ ನಿಂತಿದ್ದು, ನೊಂದವರ ಕೂಗು ಈ ಸರ್ಕಾರ ಕೇಳಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಲ್ಲಿ ಬಡವರಿಗೆ ಒಂದು ನ್ಯಾಯ ಬಲ್ಲಿದರಿಗೆ ಒಂದು ನ್ಯಾಯ ಎಂಬ ಅಲಿಖಿತ ನೀತಿ ಜಾರಿಗೆ ಬಂದಂತೆ ಕಾಣಿಸುತ್ತಿದೆ. ಹೀಗಾದರೆ ಜನಸಾಮಾನ್ಯರು ಬದುಕುವುದಾದರೂ ಹೇಗೆ ಎಂದು ಕಿಡಿಕಾರಿದ್ದಾರೆ.