ಅರಣ್ಯ ಅಧಿಕಾರಿಗಳ ಕಣ್ಣಿಗೆ ಬೀಳದ ಚಿರತೆ ಗ್ರಾಮಸ್ಥರ ಮೊಬೈಲ್‌ನಲ್ಲಿ ಮಾತ್ರ ಸೆರೆ!
ಹನೂರು: ಅರಣ್ಯ ಇಲಾಖೆಯವರ ಕಣ್ಣಿಗೆ ಬೀಳದ ಚಿರತೆ ಗ್ರಾಮಸ್ಥರ ಮೊಬೈಲ್ ಕ್ಯಾಮರಾದಲ್ಲಿ ಮಾತ್ರ ಸೆರೆಯಾಗುತ್ತಿದೆ ಎಂದು ಅರಣ್ಯ ಅಧಿಕಾರಿಗಳಿ ವಿರುದ್ಧ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಎಲ್ಕೆಮಾಳದ ಕೆವಿಎನ್ ದೊಡ್ಡಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವಾರು ದಿನಗಳಿಂದ ಗ್ರಾಮಸ್ಥರ ನಿದ್ರೆಗೆಡಿಸಿರುವ ಚಿರತೆ ಈಗಾಗಲೇ ವ್ಯಕ್ತಿಯೊಬ್ಬರ ಬಲಿ ತೆಗೆದುಕೊಂಡು ಜಾನುವಾರು ಹತ್ಯೆ ಮಾಡಿದೆ. ಆದರೂ ಅರಣ್ಯ ಅಧಿಕಾರಿಗಳು ಈ ಬಗ್ಗೆ ಸರಿಯಾದ ಗಮನ ಹರಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ನಿತ್ಯವೂ ಚಿರತೆಯ ಉಪಟಳದಿಂದ ಕಂಗಲಾಗಿರುವ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಯವರು ಚಿರತೆ ಸೆರೆಗೆ ಮುಂದಾದರೂ ಸಹ ಚಿರತೆ ಹೆಜ್ಜೆಗುರುತೂ ಕೂಡ ಸಿಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ರಾತ್ರಿ ವೇಳೆ ಚಿರತೆ ಗ್ರಾಮದಲ್ಲಿ ಸಂಚಾರ ಮಾಡುವ ದೃಶ್ಯ ಗ್ರಾಮಸ್ಥರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕುತ್ತಿದ್ದಾರೆ. ಅಲ್ಲದೆ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.